ಚಿಕ್ಕಬಳ್ಳಾಪುರ, ಜನವರಿ,23,2026 (www.justkannada.in): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿದೆ.
ಇಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜೀವ್ ಗೌಡ ವಿರುದ್ಧದ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದ್ದು ಪ್ರಕರಣದ ಗಂಭೀರತೆ ಮನವರಿಕೆಯಾದ ಹಿನ್ನಲೆಯಲ್ಲಿ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪೌರಾಯುಕ್ತೆ ಅಮೃತಾರಿಗೆ ಜೀವಬೆದರಿಕೆ ಹಾಕಿದ್ದ ರಾಜೀವ್ ಗೌಡ ವಿರುದ್ದ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ನೋಟಿಸ್ ಗೆ ಯಾವುದೇ ಉತ್ತರ ನೀಡಿರಲಿಲ್ಲ. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದ್ದರು.
ಇನ್ನು ತನ್ನ ವಿರುದ್ದ ದಾಖಲಾಗಿರುವ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜೀವ್ ಗೌಡಗೆ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಶಾಕ್ ನೀಡಿತ್ತು. ಪ್ರಕರಣ ಸಂಬಂಧ ಇದುವರೆಗೂ ರಾಜೀವ್ ಗೌಡ ಬಂಧನವಾಗಿಲ್ಲ.
Key words: Officer, Life threat, Congress, suspends, Rajiv Gowda







