ವಸತಿ ಶಾಲೆಗೆ ದಿಢೀರ್ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ: ವ್ಯಾಕರಣ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,5,2024 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು ನಗರದ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ, ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದರು.

SCSP/TSP ಸಭೆಯ ಬಳಿಕ ನೇರವಾಗಿ  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ  ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಶಾಲೆಯಲ್ಲಿನ ಲೋಪಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 250 ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಮೊದಲಿಗೆ 10 ನೇ ತರಗತಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಪಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದ ವಿದ್ಯಾರ್ಥಿಗಳು. ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದು ತಿಳಿಸಿದರು. ಆಗಾಗ ಪಲಾವ್ ಕೊಡ್ತಾರೆ ಎಂದು ವಿದ್ಯಾರ್ಥಿಗಳು ಖುಷಿಪಟ್ಟರು.

ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರು ಸಿಎಂ ಸಿದ್ದರಾಮಯ್ಯಗೆ ವಿವರಿಸಿದರು. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ಸಿಎಂಗೆ ವಿದ್ಯಾರ್ಥಿಗಳು ತಿಳಿಸಿದರು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, MLC ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.‌

ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ: ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ…

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದರು. ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಸಿದ್ದರಾಮಯ್ಯ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನಿಸಿದರು.  ನೀವೇ ಆರಂಭಿಸಿದ್ದು ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95 ರಲ್ಲಿ ಆರಂಭಿಸಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿದರು.

Key words: CM Siddaramaiah, visit, residential school, student