ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖವಿದ್ದಂತೆ: ಈ ಬಾರಿ ಯಾರೊಂದಿಗೂ ಹೊಂದಾಣಿಕೆ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಮೈಸೂರು,ಮಾರ್ಚ್,2,2023(www.justkannada.in): ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ. ಈ ಬಾರಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಈ ಬಾರಿ 120 ಸ್ಥಾನಗಳನ್ನ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿ ದೊಡ್ಡ ತಪ್ಪು ಮಾಡಿದೆ. ಆದರೂ ರೈತರ ಸಾಲಮನ್ನಾ ಮಾಡಿದ ತೃಪ್ತಿ ಇದೆ. ನನ್ನ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸಿದರು. ಆದರೆ ನನ್ನ ಇಮೇಜ್ ಎಲ್ಲೂ ಕಡಿಮೆ ಆಗಿಲ್ಲ. ಈ ಬಾರಿ ಯಾರೊಂದಿಗೂ ಹೊಂದಾಣಿಕೆ‌ ಮಾಡಿಕೊಳ್ಳಲ್ಲ. 120 ಸ್ಥಾನ ಬರುವ ವಿಶ್ವಾಸ ಇದೆ. ಅಂದು ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಈ ಬಿಜೆಪಿ ಇರಲಿಲ್ಲ. ಈಗ ಬಿಜೆಪಿಗರು ಸಹ ಅಧಿಕಾರದ ರುಚಿ ನೋಡಿದ್ದಾರೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಆಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಟ್ರ್ಯಾಪ್ ಆಗಿದ್ದು ಸತ್ಯ. ಕಾಂಗ್ರೆಸ್ಸಿಗೆ ನಮ್ಮಿಂದ ಅನುಕೂಲವಾಗಿದೆ, ಅವರಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಪ್ರಜಾಧ್ವನಿ ಮಾಡುವುದಲ್ಲ. ಜನರಿಗೆ 500 ರೂ. ಕೊಟ್ಟು ಕರೆ ತರುವುದಲ್ಲ, ಬದಲಾಗಿ ಹಳ್ಳಿಗಳಿಗೆ ಹೋಗಿ ಅಭಿವೃದ್ಧಿ ಮಾಡಿ. ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಸರಿಯಾದ ಶೌಚಾಲಯಗಳೇ ಇಲ್ಲ.  ಹಲವಾರು ಭಾಗ್ಯಗಳನ್ನ ಕೊಟ್ಟು ಸಮಾಜವನ್ನ ಉದ್ದಾರ ಮಾಡಿದ್ದೇನೆ ಎನ್ನುತ್ತೀರಾ. ದಿನ ಬೆಳಗಾದರೆ ದಲಿತ ಸಮುದಾಯದ ಜನ ನನ್ನ ಮನೆಯ ಮುಂದೆ ಜನರು ಬಂದು ಸಮಸ್ಯೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಘೋಷಣೆ ಮಾಡಿರುವ ಉಚಿತ ವಿದ್ಯುತ್, 2000 ರೂ. ಕಾರ್ಯಕ್ರಮ ರೂಪಿಸಲು 48 ಸಾವಿರ ಕೋಟಿ ರೂ. ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಕೊಡುವುದಾಗಿ ಘೋಷಣೆ ಮಾಡಿದರು. ಕೇವಲ 5 ಕೆಜಿಗೆ ಆಗುವಷ್ಟು ಹಣ ಮಾತ್ರ ಕೊಟ್ಟರು. 2 ಕೆಜಿ ಹೊರೆ ನನ್ನ ಮೇಲೆ ಬಿತ್ತು ಎಂದು ಕಾಂಗ್ರೆಸ್ ವಿರುದ್ದ ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ನನ್ನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ.ಗಳನ್ನು ನೀಡಿದ್ದೆನು. ಈಗ ಎಲ್ಲಾ ಕಡೆಗಳಲ್ಲಿ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀನೂ ಅಲ್ಲ ಅಂತ ಹೇಳ್ತಾರೆ. ಕಾಲ್ ಮುರುಕ ಕುದುರೆ ಕೊಟ್ಟು  ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ  ಹೆಚ್.ಡಿಕೆ ಪರೋಕ್ಷವಾಗಿ ಕಿಡಿಕಾರಿದರು.

ಹಾಗೆಯೇ ಇದೇ ವೇಳೆ ಬಿಜೆಪಿ ವಿರುದ್ದವೂ ಹರಿಹಾಯ್ದ ಹೆಚ್.ಡಿ ಕುಮಾರಸ್ವಾಮಿ, ಪೆಟ್ರೋಲ್ ಬೆಲೆ ಏರಿಕೆ ಪ್ರಶ್ನಿಸಿದರವನ್ನ ಪಾಕಿಸ್ತಾನಕ್ಕೆ ಹೋಗಿ ಎಂದು ಬಿಜೆಪಿಗರು ಹೇಳುತ್ತಾರೆ. ಮೋದಿ ಕರ್ನಾಟಕಕ್ಕೆ ಬಂದರು ಅವರು ಕರ್ನಾಟಕಕ್ಕೆ ಮಾಡಿದ ಕೆಲಸಗಳು, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಪಕ್ಷ ಕಟ್ಟಿದ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರ ಕಾಲು ಮುರಿದು ಮೂಲೆಗುಂಪು ಮಾಡಿದ್ದಾರೆ. ಸತ್ತು ಸ್ವರ್ಗ ಸೇರಿರುವ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರನ್ನ ಸ್ಮರಿಸುತ್ತಿದ್ದಾರೆ. ಈಗ ಇರುವುದು ಕರ್ನಾಟಕದ ಬಿಜೆಪಿ ಅಲ್ಲ ಅಮಿತ್ ಶಾ, ನಡ್ಡಾ ಹಾಗೂ ಮೋದಿ ಬಿಜೆಪಿ ಎಂದು ಹೆಚ್.ಡಿಕೆ ಟೀಕಿಸಿದರು.

Key words: Congress- BJP – same –coin– Former CM -HD Kumaraswamy-mysore