ಕೊರೋನಾ ನಿಯಂತ್ರಣ ವಿಫಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್…

ಮೈಸೂರು,ಮೇ,12,2021(www.justkannada.in): ರಾಜ್ಯದಲ್ಲಿ ಕೊರೊನಾ ಪ್ರಕರಣ ನಿಯಂತ್ರಿಸಲು ಹಾಗೂ ಸಾವಿನ ಪ್ರಕರಣ  ತಡೆಯಲು,ಜನರಿಗೆ ಆಕ್ಸಿಜನ್ ಪೂರೈಸಲು ವಿಫಲವಾಗಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.jk

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್, ರಾಜ್ಯದಲ್ಲಿ‌ ಸಾವಿನ ಪ್ರಕರಣಗಳು‌ ಮಿತಿ ಮೀರಿದೆ; ಆರೋಗ್ಯ ಸಚಿವರ ವೈಫಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ,ಆರೋಗ್ಯ ಸಚಿವರು ಲಸಿಕೆ ಇದೆ ಅಂತ ಹೇಳಿದರೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ್ ಅವರು ಲಸಿಕೆ ಕೊಡಲು ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಸಚಿವರು ಯಾರು ಎನ್ನುವ ಅನುಮಾನ‌‌ಮೂಡಿದೆ.18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಕೊಡಲು ಸಾಧ್ಯವಾಗದ ಕಾರಣ ಜನರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ವ್ಯಾಕ್ಸಿನ್,ವೆಂಟಿಲೇಟರ್,ಆಕ್ಸಿಜನ್ ಸಿಗದೆ ಜನರು ತತ್ತರಗೊಂಡಿದ್ದರೂ ಪ್ರಧಾನಮಂತ್ರಿ ನರೇಂದ್ರಮೋದಿ ರಾಜ್ಯಕ್ಕೆ ಅನ್ಯಾಯವೆಸಗುತ್ತಿದ್ದಾರೆ. ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿಕೊಟ್ಟ ಕರ್ನಾಟಕಕ್ಕೆ ಮಾಡಿರುವ ದೊಡ್ಡ ದ್ರೋಹ,ಅನ್ಯಾಯವಾಗಿದೆ. ಕೊರೊನಾ ಎರಡನೇ ಅಲೆ ಜಾಸ್ತಿಯಾಗಿ ನಿತ್ಯ 500ಕ್ಕೂ ಹೆಚ್ಚು ಸಾವು, 50 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದರೂ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

ಕರ್ನಾಟಕಕ್ಕೆ ಬೇಕಾದ ವ್ಯಾಕ್ಸಿನ್ ಕೊಡಲು ಕೇಂದ್ರ ಹಿಂದೇಟು ಹಾಕಲಾಗುತ್ತಿದೆ. ಆಕ್ಸಿಜನ್ ಸಿಗದೆ ನಿತ್ಯ ಸಾವು-ನೋವು ಸಂಭವಿಸುತ್ತಿದ್ದರೂ ಈತನಕ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸಿಲಿಂಡರ್ ಪೂರೈಸದೆ ಇರುವುದು ಅಮಾನವೀಯ. ಕೊರೊನಾ ಎರಡನೇ ಅಲೆ ನಿಯಂತ್ರಿಸಬೇಕಾದ ಪ್ರಧಾನಮಂತ್ರಿ ಮೋದಿ ಪಶ್ಚಿಮಬಂಗಾಳ, ಕೇರಳ, ತಮಿಳುನಾಡು ಚುನಾವಣೆಯಲ್ಲಿ ಪ್ರಚಾರ ತೊಡಗಿದ್ದರಿಂದ ಸೋಂಕು ಹೆಚ್ಚಾಗಲು ಕಾರಣವಾಯಿತು.

ಕರ್ನಾಟಕದಲ್ಲಿ ಎರಡನೇ ಅಲೆಯನ್ನು ತಡೆಗಟ್ಟಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದು ವರ್ಷದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಕಾಲವಕಾಶ ಇದ್ದರೂ ನಿರ್ಲಕ್ಷ್ಯವಹಿಸಲಾಯಿತು. ರಾಜ್ಯಕ್ಕೆ ಅಗತ್ಯವಿರುವ ವ್ಯಾಕ್ಸಿನ್ ಕಳುಹಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ಬಿಜೆಪಿ ಸಂಸದರು,ಕೇಂದ್ರ ಸಚಿವರು ವಿಫಲವಾಗಿದ್ದಾರೆ. ಪ್ರಧಾನಿ ಮೋದಿ ಎದುರು ಮಾತನಾಡುವ ಶಕ್ತಿ,ಧ್ವನಿಯನ್ನು ಕಳೆದುಕೊಂಡಿರುವುದೇ ಕರ್ನಾಟಕವನ್ನು ಕಡೆಗಣಿಸಲು ಕಾರಣವಾಯಿತು ಎಂದು ಹೆಚ್.ಎ ವೆಂಕಟೇಶ್ ಹರಿಹಾಯ್ದರು. Corona -control –failed-KPCC spokesperson -HA Venkatesh - resignation -Health Minister- Dr K Sudhakar.

ರಾಜ್ಯಕ್ಕೆ 2 ಕೋಟಿ ವ್ಯಾಕ್ಸಿನ್ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದ್ದರೂ ಈತನಕ ಸರಬರಾಜು ಮಾಡಿಲ್ಲ. ಸರ್ಕಾರ ಕೇಂದ್ರ ಸರ್ಕಾರವನ್ನ ಕಾಯದೆ ನೇರವಾಗಿ ಖರೀದಿಸಿ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಲಾಕ್‌ ಡೌನ್ ಜಾರಿಗೊಳಿಸಿದ್ದರೂ ಕೊರೊನಾ ಕಂಟ್ರೋಲ್‌ ಗೆ ಬಂದಿಲ್ಲ. ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುವುದು,ಬದಲಿಸುವುದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಒಂದು ರೀತಿಯಲ್ಲಿ ಗೊಂದಲಮಯ ಸರ್ಕಾರವಾಗಿದೆ. ಒಬ್ಬರಿಗೊಬ್ಬರು ಸಮನ್ವಯತೆ ಇಲ್ಲದೆ ಇರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೆಚ್.ಎ ವೆಂಕಟೇಶ್ ಟೀಕಿಸಿದರು.

Key words: Corona -control –failed-KPCC spokesperson -HA Venkatesh – resignation -Health Minister- Dr K Sudhakar.