ಬಡ್ತಿ ಅಡಕತ್ತರೀಲಿ ದೋಸ್ತಿ: ನೌಕರರ ಮರುವ್ಯವಸ್ಥೆ ಸವಾಲು

ಬೆಂಗಳೂರು:ಮೇ-14: ಪರಿಶಿಷ್ಟ ಜಾತಿ, ವರ್ಗಗಳ ಹಾಗೂ ಸಾಮಾನ್ಯ ವರ್ಗದ ನೌಕರರ ಮುಂಬಡ್ತಿ ವಿಚಾರದಲ್ಲಿ ಅಡಕತ್ತರಿಯಲ್ಲಿ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಕೊಂಚ ನಿರಾಳತೆ ತಂದಿತ್ತಾದರೂ ಹಿಂಬಡ್ತಿ-ಮುಂಬಡ್ತಿಯಾಗಿರುವ ನೌಕರರಿಗೆ ಮರುವ್ಯವಸ್ಥೆ ಸೃಷ್ಟಿಸುವ ಮತ್ತೊಂದು ಬೆಟ್ಟದಂತಹ ಸವಾಲು ಎದುರಾಗಿದೆ. ಜತೆಗೆ, ‘ನಮಗೂ ಮೀಸಲಾತಿ ಕೊಡಿ’ ಎಂದು ಧ್ವನಿಯೆಬ್ಬಿಸಿ ಸಾಮಾನ್ಯ ವರ್ಗದ ನೌಕರರೂ ‘ಚಳವಳಿ’ಗೆ ಸಿದ್ಧರಾಗುತ್ತಿರುವುದು ಸರ್ಕಾರವನ್ನು ಚಿಂತೆಗೆ ದೂಡಿದೆ.

2017ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವ ಮುನ್ನ ರಾಜ್ಯದಲ್ಲಿ ಜಾರಿಯಲ್ಲಿದ್ದ ಎಸ್ಸಿ-ಎಸ್ಟಿ ಮೀಸಲಾತಿ ಕಾಯ್ದೆ ಅನ್ವಯವೇ ಬಡ್ತಿ ವ್ಯವಸ್ಥೆ ಮುಂದುವರಿಯಲು ಯಾವುದೇ ಅಡ್ಡಿಯಿಲ್ಲ. ಆದರೆ, 2017ರ ತೀರ್ಪಿನ ನಂತರ 3500ಕ್ಕೂ ಅಧಿಕ ಎಸ್ಸಿ-ಎಸ್ಟಿ ನೌಕರರನ್ನು ಹಿಂಬಡ್ತಿಗೊಳಿಸಿ ಸಾಮಾನ್ಯ ವರ್ಗದ ಉದ್ಯೋಗಿಗಳಿಗೆ ಜ್ಯೇಷ್ಠತೆ ಆಧಾರದಲ್ಲಿ ಮುಂಬಡ್ತಿ ಕೊಡಲಾಗಿದೆ. ಈಗ ಹಿಂಬಡ್ತಿಯಾದ ನೌಕರರಿಗೆ ಮತ್ತೆ ಮುಂಬಡ್ತಿ ಕೊಡಬೇಕಿದೆ. ಸೂಪರ್ ನ್ಯೂಮರರಿ (ಅದೇ ಶ್ರೇಣಿಯ ಹೆಚ್ಚುವರಿ ಹುದ್ದೆ) ಹುದ್ದೆಗಳನ್ನು ಸೃಷ್ಟಿಸುವುದು ಸರ್ಕಾರದ ಮುಂದಿರುವ ಯೋಜನೆ. ಆದರೆ, ಎಸ್ಸಿ-ಎಸ್ಟಿ ನೌಕರರು ಅಥವಾ ಸಾಮಾನ್ಯ ವರ್ಗದ ನೌಕರರು ಯಾರಿಗೆ ಸೂಪರ್ ನ್ಯೂಮರರಿ ಹುದ್ದೆ ಕೊಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. 2017ರ ತೀರ್ಪಿನಂತೆ ಹಿಂಬಡ್ತಿಯಾಗಿರುವ ಎಲ್ಲ ಎಸ್ಸಿ-ಎಸ್ಟಿ ನೌಕರರಿಗೆ ಮತ್ತೆ ಮೊದಲಿನ ಹುದ್ದೆ ಕೊಟ್ಟರೆ ಶೇ.18 (ಎಸ್ಸಿ ಶೇ.15, ಎಸ್ಟಿ ಶೇ.3) ಮೀಸಲಾತಿ ನಿಯಮ ಉಲ್ಲಂಘನೆಯಾಗುತ್ತದೆ.

ಈ ಮೂರರಲ್ಲೇ ಜಾಸ್ತಿ!: ಲೋಕೋಪಯೋಗಿ ಇಲಾಖೆ, ಕೆಪಿಟಿಸಿಎಲ್ ಮತ್ತು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಿಬ್ಬಂದಿ ಹಿಂಬಡ್ತಿ ಮತ್ತು ಮುಂಬಡ್ತಿಗೆ ಒಳಗಾಗಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಅಂದಾಜು 350ರಿಂದ 400 ನೌಕರರಿದ್ದಾರೆ. ಇದರಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಗಳೇ 44 ಇವೆ. 20 ಸೂಪರಿಂಟೆಂಡೆಂಟ್ ಮತ್ತು 50 ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗಳಿವೆ. ಈ ಎಲ್ಲ ಉನ್ನತ ಹುದ್ದೆಗಳಿಗೆ ಕಾನೂನುಬದ್ಧವಾಗಿ ನಿರ್ದಿಷ್ಟ ವೇತನ, ಸೌಲಭ್ಯ ಹಾಗೂ ಜವಾಬ್ದಾರಿ ನಿಗದಿಯಾಗಿದೆ. ಹೆಚ್ಚುವರಿ ಹುದ್ದೆ ಸೃಷ್ಟಿಸಿದರೆ ಹೆಚ್ಚುವರಿ ವೇತನ, ಪ್ರತ್ಯೇಕ ಕಚೇರಿ ಸೇರಿ ಎಲ್ಲ ಸೌಲಭ್ಯವನ್ನು ಹೆಚ್ಚುವರಿಯಾಗಿ ಕೊಡಬೇಕು. ಅದರ ಜತೆಗೆ ಈಗಾಗಲೇ ಒಂದು ಹುದ್ದೆ ಇರುವುದರಿಂದ ಇನ್ನೊಂದು ಹುದ್ದೆಗೆ ಬರುವವರು ನಿರ್ವಹಿಸಬೇಕಾದ ಜವಾಬ್ದಾರಿ ಏನೆಂಬುದನ್ನು ನಿಗದಿಪಡಿಸಬೇಕು.

10 ಅವರಿಗೆ, 24 ಇವರಿಗೆ!: ಕೆಪಿಟಿಸಿಎಲ್​ನಲ್ಲೂ 34 ಮುಖ್ಯ ಇಂಜಿನಿಯರ್ ಹುದ್ದೆಗಳಿವೆ. ಹಿಂಬಡ್ತಿಗೆ ಒಳಗಾಗಿರುವ ಎಸ್ಸಿ-ಎಸ್ಟಿ ನೌಕರರಿಗೆ ಮತ್ತೆ ಶೇ.18ರ ಮೀಸಲಾತಿ ನಿಯಮದಂತೆ ಮುಂಬಡ್ತಿ ಕೊಟ್ಟರೆ 34 ಹುದ್ದೆಯಲ್ಲಿ 8ರಿಂದ 10 ಹುದ್ದೆಗಳನ್ನಷ್ಟೇ ಕೊಡಬೇಕಾಗುತ್ತದೆ. ಉಳಿದ 24 ಹುದ್ದೆಗಳನ್ನು ಸಾಮಾನ್ಯ ವರ್ಗದ ಉದ್ಯೋಗಿಗಳಿಗೇ ಕೊಡಬೇಕು. ಉಳಿದವರಿಗೆ ಏನು ವ್ಯವಸ್ಥೆ ಮಾಡಬೇಕು ಎಂಬ ಪ್ರಶ್ನೆಯೂ ಉದ್ಬವಿಸುತ್ತದೆ.

ಮೀಸಲು ಕಾಯ್ದೆ ಜಾರಿಗೆ ಪಟ್ಟು
ಬೆಂಗಳೂರು: ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ಸರ್ಕಾರಿ ನೌಕರರ ತತ್ಪರಿಣಾಮ ಜ್ಯೇಷ್ಠತೆಯನ್ನು ವಿಸ್ತರಿಸುವ ಕಾಯ್ದೆಯನ್ನು ಶೀಘ್ರವಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್​ಸಿಎಸ್​ಟಿ ನೌಕರರ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರನ್ನು ಶಿವಕುಮಾರ್ ಸೇರಿದಂತೆ ಸಮನ್ವಯ ಸಮಿತಿ ಪದಾಧಿಕಾರಿಗಳು ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ.

ಬೇಡಿಕೆಗಳೇನು?

ಬಿ.ಕೆ. ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನದಿಂದ ಹಿಂಬಡ್ತಿಗೊಳಗಾಗಿದ್ದ ಎಸ್​ಸಿಎಸ್​ಟಿ ನೌಕರರಿಗೆ ಅಂದಿನಿಂದಲೇ ಪೂರ್ವಾನ್ವಯವಾಗುವಂತೆ, ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳ ಹಾಗೂ ಅದೇ ಹುದ್ದೆಯಲ್ಲೆ ಮುಂದುವರಿಸಲು ಆದೇಶ ಹೊರಡಿಸಬೇಕು.
15 ದಿನದಲ್ಲಿ ಹೊಸ ಜ್ಯೇಷ್ಠತಾ ಪಟ್ಟಿಯನ್ನು ರಚಿಸಿ ಇಲಾಖೆಗಳಿಗೆ ಸ್ಪಷ್ಟವಾಗಿ ತಿಳಿಸಬೇಕು.
ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆಯನ್ನು ಯಾವುದೇ ಅಧಿಕಾರಿಗಳು ತಿರುಚಿ ಅನುಷ್ಠಾನ ಮಾಡಿದರೆ ಅಂತಹ ಇಲಾಖೆಗಳ ವಿಷಯ ನಿರ್ವಾಹಕರು ಮತ್ತು ಸಂಬಂಧಿತ ಎಲ್ಲ ಅಧಿಕಾರಿಗಳನ್ನೂ ಜವಾಬ್ದಾರರನ್ನಾಗಿಸಿ ಎಸ್​ಸಿಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು.
ಈ ಹಿಂದೆ ಬಿ. ಕೆ. ಪವಿತ್ರ ಪ್ರಕರಣ ಕುರಿತ ಸುಪ್ರೀಂ ಆದೇಶವನ್ನು ತಿರುಚಿ ಅನುಷ್ಠಾನಗೊಳಿಸಿ ಹಿಂಬಡ್ತಿ ನೀಡಿದ್ದರಿಂದ ನೊಂದು 13 ಅಧಿಕಾರಿಗಳ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕೊಲೆ ಮೊಕದ್ದಮೆ ದಾಖಲಿಸಬೇಕು.
2 ದಿನದಲ್ಲಿ ಹಿಂಬಡ್ತಿ ಆದೇಶ ವಾಪಸ್ ಪಡೆದು, ಒಂದು ವಾರದಲ್ಲಿ ಸ್ಥಳ ನಿಯುಕ್ತಿ ಆದೇಶ ನೀಡಿ, 15 ದಿನದಲ್ಲಿ ಹೊಸ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಎಲ್ಲ ಇಲಾಖೆಗಳಿಗೆ ಸೂಚಿಸಬೇಕು.
ನೌಕರರ ಸಂಘ ಮನವಿ

ಸೇವಾನಿವೃತ್ತಿ ಹೊಂದಲಿರುವ ನೌಕರರ ಪ್ರಕರಣಗಳನ್ನು ಸಹಾ ನುಭೂತಿಯಿಂದ ಪರಿಗಣಿಸಿ ತಡೆ ಹಿಡಿದಿರುವ ಬಡ್ತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಎಚ್.ಕೆ.ರಾಮು ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.

ಸರ್ಕಾರ ಏನು ಮಾಡಬಹುದು?

ವರ್ಷದಿಂದ ಬಡ್ತಿ ಪ್ರಕ್ರಿಯೆ ನಡೆಯದಿರುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಲ್ಲೂ ಸಾಕಷ್ಟು ಹುದ್ದೆ ಖಾಲಿ ಉಳಿದಿವೆ. ಹಿಂಬಡ್ತಿಯಾಗಿರುವ ಎಸ್ಸಿ-ಎಸ್ಟಿ ನೌಕರರಿಗೆ ಮತ್ತೆ ಮುಂಬಡ್ತಿ ಕೊಟ್ಟು ಆ ಹುದ್ದೆಗಳಿಗೆ ಭರ್ತಿ ಮಾಡಬಹುದು.
ಸಾಮಾನ್ಯ ವರ್ಗದ ನೌಕರರನ್ನೂ ಗಮನದಲ್ಲಿರಿಸಿಕೊಂಡು ಶೇ.18 ಮೀಸಲಾತಿ ನಿಯಮದ ಅನ್ವಯ ಎಸ್ಸಿ-ಎಸ್ಟಿ ನೌಕರರಿಗೆ ಮುಂಬಡ್ತಿ ಕೊಟ್ಟು ಹುದ್ದೆ ಸಿಗದವರಿಗೆ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸುವುದು.
ಒಟ್ಟಾರೆ ಎಷ್ಟು ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಕ್ರಿಯಾ ಯೋಜನೆ ಸಿದ್ಧಪಡಿಸಿ ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸುವುದು. ಅನುಮೋದನೆ ಸಿಕ್ಕ ಬಳಿಕ ಹೆಚ್ಚುವರಿ ಹುದ್ದೆ ಸೃಷ್ಟಿ ಪ್ರಕ್ರಿಯೆ ಜಾರಿ.
ಸುಪ್ರೀಂಕೋರ್ಟ್​ನ 2017ರ ಆದೇಶದಂತೆ ಮುಂಬಡ್ತಿಗೆ ಒಳಗಾಗಿರುವ ಸಾಮಾನ್ಯ ನೌಕರರನ್ನು ಮತ್ತೆ ಹಿಂಬಡ್ತಿಗೊಳಿಸಿ ಎಸ್ಸಿ-ಎಸ್ಟಿ ನೌಕರರಿಗೆ ಆ ಜಾಗ ಕೊಡಬಹುದು.
ಸವಾಲುಗಳೇನು?

ಜ್ಯೇಷ್ಠತೆ ಆಧಾರದಲ್ಲಿ ಮುಂಬಡ್ತಿ ಆಗಿರುವುದರಿಂದ ಸಾಮಾನ್ಯ ವರ್ಗದ ನೌಕರರಿಗೆ ಹಿಂಬಡ್ತಿ ಕೊಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಇವರಿಗೆ ಸೂಪರ್ ನ್ಯೂಮರರಿ ಹುದ್ದೆ ನೀಡಿದರೆ ಎಲ್ಲವೂ ಉನ್ನತ ಶ್ರೇಣಿಯ ಹುದ್ದೆಗಳಾಗಿರುವ ಹಿನ್ನೆಲೆಯಲ್ಲಿ ಹೊಸ ವೇತನ, ಕಚೇರಿ ಸೌಲಭ್ಯ, ಕಾರು, ಚಾಲಕ, ಸಹಾಯಕ ಸಿಬ್ಬಂದಿ ಎಲ್ಲವನ್ನೂ ವ್ಯವಸ್ಥೆ ಮಾಡ ಬೇಕು. ಆದರೆ, ಇದಕ್ಕೆ ಆರ್ಥಿಕ ಇಲಾಖೆ ಅನುಮತಿ ಬೇಕು.

ಎಸ್ಸಿ-ಎಸ್ಟಿ ನೌಕರರಿಗೆ ಮೀಸಲಾತಿ ಇರುವಂತೆ ಸಾಮಾನ್ಯ ವರ್ಗದ ನೌಕರರಿಗೂ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಚಳವಳಿ ನಡೆಸಲು ಸಿದ್ಧತೆ ನಡೆದಿದೆ. ಕಾನೂನು ಹೋರಾಟ ಮುಂದುವರಿಸುವ ಕುರಿತು ವಕೀಲರ ಸಲಹೆ ಕೇಳಲಾಗಿದ್ದು, ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

| ಎಂ.ನಾಗರಾಜ್, ಅಧ್ಯಕ್ಷ, ಅಹಿಂಸಾ

ಸರ್ಕಾರಕ್ಕೆ ತಟ್ಟಿದ ಚಳವಳಿ ಬಿಸಿ

ಎಸ್ಸಿ-ಎಸ್ಟಿ ನೌಕರರಿಗೆ ಶೇ.18 ಮೀಸಲಾತಿ ಕೊಟ್ಟಿರುವಂತೆ ಉಳಿದ ಶೇ.82 ಅನ್ನು ಸಾಮಾನ್ಯ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಲು ರಾಜ್ಯಾದ್ಯಂತ ಬೃಹತ್ ಚಳವಳಿ ನಡೆಸಲು ವೇದಿಕೆ ಸಿದ್ಧವಾಗುತ್ತಿದೆ. ಎಸ್ಸಿ-ಎಸ್ಟಿಯಂತೆ ಸಾಮಾನ್ಯ ವರ್ಗಕ್ಕೂ ಮೀಸಲಾತಿ ಕಲ್ಪಿಸಿದರೆ ನ್ಯಾಯಕ್ಕಾಗಿ ಕಾನೂನು ಹೋರಾಟಕ್ಕಿಳಿಯುವ ಪ್ರಮೇಯವೇ ಬರುವುದಿಲ್ಲ. ಸುಪ್ರೀಂ ತೀರ್ಪು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ, ಮೀಸಲಾತಿ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಅಧಿ ಕಾರವಿದೆ. ಪ್ರಮುಖರ ಜತೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಚಳವಳಿ ಆರಂಭಿಸಲಾಗುವುದು ಎಂದು ಅಹಿಂಸಾ ಸಂಘಟನೆ ಎಚ್ಚರಿಸಿದೆ.

ನ್ಯಾಯಾಂಗ ನಿಂದನೆ ತೂಗುಗತ್ತಿ

1999ರಲ್ಲಿ ಹೊರಡಿಸಿರುವ ಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ.3 ಮೀಸಲಾತಿ ಆದೇಶ ಈಗಲೂ ಜಾರಿಯಲ್ಲಿದೆ ಎಂದು ಸರ್ಕಾರ ನಮ್ಮ ಗಮನಕ್ಕೆ ತಂದಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಹೀಗಾಗಿ ಸರ್ಕಾರ ಒಂದು ವೇಳೆ ನಿಯಮ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ.
ಕೃಪೆ:ವಿಜಯವಾಣಿ

ಬಡ್ತಿ ಅಡಕತ್ತರೀಲಿ ದೋಸ್ತಿ: ನೌಕರರ ಮರುವ್ಯವಸ್ಥೆ ಸವಾಲು
coalition-government-facing-sc-st-reservation-in-promotion-problem