ಬೆಂಗಳೂರು,ಡಿಸೆಂಬರ್,30,2025 (www.justkannada.in): ರಾಜ್ಯದಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗುತ್ತಿದೆ ಎಂಬ ಬಿಜೆಪಿ ಪಕ್ಷದ ಆರೋಪ ಖಂಡನೀಯ ಮತ್ತು ಆಕ್ಷೇಪಾರ್ಹ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಗುಡುಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ವಾಸ್ತವವಾಗಿ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಭಾರತದ ಅನೇಕ ರಾಜ್ಯಗಳು ಮಾದಕ ವಸ್ತು ಬಿಕರಿ ಮತ್ತು ತಯಾರಿಕೆಯ ಮೂಲಸ್ಥಾನಗಳಾಗಿವೆ ಎನ್ನುವುದಕ್ಕೆ ರಾಶಿ ರಾಶಿ ದಾಖಲೆಗಳಿವೆ. ಪಂಜಾಬ್, ಹರಿಯಾಣ, ಗುಜರಾತ್, ಬಿಹಾರ, ಉತ್ತರಪ್ರದೇಶ ಮುಂತಾದ ರಾಜ್ಯಗಳ ಯುವಜನತೆ ಡ್ರಗ್ಸ್ ವ್ಯಸನಿಗಳಾಗಲು ಬಿಜೆಪಿ ದುರಾಡಳಿತ ಮತ್ತು ಈ ಪಕ್ಷದ ನಾಯಕರ ಹಣದಾಸೆ ಕಾರಣ ಎನ್ನುವುದನ್ನು ನಮ್ಮ ರಾಜ್ಯದ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಮರೆಮಾಚಿದಂತಿದೆ ಎಂದು ಬಿಜೆಪಿ ನಾಯಕರಿಗೆ ಕುಟುಕಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಎಲ್ಲಾ ಡ್ರಗ್ಸ್ ಪ್ರಕರಣಗಳ ಹಿಂದೆ ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರದವರ ಕೈವಾಡ ಹೆಚ್ಚು ಇರುವುದನ್ನು ಸಮರ್ಥ ಗೃಹ ಸಚಿವ ಮತ್ತು ಹಿರಿಯ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಬಯಲಿ ಗೆಳೆದಿದ್ದಾರೆ. ಇದರಿಂದ ಬೆಚ್ಚಿಬಿದ್ದಿರುವ ಬಿಜೆಪಿ, ಈ ವಾಸ್ತವಾಂಶ ಮುಚ್ಚಿಡಲು ದಲಿತರೇ ಆಗಿರುವ ಛಲವಾದಿ ನಾರಾಯಣಸ್ವಾಮಿ ಅವರ ಮೂಲಕ ಪೋಸ್ಟರ್ ಬಿಡುಗಡೆ ಮಾಡಿಸಿ ಇವರನ್ನು ರಕ್ಷಾ ಕವಚದಂತೆ ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಛಲವಾದಿ ನಾರಾಯಣ ಸ್ವಾಮಿಯವರೂ ಸಹ ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು ಮರೆಮಾಚಿ ಆತ್ಮ ವಂಚನೆ ಮಾಡಿಕೊಂಡಿದ್ದಾರೆ ಎನ್ನುವುದು ಸತ್ಯ ಸಂಗತಿ ಎಂದು ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಉದ್ಯಮಿ ಅದಾನಿಗೆ ಸೇರಿದ ಮಂದರಾ ಬಂದರಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಎಷ್ಟು ಲಕ್ಷ ಕೋಟಿ ಮೌಲ್ಯದ ಎಷ್ಟು ಟನ್ ಡ್ರಗ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಲೋಕಸಭೆ, ರಾಜ್ಯಸಭೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರವೇ ಅಧಿಕೃತ ಅಂಕಿ ಅಂಶ ನೀಡಿದೆ. ಇದನ್ನು ಛಲವಾದಿ ಸೇರಿದಂತೆ ಇತರ ಬಿಜೆಪಿ ನಾಯಕರು ಗಮನಿಸಿದರೆ ಇವರಿಗೆ ಜ್ಞಾನೋದಯ ವಾದೀತು!
ಗುಜರಾತ್ ಸೇರಿದಂತೆ ದೇಶ ವ್ಯಾಪಿ ಮಾದಕ ವಸ್ತು ಜಾಲ ಹರಡಲು ಮಂದರಾ ಬಂದರು ಮೂಲ ಕಾರಣವಾಗಿದೆ. ಆದರೂ ಈ ಉದ್ಯಮಿಯ ಮೇಲೆ ಇಡಿ, ಸಿಬಿಐ, ಐಟಿ ಮುಂತಾದ ಸಂಸ್ಥೆಗಳ ದಾಳಿ ಇರಲಿ, ಸ್ಥಳೀಯ ಪೊಲೀಸರ ತನಿಖೆ ಸಹ ನಡೆದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇಂತಹ ಅತಿದೊಡ್ಡ ಮಾದಕ ವಸ್ತು ಜಾಲದ ಮುಕ್ತ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಹಾಗೂ ಗುಜರಾತ್ ಬಿಜೆಪಿ ಸರ್ಕಾರದ ಬಗ್ಗೆ ಛಲವಾದಿ ಮತ್ತು ತಂಡ ಮೊದಲು ದನಿ ಎತ್ತಬೇಕಿತ್ತು. ಆದರೆ ಇದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿದೆ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೃಹ ಸಚಿವರು ಬಿಜೆಪಿ ಆಡಳಿತವಿರುವ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು, ವಾತಾವರಣ ಹದಗೆಡಿಸುತ್ತಿರುವ ಡ್ರಗ್ ಪೆಡ್ಲರ್ ಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ನಾಯಕರು ತಳಮಳಿಸುವಂತಾಗಿದೆ. ಈ ನಗ್ನ ಸತ್ಯದ ಅರಿವಿದ್ದರೂ ಸಹ ಗೃಹ ಸಚಿವರ ಬಗ್ಗೆ ಮಾತನಾಡುವ ಮೂಲಕ, ಛಲವಾದಿ ನಾರಾಯಣಸ್ವಾಮಿ ತಮಗೆ ಯಾವ ನೈತಿಕತೆಯೂ ಇಲ್ಲ. ತಾವು ಬಹಳ ನಿರ್ಲಜ್ಜರು ಎನ್ನುವುದನ್ನು ಮತ್ತೆ ಸಾಬೀತು ಮಾಡಿಕೊಂಡಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್.ಎ. ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: BJP, allegation, drug network, state, condemnable, H.A. Venkatesh







