ಕಬ್ಬಿನ ದರ ನಿಗದಿ: ನಾವು ರೈತರ ಪರವಾಗಿ ನಿಲ್ಲುತ್ತೇವೆ. ನೀವೂ ಸಿದ್ದರಿರಬೇಕು-ಸಭೆಯಲ್ಲಿ ಸಿಎಂ.ಸಿದ್ದರಾಮಯ್ಯ ಸಲಹೆ

ಬೆಂಗಳೂರು,ನವೆಂಬರ್,7,2025 (www.justkannada.in): ರೈತರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಪ್ರಮುಖವಾಗಿವೆ. ಮತ್ತು ಕಾರ್ಖಾನೆಗಳ ಜವಾಬ್ದಾರಿಯೂ ಇವೆ.ನಾವು ರೈತರ ಪರವಾಗಿ ನಿಲ್ಲುತ್ತೇವೆ. ರೈತರ ಸಮಸ್ಯೆ ಬಗೆಹರಿಸಲು ನೀವೂ ಸಿದ್ದರಿರಬೇಕು. ಕಾರ್ಖಾನೆ ಮಾಲೀಕರ ಸಮಸ್ಯೆಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆಯೂ ಪರಿಶೀಲಿಸೋಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಇಂದು ವಿಧಾನಸೌಧ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ  ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಆರ್ ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕಾರ್ಯ.  ಕೇಂದ್ರ ಸರ್ಕಾರ ದಿನಾಂಕ 6-05-2025ರಲ್ಲಿ ಎಫ್ಆರ್ ಪಿ ನಿಗದಿಪಡಿಸಿದೆ. ಈ ಎಫ್ ಆರ್ ಪಿ ಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಇದೀಗ ಕೇಂದ್ರ ಸರ್ಕಾರ ಸಮಸ್ಯೆ ಹುಟ್ಟು ಹಾಕಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು ಎಂದು  ಸಿಎಂ ಸಿದ್ದರಾಮಯ್ಯ ಹೇಳಿದರು.

ಸಭೆಯ ಮುಖ್ಯಾಂಶಗಳು ಹೀಗಿವೆ…

ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರ ಪರವಾಗಿ ಮುರುಗೇಶ್ ನಿರಾಣಿ ಮಾತನಾಡಿ, ಎಲ್ಲಾ ಸರ್ಕಾರಗಳಲ್ಲೂ ಕಬ್ಬು ಬೆಳೆಗಾರರ ಸಮಸ್ಯೆ ಮುಂದುವರೆಯುತ್ತಾ ಬಂದಿದೆ. ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದವನ್ನು ರಾಜ್ಯ ಸರ್ಕಾರ ನವೀಕರಣ ಮಾಡಿರುವುದಿಲ್ಲ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಯವರಿಂದ ಖರೀದಿಸುವ ವಿದ್ಯುತ್ ಪ್ರತಿ ಯುನಿಟ್ಗೆ ರೂ. 6 ಪಾವತಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಒಪ್ಪಂದ ಮಾಡಬೇಕಿದೆ. ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್ಗೆ 60 ಪೈಸೆ ತೆರಿಗೆ ನಿಗದಿಪಡಿಸಿರುವುದನ್ನು ಕೈಬಿಡಬೇಕು. ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿಮೀ ನಿಗದಿಪಡಿಸಬೇಕು. ಏವಿಯೇಷನ್ ಇಂಧನಕ್ಕೆ ಎಥೆನಾಲ್ ಮಿಶ್ರಣ ಅನುಮತಿಯನ್ನು ಆದಷ್ಟು ಬೇಗನೆ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡಬೇಕು. ಪ್ರಸ್ತುತ ರೈತರಿಗೆ ಎಫ್ಆರ್ಪಿ ಪ್ರಕಾರ ದರ ನೀಡಲಾಗುವುದು. ಹೆಚ್ವುವರಿ ಆದಾಯ ಸಾಧ್ಯವಾದರೆ ಸೀಸನ್ ಮುಗಿದ ಬಳಿಕ ಅದನ್ನು ರೈತರಿಗೆ ಹಂಚಿಕೆ ಮಾಡಲು ಸಿದ್ಧರಿದ್ದೇವೆ ಎಂದರು.

ಎಥೆನಾಲ್ ಎಂಎಸ್ಪಿ ಹೆಚ್ಚಳ ಕುರಿತು ಕೇಂದ್ರಕ್ಕೆ ಮನವಿ ಮಾಡಿದರೂ ಇದುವರೆಗೆ ಹೆಚ್ಚಳ ಮಾಡಿಲ್ಲ. ಇದರಿಂದ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಇದೇ ರೀತಿ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿರುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಇಡೀ ದೇಶಕ್ಕೆ ಕೇವಲ 10ಲಕ್ಷ ಮೆ. ಟನ್ ಮಾತ್ರ ರಫ್ತಿಗೆ ಅನುಮತಿ ನೀಡಲಾಗಿದೆ. ಕಳೆದ ಆರು ವರ್ಷಗಳಿಂದ ಸಕ್ಕರೆ ದರವನ್ನು ಸಹ ಪರಿಷ್ಕರಿಸಿಲ್ಲ. ಆದರೆ ಕಬ್ಬಿನ ದರ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಈಗ ಎಫ್ಆರ್ಪಿ ಪ್ರಕಾರ ರೈತರಿಗೆ ಪಾವತಿ ಮಾಡಲು ಕಷ್ಟ ಪಡಬೇಕಾದ ಪರಿಸ್ಥಿತಿಯಿದೆ. ಆದರೆ ಈ ದರ ಕಾನೂನಾತ್ಮಕವಾಗಿ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಪಾವತಿಸುತ್ತಿವೆ ಎಂದು ಸಕ್ಕರೆ ಕಾರ್ಖಾನೆ ಮಾಲಿಕರ ಸಂಘದ ಅಧ್ಯಕ್ಷರು ತಿಳಿಸಿದರು.

ಕೇಂದ್ರ ಸರ್ಕಾರ FRP ದರಕ್ಕೆ ಪೂರಕವಾಗಿ MSP ದರ ಏರಿಸುತ್ತಿಲ್ಲ. 2019 ರಿಂದ ಕೇಂದ್ರ MSP ದರ ಏರಿಸಿಲ್ಲ. ಎಥೆನಾಲ್ ದರವನ್ನೂ ಏರಿಸಿಲ್ಲ. ನಮ್ಮ ಈ ಸಮಸ್ಯೆ ಬಗ್ಗೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ  ಸಿಎಂ ಸಿದ್ದರಾಮಯ್ಯ, MSP ದರ ಹೆಚ್ಚಿಸುವಂತೆ ಬಹಳ ಹಿಂದೆಯೇ ಕೇಂದ್ರಕ್ಕೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ  MSP ಹೆಚ್ಚಿಸಿಲ್ಲ. ರಾಜ್ಯ ಪ್ರತಿ‌ನಿಧಿಸುವ ಕೇಂದ್ರ ಮಂತ್ರಿಗಳೂ ಕಬ್ಬು ಬೆಳೆಗಾರರಿಗೆ MSP ದರ ಹೆಚ್ಚಿಸುವುದಕ್ಕೆ ಸಹಕರಿಸಲಿಲ್ಲ, ಪ್ರಧಾನಿ ಅವರ ಜೊತೆ ಮಾತಾಡುತ್ತಿಲ್ಲ. ಏನು ಮಾಡೋದು ?

ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕ್ಲಿಷ್ಟಕರವಾಗಿದೆ. ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದನೆ ಮಾಡಿದರೂ ನಾವು ಸಂಕಷ್ಟದಲ್ಲಿದ್ದೇವೆ. ಜೊತೆಗೆ ರೈತರಿಂದ ಕೆಟ್ಟ ಬೈಗುಳ ತಿನ್ನುತ್ತಿದ್ದೇವೆ. ನಾವು ಉದ್ಯೋಗ ಸೃಷ್ಟಿಸಿ ಗ್ರಾಮೀಣ ಆರ್ಥಿಕತೆಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ಆದರೂ ಕೇಂದ್ರದ ನೀತಿಗಳಿಂದಲೂ ನಮಗೆ ನಷ್ಟ ಆಗುತ್ತಿದೆ. ರೈತರಿಂದಲೂ ಒತ್ತಡ ಇದೆ. ಹೀಗಾದಾಗ ನಾವು ಕಾರ್ಖಾನೆ ನಡೆಸುವುದೇ ಕಷ್ಟ ಆಗ್ತದೆ. ಬೇಕಿದ್ದರೆ ಸರ್ಕಾರವೇ ನಮ್ಮ ಕಾರ್ಖಾನೆಗಳನ್ನು ನಡೆಸಲಿ ಎಂದು ಕಾರ್ಖಾನೆ ಮಾಲೀಕರು ತಮ್ಮ ಸಂಕಷ್ಟ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, “ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಎನ್ನುವ ರೈತರ ಪ್ರಶ್ನೆಗೆ ಏನು ಉತ್ತರ ಹೇಳ್ತೀರಿ ಎಂದು ಪ್ರಶ್ನಿಸಿದರು.

ರೈತರ ಬೇಡಿಕೆ ತಕ್ಕಂತೆ ಹಣ ಕೊಡುವುದು ನಮಗೆ ಕಷ್ಟ ಆಗ್ತದೆ. ರಾಜ್ಯ ಸರ್ಕಾರ ನೆರವು ನೀಡಲಿ ಎಂದು ಕಾರ್ಖಾನೆ ಮಾಲೀಕರು ಆಗ್ರಹಿಸಿದರು.

ಈ ವೇಳೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ ಹಾಗಾದರೆ ನೀವೆಲ್ಲಾ ಒಟ್ಟಾಗಿ ಮಾಧ್ಯಮಗಳ ಮುಂದೆ ಸತ್ಯ ಹೇಳಿ. ಈ ಸಮಸ್ಯೆ ಸೃಷ್ಟಿ ಆಗಿರುವುದು, ನೀವುಗಳು ಸಮಸ್ಯೆಯಲ್ಲಿ ಇರುವುದು ಕೇಂದ್ರ ಸರ್ಕಾರದ ಕಾರಣದಿಂದ  ಎನ್ನುವ ಹೇಳಿಕೆ ನೀಡಿ, ಕೇಂದ್ರಕ್ಕೆ ಪತ್ರ ಬರೆಯಿರಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, “MSP ದರ ಹೆಚ್ಚಿಸುವಂತೆ ಒತ್ತಾಯಿಸಿದ” ಪತ್ರ ಪ್ರದರ್ಶಿಸಿದ ಮುಖ್ಯಮಂತ್ರಿಗಳು, ಈ ಪತ್ರದಂತೆ ಪ್ರಧಾನಿಯವರು MSP ಹೆಚ್ಚಿಸಲು ಒತ್ತಾಯಿಸೋಣ ಎಂದರು.

ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಸಿದ್ದವಿದೆ. ಪ್ರಸ್ತುತ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ರೂ.3200 ರೂ. ನಿಗದಿಪಡಿಸಿದ್ದು, (ಕಟಾವು ಮತ್ತು ಸಾಗಾಟ ಹೊರತುಪಡಿಸಿ) ಇದಕ್ಕೆ ಕಾರ್ಖಾನೆಗಳು ಒಪ್ಪಿಕೊಂಡರೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಆಯಾ ಪ್ರದೇಶದ ಇಳುವರಿ ರಿಕವರಿ ಪ್ರಮಾಣದ ಆಧಾರದಲ್ಲಿ ದರವನ್ನು ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಿ.

ಸಹಕಾರಿ ರಂಗದ ಇಐಡಿ ಪ್ಯಾರಿ ಶುಗರ್ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಪ್ರಸ್ತುತ ರೂ.3211ಪಾವತಿಸುತ್ತಿದೆ. ಇದೇ ಮಾದರಿಯಲ್ಲಿ ಉಳಿದ ಕಾರ್ಖಾನೆಗಳಿಗೆ ಯಾಕೆ ಪಾವತಿ ಸಾಧ್ಯವಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್ಪಿ ರೂ.41ಕ್ಕೆ ನಿಗದಿಪಡಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ ಎಂದರು.

ಅವಧಿಗಿಂತ ಮೊದಲು ಕಬ್ಬು ಕಟಾವು ಮಾಡದಿರುವುದು ಸೇರಿದಂತೆ ಕಬ್ಬಿನ ಇಳವರಿ ರಿಕವರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಜಾಗೃತಿ ಮೂಡಿಸುವುದು ಸಕ್ಕರೆ ಕಾರ್ಖಾನೆಗಳ ಜವಾಬ್ದಾರಿಯಾಗಿದೆ.

Key words: Sugarcane, price, fixing, CM Siddaramaiah, meeting