ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು. ಆಗಸ್ಟ್,15,2022(www.justkannada.in):  ಸ್ವಾತಂತ್ರ್ಯ ಗಳಿಸುವಲ್ಲಿ ಸಾಕಷ್ಟು ಮಹನೀಯರು ಹಾಗೂ ಹೋರಾಟಗಾರರ ತ್ಯಾಗ, ಬಲಿದಾನ ದೊಡ್ಡದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಂಭಾಗದ ನಡೆದ ಸ್ವಾತಂತ್ರ್ಯ ದಿನಾಚರಣೆ  ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಹೇಳಿದಿಷ್ಟು.

ದೇಶದ ಪ್ರಗತಿಯ ಬಗ್ಗೆ ನಾವು ಅಭಿಮಾನ ಪಡುತ್ತಿರುವ ಸ್ವಾತಂತ್ರ್ಯದ ಆಮೃತಕಾಲದ ಈ ಸನ್ನಿವೇಶದಲ್ಲಿ ಶಿಕ್ಷಣ ರಂಗದಲ್ಲಿರುವ ನಾವು ನಮ್ಮ ಕೊಡುಗೆಯ ಬಗ್ಗೆ ಯೋಚಿಸಬೇಕಾಗಿದೆ. ಒಂದೊಂದು ಶಿಕ್ಷಣ ಸಂಸ್ಥೆಯೂ ತನ್ನ ಕಣ್ಣೆದುರಿಗೆ ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸುವ ಕಡೆಗೆ ಮನಸ್ಸು ಮಾಡಬೇಕಾಗಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಇಡೀ ದೇಶವನ್ನೇ ಎಚ್ಚರಿಸಿ ಸ್ವಾತಂತ್ರ್ಯದ ಅಗತ್ಯವನ್ನು ಒತ್ತಿ ಹೇಳಿದರು. ಅವರು ಸತ್ಯ ಹಾಗೂ ಅಹಿಂಸೆಯನ್ನೇ ಹೋರಾಟದ ಅಸ್ತ್ರಗಳನ್ನಾಗಿ ಬಳಸಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ್ದಂತಹ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಚರಿತ್ರೆಯಲ್ಲಿ ಕಂಡುಬರುವ ಇತರ ವೀರ ಪುರುಷರು ಹಾಗೂ ವೀರ ವನಿತೆಯರನ್ನು ನೆನೆಯುವಾಗ ಭಗತ್ ಸಿಂಗ್, ಮಂಗಲ್ ಪಾಂಡೆ, ಚಂದ್ರಶೇಖರ ಆಜಾದ್, ಸುಭಾಷ್ ಚಂದ್ರ ಬೋಸ್‌, ಸರ್ದಾರ್ ವಲ್ಲಭ್ ಬಾಯಿ ಪಟೇಲ್ ಇವರನ್ನು ಮರೆಯಲಾಗದು.‌‌ ಝಾನ್ಸಿ ಲಕ್ಷ್ಮೀಬಾಯಿ ಹಾಗೂ ಕಿತ್ತೂರು ಚೆನ್ನಮ್ಮರಂಥ ಕ್ರಾಂತಿಕಾರಿ ಮಹಿಳೆಯರು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು ನಿರಂತರ ಸ್ಪೂರ್ತಿಯ ನೆಲೆವೀಡಾಗಿದ್ದಾರೆ ಎಂದರು.

ಇಂದು ಸಂಭ್ರಮದ ದಿನವಾಗಿರುವಂತೆಯೇ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ನೆನೆದು ಅವರಿಗೆ ನಮ್ಮ ಹೃದಯದ ಕೃತಜ್ಞತೆಯನ್ನು ಸಮರ್ಪಿಸುವ ಸಂದರ್ಭವೂ  ಆಗಿದೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವವಾಗಿರುವುದರಿಂದ ಹೆಚ್ಚು ಸಡಗರ, ಸಂಭ್ರಮಗಳಿಗೆ ಕಾರಣವಾಗಿದೆ. ವಿಶ್ವವಿದ್ಯಾನಿಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಈ ಒಂದು ವರ್ಷಪೂರ್ತಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮರಾದವರನ್ನು ನೆನೆದು ನಮ್ಮ ನಮನಗಳನ್ನು ಸಮರ್ಪಿಸಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಬರ್ಮಿಂಗ್‌ ಹಮ್‌ ನಲ್ಲಿ ಮುಕ್ತಾಯವಾದ “ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ನಮ್ಮದೇಶದ ಕ್ರೀಡಾಪಟುಗಳು ದೊಡ್ಡ ರೀತಿಯ ಸಾಧನೆಯನ್ನು ಮಾಡಿದ್ದಾರೆ. ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸಿ ವಿಕ್ರಮವನ್ನು ಸಾಧಿಸಿ ದೇಶಕ್ಕೆ, ನಾಡಿಗೆ ಅದ್ಭುತವಾದ ಯಶಸ್ಸನ್ನು ಗಳಿಸಿಕೊಟ್ಟಿದ್ದಾರೆ. ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ. ಮುಂಬರುವ ಎಲ್ಲಾ ಕ್ರೀಡೋತ್ಸವಗಳಲ್ಲಿ ಭಾರತವು ಭಾಗವಹಿಸಿ ಮೊದಲನೆ ಸ್ಥಾನವನ್ನು ಗಳಿಸುವಂತಾಗಲಿ ಹಾಗೆಯೇ ಸರ್ಕಾರಗಳು ಕ್ರೀಡಾಪಟುಗಳಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ನೀಡುವಂತಾಗಲಿ ಆಶಿಸುತ್ತೇನೆ ಎಂದರು.

ಎಲ್ಲರಿಗೂ ಗುಣಮಟ್ಟದ  ಶಿಕ್ಷಣವನ್ನು ನೀಡುವ ಮೂಲಕ ನಮ್ಮ ರಾಷ್ಟ್ರವನ್ನು ಸುಸ್ಥಿರ ಮತ್ತು ಜ್ಞಾನ ಸಮಾಜವಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಅಂತರ್ ಶಿಸ್ತೀಯ ಮತ್ತು ಬಹುಶಿಸ್ತೀಯ ಶಿಕ್ಷಣ ಇಂದಿನ ಗಮನದ ಕೇಂದ್ರದಲ್ಲಿದೆ. ಹಿಂದೆ ಇದ್ದ ಪದ್ಧತಿಯಲ್ಲಿ ಅಂತರ್‌  ಶಿಸ್ತೀಯ ವಿನಿಮಯ ಅಷ್ಟಾಗಿ ಇರಲಿಲ್ಲ. ಈಗಿನ ಪದ್ಧತಿಯಲ್ಲಿ ಅದಕ್ಕೆ ವಿಪುಲವಾದ ಅವಕಾಶವಿದೆ. ನಮ್ಮ ವಿಶ್ವವಿದ್ಯಾನಿಲಯವನ್ನು ಒಂದು ಮಾಡಬೇಕಾದಲ್ಲಿ ನಮ್ಮ ಬೋಧಕರು ಹಾಗೂ ಸಂಶೋಧಕರ ಪಾತ್ರ ದೊಡ್ಡದಿದೆ ಎಂದು ಹೇಳಿದರು

ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: country – freedom –  Mysore University –VC- Prof. G. Hemanth Kumar