ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು, ಸುದೀರ್ಘ ಪಯಣ: ಸಮಗ್ರ ಓದಿಗೆ ಒತ್ತು ನೀಡಿ-SP ಮಲ್ಲಿಕಾರ್ಜುನ ಬಾಲದಂಡಿ

ಮೈಸೂರು,ಫೆಬ್ರವರಿ,9,2026 (www.justkannada.in): ಯುಪಿಎಸ್‌ ಸಿ ಮತ್ತು ಕೆಪಿಎಸ್‌ ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದ ಕಡೆ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್‌ನಿಂದ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಅಗತ್ಯ. ಎಷ್ಟೇ ಬುದ್ಧಿವಂತಿಕೆ ಇದ್ದರೂ ನಿರಂತರ ಓದು ಇರಬೇಕು. ಯುವಕರು ಮನಸ್ಸಿಟ್ಟು ಪ್ರಯತ್ನ ಮಾಡಿದಾಗ ಎಂತಹದ್ದೇ ಹುದ್ದೆಯಾದರೂ ಪಡೆಯಬಹುದು. ಹೀಗಾಗಿ ನಿಮ್ಮ ಸಮಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಯಶಸ್ಸುಗಳಿಸಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಸ್ಪರ್ಧೆ ತೀವ್ರವಾಗಿದ್ದು, ಒಂದು ಹುದ್ದೆಗೆ ಅನೇಕ ಅಭ್ಯರ್ಥಿಗಳು ಅರ್ಜಿ ಹಾಕುತ್ತಾರೆ. ಕಳೆದ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಅನೇಕ ಪರೀಕ್ಷೆಗಳನ್ನು ನಡೆಸದಿದ್ದರೂ, ಇದೀಗ ಎಲ್ಲವನ್ನೂ ಆಯೋಜಿಸಲು ತೀರ್ಮಾನಿಸಿದೆ. ಒಳಮೀಸಲಾತಿ ಗೊಂದಲಗಳು ಬಹುತೇಕ ಪರಿಹಾರವಾಗಿವೆ. ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಓದಿಗೆ ಗಮನ ಹರಿಸಬೇಕು. ಶ್ರೀಮಂತರು ಅಥವಾ ದುಡ್ಡು ಇರುವವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ನಕಾರಾತ್ಮಕ ಚಿಂತನೆ ಬೇಡ. ಕುರಿ ಕಾಯುವವರು, ಬಡ ಕಾರ್ಮಿಕರೂ ಮತ್ತು ಅವರ ಮಕ್ಕಳು ಸಹ ಯುಪಿಎಸ್‌ ಸಿ ಪಾಸ್ ಮಾಡಿರುವ ಉದಾಹರಣೆಗಳಿವೆ ಎಂದು ಸಕಾರಾತ್ಮಕ ಸಂದೇಶ ನೀಡಿದರು.

ಕಾಲೇಜಿನ ಯುವಕರು ಕ್ಯಾಂಪಸ್ ಗಳಲ್ಲಿ ಇನ್ನಿತರ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ಓದಿನ ಕಡೆ ಗಮನ ಹರಿಸಿ. ಸಾಮಾಜಿಕ ಮಾಧ್ಯಮದ ಹಿಂದೆ ಓಡದೆ ನಿಮ್ಮ ಗುರಿ ಹಿಂದೆ ಓಡಿ ಎಂದರು.

ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಎ.ಪೋಟೆ ಅವರು ಮಾತನಾಡಿ, ಯುಪಿಎಸ್‌ ಸಿ ಅಂತಹ ಪರೀಕ್ಷೆಗಳಲ್ಲಿ ಕನ್ನಡದ ಯುವಕ, ಯುವತಿಯರು ಹೆಚ್ಚೆಚ್ಚು ಪಾಲ್ಗೊಂಡು ಕೆಲಸ ಗಿಟ್ಟಿಸಿ, ರಾಜ್ಯದ ಹಿರಿಮೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಸ್ವಯಂ ಉದ್ಯೋಗಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಆದರೂ ಸಹ ಮಧ್ಯಮ ವರ್ಗದ ಯುವ ಜನತೆ ಸರ್ಕಾರಿ ಕೆಲಸದ ಕಡೆ ಹೆಚ್ಚು ಮುಖ ಮಾಡುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಉದ್ಯೋಗದ ಭದ್ರತೆ, ಖಾಸಗಿ ವಲಯದಂತೆ ಇಲ್ಲ ಯಾವಾಗ ಕೆಲಸ ಹೋಗುತ್ತದೆ ಎಂಬ ಭಯವಿರುವುದಿಲ್ಲ. ಸ್ಥಿರ ಸಂಬಳ ಮತ್ತು ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಸಿಗುತ್ತವೆ, ಪಿಂಚಣಿ ಸೌಲಭ್ಯ, ಜೊತೆಗೆ ಸಾಫ್ಟ್‌ ವೇರ್ ಅಥವಾ ಕಾರ್ಪೊರೇಟ್ ಕಂಪನಿಗಳಿಗೆ ಹೋಲಿಸಿದರೆ ಇಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳಬಹುದು ಎಂಬ ದೃಷ್ಟಿಯಿಂದ ಸರ್ಕಾರಿ ಕೆಲಸದ ಕಡೆ ಹೆಚ್ಚು ಗಮನ ಹರಿಸಿದೆ. ಈ ಕಲ್ಪನೆ ತಪ್ಪು. ಇಲ್ಲಿ ಕೇವಲ ಸ್ಪರ್ಧಾತ್ಮಕ ಅಷ್ಟೆ. ಆದರೆ ಖಾಸಗಿ ವಲಯದಲ್ಲಿ ಸೃಜನಾತ್ಮಕತೆಗೆ ಹೆಚ್ಚು ಅವಕಾಶವಿದೆ. ಹೀಗಾಗಿ ಖಾಸಗಿ ಕೆಲಸಗಳ ಕಡೆಗೂ ಹೆಚ್ಚು ಗಮನ ಹರಿಸಿ ಎಂದು ಸಲಹೆ ನೀಡಿದರು.

ಆದರೂ ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮುಖ್ಯವಾಗಿ ಶ್ರದ್ಧೆಯಿಂದ ಕಠಿಣವಾಗಿ ನಿರಂತರವಾಗಿ ಅಭ್ಯಸಿಸಿ. ಪಠ್ಯಕ್ರಮದ ಎಲ್ಲ ಅಂಶಗಳನ್ನು ತಿಳಿದಿರಬೇಕು. ಮೊದಲು ಪೂರ್ವಭಾವಿ ಪರೀಕ್ಷೆಗೆ ಒತ್ತು ನೀಡಿ, ಬಳಿಕ ಮುಖ್ಯ ಪರೀಕ್ಷೆಗೆ ಗಮನ ಹರಿಸಿ. ಎನ್‌ಸಿಆರ್‌ಟಿ ಪುಸ್ತಕದ 7,8,9ನೇ ತರಗತಿಯ ಪಠ್ಯಕ್ರಮವನ್ನು ಪೂರ್ಣಪಟ್ಟಿಯಾಗಿ ಓದಿಕೊಳ್ಳಿ. ಅದೇ ನಿಮಗೆ ತಳಮಟ್ಟದ ಅಡಿಪಾಯ. ಇದು ನಿಮಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಸಮರ್ಥವಾಗಿ ಬಳಸುವುದು ಅಭ್ಯರ್ಥಿಯ ಯಶಸ್ಸಿಗೆ ಪ್ರಮುಖ ಅಡಿಪಾಯ. ಕರ್ನಾಟಕದಲ್ಲಿ ಪರೀಕ್ಷೆಗಳು ಕೇವಲ ಜ್ಞಾನವನ್ನಷ್ಟೇ ಅಲ್ಲದೆ, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನೂ ಒರೆಗೆ ಹಚ್ಚುತ್ತವೆ. ಮೊದಲನೆಯದಾಗಿ, ದ್ವಿಭಾಷಾ ಪ್ರಶ್ನೆಪತ್ರಿಕೆಗಳು (ಕನ್ನಡ ಮತ್ತು ಇಂಗ್ಲಿಷ್) ಇರುವುದರಿಂದ, ಅಭ್ಯರ್ಥಿಯು ಪಾರಿಭಾಷಿಕ ಶಬ್ದಗಳ ಮೇಲೆ ಹಿಡಿತ ಸಾಧಿಸುವುದು ಅವಶ್ಯಕ. ಎರಡನೆಯದಾಗಿ, ಕಡ್ಡಾಯ ಕನ್ನಡ ಪತ್ರಿಕೆಯು ಆಡಳಿತಾತ್ಮಕ ಕೆಲಸಕ್ಕೆ ಅಗತ್ಯವಿರುವ ಭಾಷಾ ಕೌಶಲವನ್ನು ಪರೀಕ್ಷಿಸುತ್ತದೆ. ಪ್ರಾದೇಶಿಕ ಭಾಷೆಗಳ ವೈವಿಧ್ಯತೆಯು ಸಂದರ್ಶನದ ಹಂತದಲ್ಲಿ ಸ್ಥಳೀಯ ಸಮಸ್ಯೆಗಳನ್ನು ವಿವರಿಸಲು ಮತ್ತು ಜನರೊಂದಿಗೆ ಸಂವಹನ ನಡೆಸಲು ಪೂರಕವಾಗಿರುತ್ತದೆ. ಭಾಷಾ ವೈವಿಧ್ಯತೆಯು ವಿವಿಧ ಸಾಹಿತ್ಯಕ ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ಅರಿಯಲು ಸಹಾಯ ಮಾಡುತ್ತದೆ, ಇದು ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಕೆಎಸ್ ಒಯು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ನಿಮ್ಮನ್ನು ನೀವು ನಂಬಿ ಓದಿನ ಕಡೆ ಗಮನ ಹರಿಸಿ, ನಾನು ಐಪಿಎಸ್,ಐಎಎಸ್ /ಕೆಎಎಸ್ ಆಗಬೇಕು ಎಂದು ಕನಸು ಇಟ್ಟುಕೊಂಡು ಅದರ ಕಡೆ ಹೆಚ್ಚು ಹೊತ್ತು ಗಮಹ ಹರಿಸಿ. ನೀವು ನಮ್ಮ ವಿವಿಗೆ ತರಬೇತಿ ಪಡೆಯಲು ಬಂದಿದ್ದೀರಿ ಪರೀಕ್ಷೆಯಲ್ಲಿ ಯಶಸ್ಸುಗಳಿಸೆ ಹೋಗಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಎಸ್. ಆನಂದ್‌ ಕುಮಾರ್, ಹಣಕಾಸು ಅಧಿಕಾರಿ ಡಾ. ಎಸ್. ನಿರಂಜನ್‌ ರಾಜ್, ಅಧ್ಯಯನ ಕೇಂದ್ರದ ಡೀನ್ ಡಾ. ಎನ್.ಆರ್. ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂ‌ರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.

Key words: Competitive exams, KSOU, SP, Mallikarjuna Baladandi