ದೇಶವನ್ನ ವಿಭಜಿಸಲು ಹೊರಟಿರುವ ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು-ಸಚಿವ ಡಾ.ಹೆಚ್.ಸಿ.ಮಹದೇವಪ್ಪ.

ಮೈಸೂರು,ಡಿಸೆಂಬರ್, 28,2023(www.justkannada.in): ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸಮೃದ್ದ ಭಾರತದ ನಿರ್ಮಾಣಕ್ಕೆ ಪೂರಕವಾಗುವಂತೆ ದೇಶದ ಆತ್ಮವಾದ ಸಂವಿಧಾನದ ಆಶಯವನ್ನು ಬಲಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಧರ್ಮ ಮತ್ತು ದೇವರ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಹೊರಟಿರುವ ಕೋಮುವಾದಿ ರಾಜಕಾರಣವನ್ನು ಕೊನೆಗಾಣಿಸಬೇಕಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಸೇವಾದಳ ಸಹಯೋಗದಲ್ಲಿ ಗುರುವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ 138ನೇ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಹಾಗೂ 100 ನೇ ಕಾಂಗ್ರೆಸ್ ಸೇವಾದಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಳುವಳಿಗೆ ಆಗಾಧವಾದ ಶಕ್ತಿ ಇದೆ‌. ಇಂದಿನ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಚಳುವಳಿಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಹೇಳಿದರು.

ಅನೇಕ ಧರ್ಮಗಳು, ವಿವಿಧ ಭಾಷೆಯ ಜನರು ವಾಸಿಸುವ ಬಹುತ್ವದ ಭಾರತಕ್ಕೆ ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ನೀಡಿದೆ. ಇಂದು ಕೋಮುವಾದ, ಮತೀಯವಾದ, ಧರ್ಮಾಂದತೆ, ಸ್ವಾತಂತ್ರ್ಯದ ಉದ್ದೇಶ ಕಾಂಗ್ರೆಸ್ ಹೋರಾಟದ ಆಶಯಗಳನ್ನು ನಾಶ ಮಾಡಲು ಹೊರಟಿದ್ದಾರೆ. ಭಾರತದ ಇಡೀ ಚರಿತ್ರೆಯನ್ನು ತಿರುಚುವ ಕೆಲಸ ಮಾಡಲಾಗುತ್ತದೆ. ನಮ್ಮ ನಾಗರೀಕ ಬದುಕನ್ನು, ಸಾಂಸ್ಕೃತಿಕ ಜೀವನ ನಾಶ ಮಾಡಿ ಬಹುತ್ವಕ್ಕೆ ಭಂಗ ತರುವ ಕೆಲಸ ನಡೆಯುತ್ತಿದೆ. ಹೀಗಾಗಿ ಸರ್ವಾಧಿಕಾರ ಆಡಳಿತವನ್ನು ಕೊನೆಗಾಣಿಸಬೇಕು ಕರೆ ನೀಡಿದರು.

ಕಾಂಗ್ರೆಸ್ ಎಂದರೆ ಒಗ್ಗೂಡುವಿಕೆ ಎಂದರ್ಥ. ಜನರನ್ನು ಒಗ್ಗೂಡಿಸಿ ಜನಶಕ್ತಿಯ ಮೂಲಕ ಪರಕೀಯರು ನಮ್ಮನ್ನು ಆಳುವಿಕೆಯ ವಿರುದ್ಧವಾಗಿ ಕಾಂಗ್ರೆಸ್ ಹೋರಾಟ ಮಾಡಿದೆ. ವಸಹಾತುಶಾಹಿ ಸಾಮ್ರಾಟದ ವಿರುದ್ಧವಾಗಿ ಸಂಘಟನಾತ್ಮಕವಾಗಿ ಅಹಿಂಸೆ ಮತ್ತು ಅಸಹಕಾರ ಚಳುವಳಿಯನ್ನು ಮಾಡಿರುವ ಕಾಂಗ್ರೆಸ್‌ನ ಉದ್ದೇಶ ಕೋಮುಸೌರ್ಹದತೆ ಕಾಪಾಡುವುದು, ಅಸ್ಪೃಶ್ಯತೆ ನಿವಾರಣೆ ಮಾಡುವುದು ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹೋರಾಟ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಮಾಡಿದ್ದಲ್ಲ. ಜನರು ಮತ್ತು ದೇಶದ ಹಿತಕ್ಕಾಗಿ ಮಾಡಿದ ಚಳುವಳಿ. ಕಾಂಗ್ರೆಸ್‌ ನ ಅನೇಕ ನಾಯಕರು ತ್ಯಾಗ, ಬಲಿದಾನಗಳನ್ನು ಮಾಡಿರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಸದಸ್ಯರು ಎಂದೇಳಲು ನಮ್ಮೆಲ್ಲರಿಗೂ ಹಮ್ಮೆ ಇದೆ. ಸಿದ್ಧಾಂತದ ಅನ್ವಯ ಹೋರಾಟಗಳನ್ನು ಕೈಗೊಂಡು ಗುಲಾಮಗಿರಿಯನ್ನು ಕೊನೆಗೊಳಿಸಲಾಗಿದೆ‌ ಎಂದರು.

ಸ್ವಾತಂತ್ರ್ಯ ಹೊರಾಟಕ್ಕೂ ಮೊದಲೇ ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಹಾಗೂ ಬಿಳಿಯರ ನಡುವಿನ ಹೋರಾಟವನ್ನು ಕಾಂಗ್ರೆಸ್ ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ, ನೆಹರು ಹಾಗೂ ವಲ್ಲಭಾಯ್ ಪಟೇಲ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಜನರ ಸ್ಥಿತಿಗತಿಗೆ ಅನುಗುಣವಾಗಿ ನಾವು ಸಂವಿಧಾನ ಪಡೆಯಲು ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ರಚಿಸಿದರು. ಆದರೆ ಇಂದು ಸ್ವಾತಂತ್ರ್ಯ ಸಂಗ್ರಾಮದ ಗೋಜಿಗೆ ಹೋಗದವರು ಇಂದು ಮೂಗು ತೂರಿಸುತ್ತಿದ್ದಾರೆ ಎಂದು ಹೇಳಿದರು.

ಜವಹರ ಲಾಲ್ ನೆಹರು ಅವರಿಗೆ ಬದ್ಧತೆ ಇತ್ತು. ವೈಚಾರಿಕ ಮತ್ತು ವೈಜ್ಞಾನಿಕ ಆಲೋಚನೆ ಮೈಗೂಡಿಸಿಕೊಂಡಿದ್ದರು. ದೇಶವನ್ನು ಮುನ್ನಡೆಸುವ ದಾರಿ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ನೆಹರು ಅವರು ಈ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಅಹರ್ನಶಿ ಶ್ರಮಿಸಿದ್ದಾರೆ. ಸ್ವಾತಂತ್ರ ದೊರೆತಾಗ ದೇಶದ ಶಿಕ್ಷಣ ಸಾಕ್ಷರತೆ ಕೇವಲ ಶೇ.10 ರಷ್ಟಿತ್ತು, ಪ್ರಸ್ತುತ ಶೆ.84 ರಷ್ಟಿದೆ. ಆದರೆ ಶ್ರೇಣಿಕೃತ ಸಮಾಜ ಬಹುಸಂಖ್ಯಾತರನ್ನು ಶಿಕ್ಷಣದಿಂದ ವಂಚಿಸಿತ್ತು. ತಳಸಮುದಾಯಕ್ಕೆ ಮತ್ತು ಶೂದ್ರ ಸಮುದಾಯಗಳಿಗೆ ಶಿಕ್ಷಣ ವಂಚಿಸುವ ಕಾರ್ಯಕ್ರಮ ರೂಪಿಸಿತ್ತು ಎಂದರು.

ಆರೋಗ್ಯ, ಉದ್ಯೋಗ ಹಾಗೂ ಬದುಕಿನ ಅವಶ್ಯಗಳಿಗೆ ಪ್ರೇರಣ ಶಕ್ತಿಯಾಗಿ ಕಾಂಗ್ರೆಸ್ ಕೆಲಸ ಮಾಡಿದೆ‌. ಆಹಾರ ಸ್ವಾವಲಂಬನೆಗಾಗಿ ದೇಶದಲ್ಲೇ ಅತ್ಯಂತ ಬಹುದೊಡ್ಡ ಬಾಕ್ರ ನಂಗಲ್ ಅಣೆಕಟ್ಟು ಕಟ್ಟಿದೆ. ದೇಶವನ್ನು ಸಮೃದ್ಧಿಯಾಗಿ ನಿರ್ಮಿಸಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಿದೆ‌. ಉಳುವವನೇ ಹೊಲದೊಡೆಯ ಕಾಯ್ದೆ ಅನುಷ್ಠಾನ ಮಾಡಿದೆ‌. ಅನಾರೋಗ್ಯದಿಂದಿರುವವರು ಅರೋಗ್ಯವಾಗಬೇಕು, ಅನಕ್ಷರಸ್ಥರು ಅಕ್ಷರಸ್ಥರಾಗಬೇಕು. ಸ್ವಾಭಿಮಾನ ಮತ್ತು ಸ್ವಾವಲಂಬನೆ ಆರ್ಥಿಕ ಸ್ವಾತಂತ್ರ್ಯ ತಳಹದಿಯ ಮೇಲೆ ನಮ್ಮ ಹೋರಾಟ ಮಾಡಬೇಕು ಎಂಬ ಪರಿಕಲ್ಪನೆಯೊಂದಿಗೆ ಕಾಂಗ್ರೆಸ್ ಕೆಲಸ ಮಾಡಿದೆ ಎಂದು ತಿಳಿಸಿದರು.

ನಮ್ಮ ದೇಶದ ಕೃಷಿ, ನೀರಾವರಿ ವ್ಯವಸ್ಥೆ, ಯುವಕರ ಭವಿಷ್ಯ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಹಕ್ಕು, ಅಂತಾರಾಷ್ಟ್ರೀಯ ಹಾಗೂ ಕೈಗಾರಿಕ ನೀತಿಗಳು ಹೇಗಿರಬೇಕು ಎಂಬುದು ಹಾಗೂ ದೇಶದ ಸಂಪನ್ಮೂಲ ಸರಿಸಮಾನವಾಗಿ ಹಂಚುವಲ್ಲಿ ಕಾಂಗ್ರೆಸ್ ಪ್ರಗತಿ ಸಾಧಿಸಿದೆ. ಆದರೆ ಇತ್ತೀಚಿನ ವರ್ಷದಲ್ಲಿ ಏನೂ ಕೆಲಸ ಮಾಡದೆ, ಮಾಡಿರುವ ಕೆಲಸಕ್ಕೆ ಅಪಪ್ರಚಾರ ಮಾಡಿ, ನಮ್ಮ ನಾಯಕರನ್ನು ಅವಹೇಳನ ಮಾಡುವ ಕೋಮುವಾದಿಗಳಿಗೆ ಕಾಂಗ್ರೆಸ್ ತಕ್ಕಪಾಠ ಕಲಿಸಲಿದೆ ಎಂದು ಹೇಳಿದರು.

ಇದೇ ವೇಳೆ ‘ಡೊನೆಟ್ ಫಾರ್ ದೇಶ್’ ವಂತಿಕೆ ಸಂಗ್ರಹ ಅಭಿಯಾನಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ವೈಯಕ್ತಿಕವಾಗಿ 1.38 ಲಕ್ಷ ರೂ. ನೀಡುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ.ತಿಮ್ಮಯ್ಯ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಂ.ಶಿವಣ್ಣ, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Key words: Communal -politics – end – Minister -Dr. HC Mahadevappa-mysore