ಸಿಎಂ ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿ- ಬಿ.ಕೆ ಹರಿಪ್ರಸಾದ್ ವಿರುದ್ಧ ಈಶ್ವರಾನಂದಪುರಿ ಸ್ವಾಮೀಜಿ ವಾಗ್ದಾಳಿ.

ಚಿತ್ರದುರ್ಗ,ಸೆಪ್ಟೆಂಬರ್ 12,2023(www.justkannada.in): ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ವಿರುದ್ಧ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಈಶ್ವರಾನಂದಪುರಿ, ಹರಿಪ್ರಸಾದ್ ಪ್ರಬುದ್ಧ ರಾಜಕಾರಣಿ ಹಾಗೇ ಮಾತಾಡಬಾರದಿತ್ತು. ಸಿದ್ಧರಾಮಯ್ಯ ಸಂಪುಟದಲ್ಲಿ ಬಹಳ ಜನ ಕುರುಬರು ಮಂತ್ರಿಗಳಾಗಿರಲಿಲ್ಲ. ಸಿಎಂ ಸಿದ್ಧರಾಮಯ್ಯ ಜಾತಿ ರಾಜಕಾರಣ ಮಾಡಲಿಲ್ಲ. ಸಣ್ಣ ಸಮುದಾಯಗಳಿಗೂ ಅವಕಾಶ ನೀಡಿದರು. ಹರಿಪ್ರಸಾದ್ ಜನರಿಗೆ ತಪ್ಪು ಸಂದೇಶ ರವಾನಿಸಿದ್ದು, ಈ ಬಗ್ಗೆ ನಾವು ಮಾತಾಡದಿದ್ದರೆ ಜನರಿಗೆ ಸತ್ಯ ಗೊತ್ತಾಗುವುದಿಲ್ಲ. ಸಿದ್ಧರಾಮಯ್ಯ ಮನೆಗೆ ಮಾರಿ ಪರರಿಗೆ ಉಪಕಾರಿ ಎಂದು ತಿರುಗೇಟು ನೀಡಿದರು.

ಸಿದ್ಧರಾಮಯ್ಯ ಕೋಟ್ಯಂತರ ಜನರ ಮನಸ್ಸಿನಲ್ಲಿದ್ದಾರೆ. ಒಕ್ಕಲಿಗ, ಲಿಂಗಾಯತರು ಸಿಎಂ ಆದಾಗಿನ ಸಂಪುಟ ನೋಡಿ. ಆಯಾ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಿದ್ದರು. ಸಿದ್ಧರಾಮಯ್ಯ ಎಲ್ಲಾ ಸಮುದಾಯಗಳಿಗೂ ಸ್ಥಾನ ನೀಡಿದ್ದಾರೆ  ಎಂದು ಈಶ್ವರಾನಂದಪುರಿ ಸ್ವಾಮೀಜಿ ಹರಿಹಾಯ್ದರು.

ಸಿದ್ಧರಾಮಯ್ಯ 2ನೇ ಸಲ ಸಿಎಂ ಆಗಿದ್ದಾರೆ. ಹೈಕಮಾಂಡ್ ಹಾಗೂ 135 ಜನ ಶಾಸಕರು ಸೇರಿ ಅವರನ್ನು ಸಿಎಂ ಮಾಡಿದ್ದಾರೆ. ನಿಮ್ಮನ್ನೇಕೆ ಸಿಎಂ ಮಾಡಲಿಲ್ಲ ಎಂದು ಹರಿಪ್ರಸಾದ್​ಗೆ ಪ್ರಶ್ನಿಸಿದ ಈಶ್ವರಾನಂದಪುರಿ ಸ್ವಾಮೀಜಿ, ಸಿದ್ಧರಾಮಯ್ಯ ಮುಖ ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ. ನಿಮ್ಮನ್ನು ನೋಡಿ ಯಾರೂ ಮತ ಹಾಕಿಲ್ಲ ಎಂದು ಕಿಡಿಕಾರಿದರು.

Key words: CM Siddaramaiah – Iswaranandpuri Swamiji-against -BK Hariprasad.