ಸರ್ಕಾರಕ್ಕೆ ಕಾಂಗ್ರೆಸ್ ಸೆಡ್ಡು: ಮೇಕೆ’ದಾಟು’ವುದು ಪಕ್ಕಾನಾ…?

ಬೆಂಗಳೂರು,ಜನವರಿ,7,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9ರಿಂದ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದು ಇದಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ. 

ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ, ಮೇಕೆದಾಟು ಯೋಜನೆಗೆ ಒತ್ತಾಯಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಮೊಟಕುಗೊಳಿಸಲು ಈ ಷಡ್ಯಂತ್ರ ರೂಪಿಸಿದೆ ಎಂದೇ ಆರೋಪಿಸುತ್ತಿದೆ.

ಒಂದೆಡೆ ರಾಜ್ಯ ಆಡಳಿತರೂಢ ಬಿಜೆಪಿ ನಾಯಕರು ಕೋವಿಡ್ ಹೆಚ್ಚುತ್ತಿರುವ ಸಮಯದಲ್ಲಿ ಪಾದಯಾತ್ರೆ ಸಲ್ಲದು ಎಂದು ಆಕ್ಷೇಪ ವ್ಯಕ್ತಪಡಿಸಿದರೇ ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು, ಪಾದಯಾತ್ರೆ ತಡೆಯುವ ದುರುದ್ಧೇಶದಿಂದಲೇ ಸರ್ಕಾರ  ವೀಕೆಂಡ್ ಕರ್ಫ್ಯೂನಂತಹ ಕಠಿಣ ನಿಯಮಗಳನ್ನು ಜಾರಿ ಮಾಡಿದೆ ಎಂದು ಆರೋಪಿಸಿದ್ಧಾರೆ.

ಈ ಮಧ್ಯೆ ಕಾಂಗ್ರೆಸ್ ಪಾದಯಾತ್ರೆ ವೇಳೆ ಕೋವಿಡ್ ನಿಯಮಗಳನ್ನ ಉಲ್ಲಂಘಿಸಿದ್ದೇ ಆದರೇ ಕ್ರಮ ಕೈಗೊಳ್ಳುವುದು ಖಚಿತ ಎಂದಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿರುವ ಡಿ.ಕೆ ಶಿವಕುಮಾರ್, ಜೈಲಿಗೆ ಹೋದರೂ ಸರಿಯೇ ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಖಡಕ್ ಆಗಿ ಸವಾಲು ಹಾಕಿದ್ದಾರೆ.

ಈ ಎಲ್ಲದರ ನಡುವೆ ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿರುವ ಕಾಂಗ್ರೆಸ್ ನಾಳೆ ರಾಮನಗರ ಜಿಲ್ಲೆ ಕನಕಪುರದ ಡಿ.ಕೆ ಶಿವಕುಮಾರ್ ಅವರ ನಿವಾಸದಲ್ಲಿ ಮೇಕೆದಾಟು ಪಾದಯಾತ್ರೆ ವಿಚಾರ ಚರ್ಚಿಸುವ ಸಲುವಾಗಿ ಎಲ್ಲಾ ಶಾಸಕರುಗಳ ಸಭೆಯನ್ನ ಕರೆದಿದೆ.  ಸಭೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ನ ಎಲ್ಲಾ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅದ್ದರಿಂದ ನಾಳೆ ಮಧ್ಯಾಹ್ನ 3 ಗಂಟೆಗೆ ಎಲ್ಲರೂ ಸಹ ‘ತಮ್ಮ  ಲಗ್ಗೇಜ್ ಸಮೇತವೇ’ ಕನಕಪುರಕ್ಕೆ ಆಗಮಿಸುವಂತೆ  ಕಾಂಗ್ರೆಸ್ ಕಾರ್ಯದರ್ಶಿ ಈ ತುಕಾರಾಮ್  ಪತ್ರದಲ್ಲಿ ಕೋರಿದ್ದಾರೆ. ಇದನ್ನ ನೋಡಿದರೇ ಸರ್ಕಾರಕ್ಕೆ ಸೆಡ್ಡು ಹೊಡೆದು ಪಾದಯಾಯತ್ರೆಯನ್ನ ಯಶಸ್ವಿಗೊಳಿಸಿಯೇ ತೀರುತ್ತೇವೆ ಎಂಬ ವಿಶ್ವಾಸವನ್ನ ಕಾಂಗ್ರೆಸ್ ಹೊಂದಿದೆ ಎನ್ನಬಹುದು.

Key words: congress-mekedatu-bjp- Government