ಮೈತ್ರಿ ಸರ್ಕಾರಕ್ಕೆ ವರ್ಷ, ಆಚರಣೆಗಿಲ್ಲ ಹರ್ಷ: ಸಂಭ್ರಮಿಸುವ ಬದಲಿಗೆ ಆತಂಕ

ಬೆಂಗಳೂರು:ಮೇ-23:(www.justkannada.in) ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಯುವ ಉದ್ದೇಶವನ್ನು ಘಂಟಾಘೋಷವಾಗಿಯೇ ತಿಳಿಸುತ್ತ 2018ರ ಮೇ 23ಕ್ಕೆ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಂದು ವರ್ಷ ಸವೆಸಿದೆ. ಸಾಮಾನ್ಯವಾಗಿ ವರ್ಷದ ಸಂಭ್ರಮಾಚರಣೆ, ಸಾಧನೆಗಳ ಬೆನ್ನು ತಟ್ಟುವಿಕೆಗಳಿರಬೇಕಿದ್ದ ದಿನವೇ ಕಾಕತಾಳೀಯವಾಗಿ ಲೋಕಸಭಾ ಫಲಿತಾಂಶವೂ ಆಗಮಿಸಿರುವುದು, ಮೋದಿ ಸರ್ಕಾರ ಉರುಳಿಸುವ ತನ್ನ ಘನ ಉದ್ದೇಶ ವಿಫಲವಾದರೆ ಸರ್ಕಾರವೂ ಪತನವಾಗುತ್ತದೆಯೇ? ರಚನೆಯಾದ ವರ್ಷಕ್ಕೆ ಸರಿಯಾಗಿ ಅಧಿಕಾರ ಕಳೆದುಕೊಳ್ಳುತ್ತದೆಯೇ ಎಂಬ ತೂಗುಗತ್ತಿಯಲ್ಲೆ ದಿನ ದೂಡುತ್ತಿದೆ.

ಹಿಂದೆ ಸಿಎಂ ಆದಾಗ ಜನಸಾಮಾನ್ಯರಿಂದ ಸಿಕ್ಕಿದ್ದ ಅಮೋಘ ಪ್ರಶಂಸೆಯ ಗುಂಗಲ್ಲೇ ರಾಷ್ಟ್ರ ರಾಜಕಾರಣದ ಪ್ರಮುಖರಾದ ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಸೇರಿ ಘಟಾನುಘಟಿಗಳ ಸಮ್ಮುಖ ಪ್ರಮಾಣವಚನ ಸ್ವೀಕರಿಸಿದ್ದ ಎಚ್.ಡಿ.ಕುಮಾರಸ್ವಾಮಿ ಇಡೀ ವರ್ಷ ಪ್ರತಿಪಕ್ಷಗಳು, ಅನೇಕ ಪ್ರದೇಶದ ಮತದಾರರು, ಕೇಂದ್ರ ಸರ್ಕಾರದ ಸಂಸ್ಥೆಗಳ ಜತೆಗೆ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸುತ್ತಲೇ ಕಳೆದರು. ಪದೇಪದೆ ಕಾಲೆಳೆಯುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸರ್ಕಾರ ಬಿದ್ದೇ ಹೋಯಿತು ಎನ್ನುವ ಪ್ರತಿಪಕ್ಷ ಬಿಜೆಪಿ ಮಾತಿನ ನಡುವೆಯೂ ಸಾಲಮನ್ನಾ, ಋಣಮುಕ್ತ ಕಾಯ್ದೆ, ಬಡವರ ಬಂಧು, ಜನತಾ ದರ್ಶನ ಮೂಲಕ ವಿಶ್ವಾಸ ಮೂಡಿಸುವ ಪ್ರಯತ್ನವನ್ನೂ ಸಿಎಂ ನಡೆಸಿದರು.

ಸಮನ್ವಯ ಸಮಿತಿ ಎಂಬ ಅಪಹಾಸ್ಯ: ಮೈತ್ರಿ ಸರ್ಕಾರವನ್ನು ಸುಸೂತ್ರವಾಗಿ ಮುನ್ನಡೆಸುವ ಸಲುವಾಗಿ ರಚಿಸಲಾದ ಸಮನ್ವಯ ಸಮಿತಿ ಎಂಬುದು ಯಾವ ಹಂತದಲ್ಲೂ ಸರ್ಕಾರದ ಸಮರ್ಥನೆಗಂತೂ ಬರಲಿಲ್ಲ. ಬದಲಿಗೆ ಅದರ ಅಧ್ಯಕ್ಷರೇ ಆಗಿಂದಾಗ್ಗೆ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದ್ದು ದುರಂತ. ಐದು ವರ್ಷ ಕುಮಾರಸ್ವಾಮಿ ಸಿಎಂ ಎಂದು ಕಾಂಗ್ರೆಸ್ ಬರೆದುಕೊಟ್ಟಿದ್ದರೂ ಅದೇ ಪಕ್ಷದ ಶಾಸಕರು, ಸಚಿವರೂ ಸಿದ್ದರಾಮಯ್ಯ ಸಿಎಂ ಎಂಬ ಮಾತು ನಿಲ್ಲಿಸಲೇ ಇಲ್ಲ. ವರ್ಷವಾದರೂ ಸರ್ಕಾರದ ಸಮಾನ ಕನಿಷ್ಠ ಕಾರ್ಯಕ್ರಮ (ಕಾಮನ್ ಮಿನಿಮಮ್ ಪೋ›ಗ್ರಾಂ) ರೂಪಿಸಲು ಸಾಧ್ಯವಾಗಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕುಳಿತು ಸೃಷ್ಟಿಸಿದ ಗೊಂದಲ ಒಂದೆಡೆಯಾದರೆ, ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದ ಕೂಡಲೆ ರಾಜ್ಯದಲ್ಲಿ ಶುರುವಾದ ಅಲ್ಲೋಲ ಕಲ್ಲೋಲದ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಷ್ಟವಲ್ಲ.

ಸಚಿವ ಸಂಪುಟದಲ್ಲಿನ ಗೊಂದಲ: ಸಚಿವರ ಆಪ್ತ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿ ನೇಮಕದಲ್ಲೂ ಜೆಡಿಎಸ್ ಹಿರಿಯ ನಾಯಕರು ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪ ಸರ್ಕಾರದ ಪ್ರಾರಂಭದಲ್ಲೇ ಗೋಚರಿಸಿತ್ತು. ಪ್ರಮುಖವಾಗಿ ಎಚ್.ಡಿ.ರೇವಣ್ಣ ಅವರನ್ನು ಸೂಪರ್ ಸಿಎಂ ಎಂದು ಅನೇಕರು ದೂರಿದ್ದರು.

ಪ್ರಮುಖ ಯೋಜನೆಗಳು

ರೈತರ ಸಾಲ ಮನ್ನಾ
ಋಣಮುಕ್ತ ಕಾಯ್ದೆ
ಬಡವರ ಬಂಧು ಯೋಜನೆ
ಕಾಯಕ ಯೋಜನೆ
ಐರಾವತ ಯೋಜನೆ
ಕಾವೇರಿ ಆನ್​ಲೈನ್
ಜನತಾ ದರ್ಶನ
ಜನ, ಮಾಧ್ಯಮ ಮೇಲೆ ಕೆಂಗಣ್ಣು

ಇಡೀ ವರ್ಷದಲ್ಲಿ ರಾಜ್ಯದ ವಿವಿಧ ಭಾಗಗಳ ಜನರ ಕುರಿತು ಹಾಗೂ ಮಾಧ್ಯಮಗಳ ಕುರಿತು ಸಿಎಂ ಕುಮಾರಸ್ವಾಮಿ ಬೀರಿದ ಕೆಂಗಣ್ಣಿನ ಮಾತುಗಳು ಅವರ ತೀವ್ರ ಹತಾಶೆಯನ್ನು ತೋರಿಸುವಂತಿದ್ದವು. ಬಿಜೆಪಿ ಜತೆಗೆ ಸರ್ಕಾರ ರಚಿಸಿದಾಗ ಸರ್ಕಾರದ ಒಳಗೆ ಹಾಗೂ ಹೊರಗಿದ್ದ ಸಮಾಧಾನ, ಪ್ರತಿ ಹೆಜ್ಜೆಗೂ ಸಿಗುತ್ತಿದ್ದ ಪ್ರಚಾರ ಈ ಬಾರಿ ಸಿಗದೆ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ದಕ್ಷಿಣ ಕನ್ನಡದ ಜನರಿಗೆ ವಿವೇಕ ಕಡಿಮೆ, ರೈತ ಹೋರಾಟಗಾರ್ತಿಯನ್ನು ‘ಇಷ್ಟು ದಿನ ಎಲ್ಲಿ ಮಲಗಿದ್ದೆ’ ಎಂದು ಕೇಳುವ ಮೂಲಕ ಜನರ ವಿರುದ್ಧವೂ ಸಿಎಂ ಹರಿಹಾಯ್ದರು.

ಕುಮಾರ ಹೇಳಿಕೆಗಳು

ನಾನು ಆರೂವರೆ ಕೋಟಿ ಕನ್ನಡಿಗರ ಮರ್ಜಿಯಲ್ಲಿಲ್ಲ. ಸರ್ಕಾರದಲ್ಲಿನ ವಿಷವನ್ನು ನುಂಗುತ್ತಾ ವಿಷಕಂಠನಾಗಿದ್ದೇನೆ. ನಾನು ಮುಳ್ಳಿನ ಹಾಸಿಗೆಯಲ್ಲಿದ್ದೇನೆ.
ಉತ್ತರ ಕರ್ನಾಟಕದವರೇನು ನನಗೆ ಮತ ಹಾಕಿದ್ದಾರೆಯೇ?, ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಗೂಂಡಾಗಳು
ನಾಲ್ಕು ವರ್ಷ ಎಲ್ಲಿ ಮಲಗಿದ್ದೆ? (ರೈತ ಮಹಿಳೆ ಕುರಿತು)
ಅಲ್ಪಸಂಖ್ಯಾತರಿಗೆ ನೋವುಂಟು ಮಾಡಲೆಂದೆ ಭಾರತ್ ಮಾತಾ ಕಿ ಜೈ ಎಂದು ಬಿಜೆಪಿಯವರು ಘೋಷಣೆ ಕೂಗುತ್ತಾರೆ, ಏರ್​ಸ್ಟ್ರೈಕ್ ಆಗಿಲ್ಲ, ಪಾಕಿಸ್ತಾನದಲ್ಲಿ ಮರ ಬೀಳಿಸಿ ಬಂದಿದ್ದಾರೆ
ಸಿಎಂ ಮೇಲಿನ ಆರೋಪಗಳು

ಪ್ರಧಾನಿ ಮೋದಿ ದಿನದಲ್ಲಿ 18 ಗಂಟೆ ಕೆಲಸ ಮಾಡುತ್ತಿದ್ದರೆ, ಸಿಎಂ ಕುಮಾರಸ್ವಾಮಿ ಪ್ರತಿ ಭಾನುವಾರ ರಜೆ ಹಾಕುತ್ತಾರೆ. ಆದರೆ ಮಗನನ್ನು ಗೆಲ್ಲಿಸಲು ರಾತ್ರಿ ಬೆಳಗೂ ಕೆಲಸ ಮಾಡುತ್ತಾರೆ.
ಆಗಿಂದಾಗ್ಗೆ ಚಿಕಿತ್ಸೆಗೆ ಪ್ರಕೃತಿ ಕೇಂದ್ರಕ್ಕೆ, ಹುಟ್ಟುಹಬ್ಬಕ್ಕೆ ವಿದೇಶ ಪ್ರವಾಸ
ಬೆಂಗಳೂರಿನಲ್ಲೇ ಸ್ವಂತ ಮನೆ, ಸರ್ಕಾರದ ಅಧಿಕೃತ ನಿವಾಸವಿದ್ದರೂ ತಾಜ್ ಹೋಟೆಲ್​ಲ್ಲಿ ವಾಸ್ತವ್ಯ.
8ನೇ ತರಗತಿ ಓದಿದವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿದಾಗಲೇ ಯಾವ ಕೆಲಸ ಯಾರಿಗೆ ನೀಡಬೇಕು ಎಂಬ ಆಡಳಿತದ ಸಾಮಾನ್ಯ ಜ್ಞಾನ ಇಲ್ಲ ಎಂಬುದಕ್ಕೆ ಸಾಕ್ಷಿ.
ಐಟಿ ಇಲಾಖೆ ದಾಳಿಗೂ ಮುನ್ನವೇ ಮಾಹಿತಿ ಯನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸಿ ಕಳ್ಳ ಗುತ್ತಿಗೆದಾರರ ರಕ್ಷಣೆ ಪ್ರಯತ್ನ
ಗುತ್ತಿಗೆದಾರರ ರಕ್ಷಣೆಗೆ ಐಟಿ ಇಲಾಖೆ ವಿರುದ್ಧ ಇಡೀ ಸರ್ಕಾರ ಪ್ರತಿಭಟಿಸಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ
ಪ್ರತಿಪಕ್ಷಕ್ಕೆ ಸರ್ಕಾರ ಪತನದ್ದೇ ಧ್ಯಾನ

ಒಂದೆಡೆ ಸರ್ಕಾರ ತನ್ನೊಳಗಿನ ಬೇಗುದಿ ಆರಿಸಿಕೊಳ್ಳುವಲ್ಲೇ ಒಂದು ವರ್ಷ ಕಳೆದರೆ, 104 ಸದಸ್ಯರನ್ನು ಹೊಂದಿರುವ ಬಿಜೆಪಿ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬುದು ಜಗಜ್ಜಾಹೀರು. ಸರ್ಕಾರ ನಾಳೆ ಬೀಳುತ್ತದೆ, ನಾಳಿದ್ದು ಬೀಳುತ್ತದೆ ಎಂದು ಭವಿಷ್ಯ ನುಡಿಯುತ್ತ ಜಪ ಮಾಡುವುದೇ ಕಾಯಕವಾಗಿತ್ತು. ಬಜೆಟ್ ದಿನ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋ ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದರೂ ಹೇಳಿಕೆಗಳು ಮಾತ್ರ ನಿಲ್ಲಲಿಲ್ಲ. ಬರ ಪರಿಸ್ಥಿತಿ ಕುರಿತು ವರದಿ ಸಿದ್ಧಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಯಡಿಯೂರಪ್ಪ ಅವರ ಮಾತು ಜಾರಿಯಾಗುವ ವೇಳೆಗೆ ಉಪಚುನಾವಣೆ ಅಡ್ಡಬಂತು.

ಆಂಗ್ಲ ಮಾಧ್ಯಮಕ್ಕೆ ವಿರೋಧ

ಮೈಸೂರು: ರಾಜ್ಯದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಆಲೋಚನೆ ಸರಿ ಇಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ರಾಮಕೃಷ್ಣನಗರದಲ್ಲಿ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಇರಬೇಕು. ಸರ್ಕಾರ ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ಮುಂದಾಗಿರುವುದಕ್ಕೆ ನನ್ನ ವಿರೋಧ ಇದೆ. ಈ ವಿಚಾರ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು. ‘ಮಾಧ್ಯಮ’ ಆಯ್ಕೆ ಪಾಲಕರಿಗೆ ಬಿಟ್ಟದ್ದು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳ ಮೇಲೆ ಪರಿಣಾಮ ಬೀರುತ್ತದೆ. ಸಂವಿಧಾನ ತಿದ್ದುಪಡಿ ಮೂಲಕ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಹಾಗೂ ಏಕರೂಪದ ಶಿಕ್ಷಣ ದೊರೆಯುವಂತೆ ಮಾಡಬೇಕು. ಇದಕ್ಕೆ ಎಲ್ಲ ರಾಜ್ಯಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಾನು ಮೊದಲಿನಿಂದಲೂ ಕನ್ನಡದ ಪರವಾಗಿ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದು ಹೇಳಿದರು. ಜಗತ್ತಿನ ಯಾವುದೇ ಭಾಷೆಯನ್ನಾದರೂ ಕಲಿಯಿರಿ. ಆದರೆ, ಮಾಧ್ಯಮ ಕನ್ನಡವಾಗಿರಬೇಕೆಂಬುದು ನನ್ನ ಅಭಿಪ್ರಾಯ. ಇಂಗ್ಲಿಷ್ ಹೃದಯದ ಭಾಷೆಯಾಗಲು ಸಾಧ್ಯವಿಲ್ಲ. ಕನ್ನಡಕ್ಕೆ ಮಾತ್ರ ಆ ಶಕ್ತಿ ಇದೆ. ಹೀಗಾಗಿ ಕನ್ನಡ ಮಾಧ್ಯಮ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಕೃಪೆ: ವಿಜಯವಾಣಿ

ಮೈತ್ರಿ ಸರ್ಕಾರಕ್ಕೆ ವರ್ಷ, ಆಚರಣೆಗಿಲ್ಲ ಹರ್ಷ: ಸಂಭ್ರಮಿಸುವ ಬದಲಿಗೆ ಆತಂಕ
congress-jds-allaince-cm-hd-kumaraswamy-coalition-govt-one-year