ಮೈಸೂರು,ಜನವರಿ,12,2026 (www.justkannada.in): ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಾಳೆ ತಮಿಳುನಾಡು ಪ್ರವಾಸ ಕೈಗೊಂಡಿದ್ದು ಈ ವೇಳೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಆಗಮಿಸಿ ಇಲ್ಲಿಂದ ತೆರಳಲಿದ್ದಾರೆ. ಹೀಗಾಗಿ ರಾಹುಲ್ ಗಾಂದಿ ಅವರನ್ನ ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಬರಲಿದ್ದಾರೆ.
ನಾಳೆ ಮಧ್ಯಾಹ್ನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಬದಲಾವಣೆಗೆ ರಾಹುಲ್ ಗಾಂಧಿ ಕೆಲ ಕಾಲ ತಂಗಲಿದ್ದಾರೆ. ಈ ಸಂದರ್ಭ ರಾಹುಲ್ ಗಾಂಧಿಗೆ ಸ್ವಾಗತ ಕೋರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಲಿದ್ದಾರೆ. ಈ ಸಂಬಂಧ ಸಿಎಂ ಕಚೇರಿಯ ಟಿಪಿ ಬಂದಿದ್ದು, ಅಲ್ಲಿ ಕೇವಲ ಮಂಡಕಳ್ಳಿ ವಿಮಾನ ನಿಲ್ದಾಣ ಎಂದು ಮಾತ್ರ ಉಲ್ಲೇಖಿಸಲಾಗಿದೆ. ಮಧ್ಯಾಹ್ನದ ಬಳಿಕ ಅಧಿಕಾರಿಗಳ ಸಭೆ ಎಂದು ಹೇಳಲಾಗಿದೆ.
ಮಧ್ಯಾಹ್ನ 2 ಗಂಟೆ( 2.20 ಕ್ಕೆ ಆಗಮನ 2.35 ನಿರ್ಗಮನ) ಸುಮಾರಿಗೆ ಆಗಮಿಸುವ ರಾಹುಲ್ ಗಾಂಧಿ ಬಳಿಕ ನಿಲಗಿರಿ ಜಿಲ್ಲೆಯ ಗೂಡ್ಲುರಿಗೆ ತೆರಳಿ ಖಾಸಗಿ ಶಾಲೆಯ ಗೋಲ್ಡನ್ ಜ್ಯೂಬ್ಲಿ ಸಮಾರಂಭದಲ್ಲಿ ಭಾಗವಹಿಸಿ ಸಂಜೆ ಮತ್ತೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳುವರು.
ನಾಳೆ ಮಧ್ಯಾಹ್ನ ರಾಹುಲ್ ಆಗಮಿಸಿದಾಗ ಸ್ವಾಗತಿಸಿ, ಬಳಿಕ ಸಂಜೆ ಹಿಂದಿರುಗುವಾಗ ಬೀಳ್ಕೊಡುಗೆ ನೀಡಲು(ಸಂಜೆ 5.45 ಕ್ಕೆ ಆಗಮನ,6 ಗಂಟೆಗೆ ನಿರ್ಗಮನ) ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಬರುತ್ತಿರುವುದು. ಇದು ರಾಜಕೀಯ ವಲಯದಲ್ಲಿ ಹಲವು ಅರ್ಥೈಸಿಕೆಗಳಿಗೆ ಕಾರಣವಾಗಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ತಂಗಲಿರುವ ರಾಹುಲ್ ಗಾಂಧಿ ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಖುದ್ದು ಧಾವಿಸುತ್ತಿರುವುದು, ಪಕ್ಷದ ಒಳಗಿನ ಶಕ್ತಿ ಸಮತೋಲನ, ನಾಯಕತ್ವದ ಗೌರವ ಹಾಗೂ ರಾಜಕೀಯ ಸಂದೇಶದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಸಾಮಾನ್ಯವಾಗಿ transit ವೇಳೆ ಇಂತಹ ಪ್ರೋಟೋಕಾಲ್ ಮಟ್ಟದ ಭೇಟಿಗೆ ಉನ್ನತ ಮಟ್ಟದ ಅಧಿಕಾರಿಗಳು ಅಥವಾ ಪಕ್ಷದ ನಾಯಕರು ಹೋಗುವುದು ರೂಢಿ. ಆದರೆ ಈ ಬಾರಿ ಮುಖ್ಯಮಂತ್ರಿಗಳೇ ತಾವೇ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದಾರೆ. ಕೆಲ ನಿಮಿಷಗಳಾದರೂ ರಾಹುಲ್ ಗಾಂಧಿ ಜತೆಗೆ ಸಮಯ ಕಳೆಯುವುದು, “ಹೈಕಮಾಂಡ್ ಗೆ ನಿಷ್ಠೆ, ಕೇಂದ್ರ ನಾಯಕತ್ವದೊಂದಿಗೆ ಆತ್ಮೀಯ ಸಂಬಂಧ” ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸುವ ಉದ್ದೇಶವಿರಬಹುದೇ ಎಂಬ ಅನುಮಾನ ಮೂಡಿದೆ.
ಇನ್ನೊಂದು ಕಡೆ, ರಾಜ್ಯದ ಆಡಳಿತದ ಹೊಣೆ ಹೊತ್ತಿರುವ ಮುಖ್ಯಮಂತ್ರಿ ತಮ್ಮ ದಿನನಿತ್ಯದ ಕಾರ್ಯಕ್ರಮಗಳನ್ನು ಬಿಟ್ಟು ಕೇವಲ ವಿಮಾನ ಬದಲಾವಣೆಯ ಸಂದರ್ಭಕ್ಕೆ ತೆರಳಿರುವುದನ್ನು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಒಟ್ಟಾರೆ, ಈ ಘಟನೆ ಕೇವಲ ಪ್ರೋಟೋಕಾಲ್ ವಿಷಯವಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದ ಒಳರಾಜಕೀಯ, ನಾಯಕತ್ವದ ಮಹತ್ವ, ಹಾಗೂ ಹೈಕಮಾಂಡ್–ರಾಜ್ಯ ಸರ್ಕಾರದ ಸಂಬಂಧದ ರಾಜಕೀಯ ಸಂಕೇತವಾಗಿ ವಿಶ್ಲೇಷಿಸಲಾಗುತ್ತಿದೆ.
Key words: CM Siddaramaiah, Bengaluru, Mysore, welcome, Rahul Gandhi







