ವಿವಾದ ಸೃಷ್ಟಿಸಿದ ರಿಷಭ್​ ಶೆಟ್ಟಿ ಹಾಡಿದ ‘ಬಡವ ರಾಸ್ಕಲ್’ : ಡಾಲಿ ಧನಂಜಯ್​ ಅಭಿಮಾನಿಗಳಿಂದ ಬೇಸರ…

ಬೆಂಗಳೂರು,ನ,5,2019(www.justkannada.in): ಸಿನಿಮಾದಲ್ಲಿ ಬಳಕೆಯಾಗುವ ಹೆಸರು, ಸಂಭಾಷಣೆಗಳು ಚಲನಚಿತ್ರಗಳ ಶೀರ್ಷಿಕೆಗಳಾಗುವುದು ಇತ್ತೀಚಿಗೆ ವಾಡಿಕೆಯಾಗಿಬಿಟ್ಟದೆ. ಆದರೆ ಇಲ್ಲಿ ಸಿನಿಮಾದ ಶೀರ್ಷಿಕೆಯು ಹಾಡೊಂದರ ಸಾಲಾಗಿ ವಿವಾದಕ್ಕೆ ಕಾರಣವಾಗಿದೆ.

ನಟ ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​ ಎಂಬ ಸಿನಿಮಾ ಶೀರ್ಷಿಕೆಯ ಹೆಸರನ್ನು ಬಳಸಿಕೊಂಡ ಹಾಡೊಂದು ಈಗ ವೈರಲ್​ ಆಗಿದ್ದು ಸೋಮವಾರ, ನ.4 ರಂದು ಡಾಲಿ ಅಭಿಮಾನಿಗಳು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟ, ನಿರ್ದೇಶಕ ರಿಷಭ್​ ಶೆಟ್ಟಿ ‘ಒಂಭತ್ತು ಸುಳ್ಳು ಕಥೆಗಳು’ ಎಂಬ ಚಿತ್ರದಲ್ಲಿ ‘ಏನೋ ಬಡವ ರಾಸ್ಕಲ್’ ಎಂದು ಹಾಡಿದ್ದಾರೆ. ಈ ಹಾಡನ್ನು ಕೇಳಿದ ಡಾಲಿ ಅಭಿಮಾನಿಗಳು ಡಾಲಿ ಸಿನಿಮಾದ ಗೀತೆ ಇರಬಹುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇದು ಆ ಸಿನಿಮಾದ ಗೀತೆಯಲ್ಲ ಎಂದು ತಿಳಿದ ಕೂಡಲೆ ಗೀತೆಯನ್ನು ರಚಿಸಿದವರ ಮೇಲೆ ಮತ್ತು ಹಾಡು ಹಾಡಿರುವ ರಿಷಭ್​ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ​

ಕಳೆದ ನ.1 ರಂದು ರಿಷಭ್​ ಹಾಡಿರುವ ರಾಸ್ಕಲ್​ ಗೀತೆಯನ್ನು ಯೂಟ್ಯೂಬ್​ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕುರಿತ ಲೇಖನವೂ ಪ್ರಕಟವಾಯಿತು. ಇದನ್ನು ಕಂಡ ಧನಂಜಯ್​ ಹಾಡಿನ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

“ನಮ್ಮ ಚಿತ್ರಕ್ಕೂ ರಿಷಭ್​ ಅದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಗೀತೆ ಎಂಬುದು ನನಗೆ ಗೊತ್ತಿಲ್ಲ. ಆ ಚಿತ್ರತಂಡಕ್ಕೆ ಶುಭವಾಗಲಿ, ನಮ್ಮ ಚಿತ್ರವನ್ನು ಪ್ರಮೋಟ್​ ಮಾಡಿದ್ದಕ್ಕೆ ಧನ್ಯವಾದಗಳು”, ಎಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ನಂತರದಲ್ಲಿ ಡಾಲಿ ಅಭಿಮಾನಿಗಳು ಗೀತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಯಾವ ಪದದ ಮೇಲೂ ಯಾರಿಗೂ ಹಕ್ಕಿಲ್ಲ. ಯಾರು ಯಾವ ಪದವನ್ನಾದರೂ ಬಳಸಬಹುದು. ಆದರೆ ಎಲ್ಲದಕ್ಕೂ ವೃತ್ತಿ ಧರ್ಮ ಎಂಬುದು ಇದೆ. ಡಾಲಿಯ ಬ.ರಾಸ್ಕಲ್​ ಸಿನಿಮಾ ಬರುತ್ತಿದೆ ಎಂದು ತಿಳಿದ ನಂತರವೂ ಆ ಸಿನಿಮಾ ಶೀರ್ಷಿಕೆಯ ಪದವನ್ನಿಟ್ಟುಕೊಂಡು ಹಾಡು ಮಾಡಿರುವುದು ಸರಿಯಲ್ಲ. ಕನ್ನಡ ಗೊತ್ತಿಲ್ಲದವರಿಗೆ ಈ ಹಾಡನ್ನು ಮಾಡಿದ್ದಾರೆ. ಆದರೆ ಕನ್ನಡ ಗೊತ್ತಿಲ್ಲದವರಿಗೆ ಈ ಹಾಡು ಹೇಗೆ ಅರ್ಥವಾಗುತ್ತದೆ”, ಎಂದು ಮುರುಳಿ ಎಂಬುವವರು ಕಿಡಿಕಾರಿದ್ದಾರೆ.

ಒಂದು ಕಡೆ ಗೀತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ರಿಷಭ್​ ಅವರು ಧನಂಜಯ್​ ಅವರ ಟ್ವೀಟ್​ ನ್ನು ರೀಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ.  “ಧನ್ಯವಾದಗಳು ಗೆಳೆಯ, ತಮ್ಮ ಅಭಿನಯದ  ಬ.ರಾಸ್ಕಲ್  ಚಿತ್ರಕ್ಕೆ ಶುಭವಾಗಲಿ”, ಎಂದು ಹೇಳಿದ್ದಾರೆ.

ಒಂಭತ್ತು ಸುಳ್ಳು ಕಥೆಗಳು ಚಿತ್ರದ ಗೀತೆ ಈ ಮಟ್ಟಿಗೆ ವಿವಾದಕ್ಕೆ ಕಾರಣವಾಗಿದೆ. ರಿಷಭ್​ ಶೆಟ್ಟಿ ಡಾಲಿ ಚಿತ್ರಕ್ಕೂ ಶುಭ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ನಟ ಡಾಲಿ ಧನಂಜಯ್​ ಮುಖ್ಯ ಭೂಮಿಕೆಯಲ್ಲಿರುವ ಬಡವ ರಾಸ್ಕಲ್​ ಚಿತ್ರವು ಒಂದು ಮನರಂಜನಾತ್ಮಕ ಚಿತ್ರವಾಗಿದ್ದು ಶಂಕರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.  ಧನಂಜಯ್​ ನಾಯಕನ ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗುಜ್ಜಾಲ್​ ಪುರುಷೋತ್ತಮ್​ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಧನಂಜಯ್​, ಅಮೃತಾ ಅಯ್ಯಂಗಾರ್​ ಮುಖ್ಯಭೂಮಿಕೆಯಲ್ಲಿದ್ದಾರೆ.

Key words: Controversial- Rishabh Shetty- sings -badava Rascal-Dolly Dhananjay- fans.