ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಮಾವೇಶಗಳು ಅಗತ್ಯ – ಸಿಎಂ ಸಿದ್ದರಾಮಯ್ಯ

ದೇವದುರ್ಗ, ಜನವರಿ,13, 2024(www.justkannada.in):  ಸಮುದಾಯಗಳು ಸಮಾವೇಶಗಳ ಮೂಲಕ ಸಂಘಟಿಸಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹೋರಾಡಬೇಕು.ಕುರುಬರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.

ಇಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ  2024 ಸಮಾವೇಶದಲ್ಲಿ  ಮಾತನಾಡಿದರು.

ಸಮಾಜವನ್ನು ವಿಂಗಡಿಸಿ ಸ್ವಾರ್ಥಕ್ಕಾಗಿ ಲಾಭ ಗಳಿಸುವ ಪ್ರಯತ್ನವನ್ನು ಒಂದು ವರ್ಗ ಮಾಡಿತ್ತು ಎಂದು ಮರೆಯಬಾರದು. ಸಮಾಜದಲ್ಲಿ ಅವಕಾಶ ದೊರೆತವರು ಮುಂದುವರೆದರು ಮೇಲ್ಜಾತಿಯವರಾದರು. ಅವಕಾಶ ವಂಚಿತರು ಹಿಂದುಳಿದು ಕೆಳಜಾತಿಯವರಾದರು. ಚಾತುರ್ವಣ  ವ್ಯವಸ್ಥೆಯನ್ನು  ದೇವರು ಮಾಡಲಿಲ್ಲ. ಮನುಷ್ಯನ ಸ್ವಾರ್ಥದಿಂದಾಗಿ ನಾವು ಮಾಡಿಕೊಂಡಿದ್ದೇವೆ. ಮಹಿಳೆಯರೂ ಅವಕಾಶ ವಂಚಿತರಾಗಿದ್ದರು. ಅಂಬೇಡ್ಕರ್ ಅವರು ಎಲ್ಲರಿಗೂ ಶಿಕ್ಷಣ ಕಡ್ಡಾಯ ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶೂದ್ರರಾದರು.  ಸಮಾಜವನ್ನು ವಿಂಗಡಿಸಿ ಸ್ವಾರ್ಥಕ್ಕಾಗಿ ಲಾಭ ಗಳಿಸುವ ಪ್ರಯತ್ನವನ್ನು ಒಂದು ವರ್ಗ ಮಾಡಿತ್ತು ಎಂದು ಮರೆಯಬಾರದು. ಇದರ ಲಾಭ ಪಡೆದವರು ಈಗಲೂ ಆ ಪ್ರಯತ್ನ ವನ್ನು ಮಾಡುತ್ತಿದ್ದಾರೆ. ಶೋಷಣೆಗೆ ಒಳಪಟ್ಟವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು . ಕುರುಬರೂ ಇದರಲ್ಲಿ ಸೇರಿದ್ದಾರೆ ಎಂದರು.

ಶಿಕ್ಷಣದಿಂದ ಸ್ವಾವಲಂಬಿಗಳಾಗು ಸಾಧ್ಯ:

ಮೇಲು, ಕೀಳೆಂದು ಜಾತಿಬೇಧ ಮಾಡುವುದು ನಿರರ್ಥಕ ಎಂದು ಬಸವಾದಿ ಶರಣರು, ಕನಕದಾಸರು ತಿಳಿಸಿದ್ದರು. ಕಾಯಕ ಮತ್ತು ದಾಸೋಹದಂತಹ ಮೌಲ್ಯಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೇವಲ ರಾಜಕೀಯ ಪ್ರಜಾಪ್ರಭುತ್ವ ಅಲ್ಲದೇ ಆರ್ಥಿಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪಿತವಾಗಬೇಕು ಎಂದು ಡಾ. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಹಿಂದುಳಿದವರು ಕೈಗಾರಿಕೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಿ ಮುಖ್ಯ ವಾಹಿನಿಗೆ ಬರಬೇಕು. ಶಿಕ್ಷಣ ಪಡೆದಾಗ ಮಾತ್ರ  ದೌರ್ಜನ್ಯಗಳನ್ನು ಎದುರಿಸಿ ಸ್ವಾವಲಂಬಿಗಳಾಗಲು ಸಾಧ್ಯ ಎಂದರು.

ಶೋಷಿತರ ಪರ ಸದಾ ನಿಲ್ಲುತ್ತೇನೆ

ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಲು ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಶಕ್ತಿ ಯೋಜನೆಯಡಿ 130.28 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 1.17 ಕೋಟಿ ಕುಟುಂಬದ ಯಜಮಾನಿಗೆ ತಲಾ 2000 ರೂ.  ಗೃಹಲಕ್ಷ್ಮಿ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್ , 5 ಕೆಜಿ ಅಕ್ಕಿ  ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬೆಲೆ ಏರಿಕೆಯ ಕಾಲಮಾನದಲ್ಲಿ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಆದ್ದರಿಂದ ಸಾರ್ವತ್ರಿಕ ಮೂಲ ಆದಾಯ ತತ್ವವನ್ನಾಧರಿಸಿ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಇಂತಹ ಜನಪರ ಯೋಜನೆಗಳಿಗೆ ಟೀಕೆಗಳು ಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಶೋಷಿತರು, ಬಡವರು, ದೀನದಲಿತರು, ಅಲ್ಪಸಂಖ್ಯಾತರು, ದುರ್ಬಲವರ್ಗದವರ ಪರ ನಾನು ಸದಾ ನಿಂತಿರುತ್ತೇನೆ ಎಂದರು.

ಚರ್ಚೆಗಳಾಗಲು ಸಮಾವೇಶಗಳು ಅಗತ್ಯ.

ಇತಿಹಾಸ ತಿಳಿಯದವರು ಭವಿಷ್ಯ ವನ್ನು ರೂಪಿಸಲು ಸಾಧ್ಯವಿಲ್ಲ. ಇತಿಹಾಸ ತಿಳಿದವರು ಮಾತ್ರ ಅವರ  ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.  ಹಿಂದೆ ಏನಾಗಿದ್ದೆವು, ಮುಂದೇನಾಗಬೇಕು ಎಂದು ಚರ್ಚೆಗಳಾಗಲು ಇಂಥ ಸಮಾವೇಶಗಳು ಅಗತ್ಯ. ಜಾತಿ ಮಾಡಿದವರೇ ಜಾತಿ ಸಮಾವೇಶ ಮಾಡಬಾರದು ಎನ್ನುತ್ತಾರೆ. ಅಂಥವರ ಬಗ್ಗೆ ಎಚ್ಚರಿಕೆ ಅಗತ್ಯ. ರಾಜಕೀಯ ಚಿಂತಕ ಲೋಹಿಯಾ  ಅವರು ‘ಮುಂದುವರೆದ ಜಾತಿ , ಜಾತಿ ಸಮಾವೇಶ ಮಾಡಿದರೆ ಅದು ಜಾತಿ ಸಮಾವೇಶವಾಗುತ್ತದೆ. ಹಿಂದುಳಿದವರು, ಶೋಷಣೆಗೆ ಒಳಪಟ್ಟವರು ಸಂಘಟನೆಗಾಗಿ ಸಮಾವೇಶ ಮಾಡಿದರೆ ಅದು ಜಾತಿ ಸಮಾವೇಶ ಅಲ್ಲ’ ಎಂದಿದ್ದಾರೆ ಎಂದರು.

ಮೂರು ಮಂತ್ರಗಳನ್ನು ಹಿಂದುಳಿದವರಿಗೆ, ಶೋಷಿತರಿಗೆ ಕೊಟ್ಟಿದ್ದಾರೆ.

ಶಿಕ್ಷಣ, ಸಂಘಟನೆ, ಹೋರಾಟ ಈ ಮೂರೂ ಮಂತ್ರಗಳನ್ನು ಹಿಂದುಳಿದವರಿಗೆ, ಶೋಷಿತರಿಗೆ ಅಂಬೇಡ್ಕರ್ ಕೊಟ್ಟಿದ್ದಾರೆ. ಸಂಘಟನೆ ಮಾಡಿ ಚರ್ಚೆ ಮಾಡದೆ ಹೋದರೆ ಹೋರಾಟ ಮಾಡಲು ಸಾಧ್ಯವಿಲ್ಲ. ಶಿಕ್ಷಣ ಇಲ್ಲದಿದ್ದರೆ ಸಂಘಟನೆ ಹೇಗೆ ಮಾಡಲು ಸಾಧ್ಯ. ಅದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು ಎಂದರು.

Key words: Conventions -necessary -secure –constitutional- rights-CM -Siddaramaiah