ಕಾಂಗ್ರೆಸ್ ನವರು ಇನ್ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡೇ ಓಡಾಡಬೇಕಾಗುತ್ತೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ .

ಹುಬ್ಬಳ್ಳಿ,ಫೆಬ್ರವರಿ,18,2023(www.justkananda.in):  ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ವೇಳೆ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂವು ಇಟ್ಟುಕೊಳ್ಳುವ ಮೂಲಕ ಬಿಜೆಪಿ ಸರ್ಕಾರವನ್ನ ಟೀಕಿಸಿದ್ದರು. ಇದೀಗ ಕಾಂಗ್ರೆಸ್ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಾ ಕಡೆ ಜನ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಹೂವಿಟ್ಟಿದ್ದಾರೆ. ಕಾಂಗ್ರೆಸ್  ನವರು ಇನ್ನು ಮುಂದೆ ಕಿವಿ ಮೇಲೆ ಹೂವಿಟ್ಟುಕೊಂಡು  ಓಡಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಈ  ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇಡೀ ದೇಶದಲ್ಲಿ ಕಾಂಗ್ರೆಸ್ ಜನರಿಂದ ತಿರಸ್ಕೃತಗೊಂಡಿದ್ದರೂ ಸಹ ಕಾಂಗ್ರೆಸ್ ನಾಯಕರು ಬಜೆಟ್ ಮಂಡನೆ ವೇಳೆ ಕಿವಿಯಲ್ಲಿ ಹೂವಿಟ್ಟುಕೊಂಡು ಸದನಕ್ಕೆ ಬಂದಿದ್ದರು.  ಆದರೆ ಎಲ್ಲಾ ಕಡೆ ಜನ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಹೂವಿಟ್ಟಿದ್ದಾರೆ. ಇನ್ಮುಂದೆ ತಾವಾಗಿಯೇ ಹೂವಿಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.

ಪೇಶ್ವೆ ಮೂಲದವರನ್ನ ಸಿಎಂ ಮಾಡಲು ಮುಂದಾಗಿದ್ದಾರೆಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಪ್ರಹ್ಲಾದ್ ಜೋಶಿ, ಇಂತಹ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ನರೇಂದ್ರ ಮೋದಿಯಂತಹ ನಾಯಕರು ಸಿಗೋದು ಶತಮಾನಕ್ಕೊಬ್ಬರು. ಪ್ರಧಾನಿ ನರೇಂದ್ರ ಮೋದಿಯವರ ಕೈಕೆಳಗೆ ಕೆಲಸ ಮಾಡುವುದು ನನ್ನ ಸೌಭಾಗ್ಯ. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ನಂಬರ್ ಒನ್ ಆಗುವತ್ತ ದಾಪುಗಾಲು ಹಾಕುತ್ತಿದೆ ಎಂದರು.

Key words: Congress – with -flowers – their ears -Union Minister -Prahlad Joshi