ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದೇ  ನಿಜವಾದ ಶಿಕ್ಷಣ-ಸಿಎಂ ಸಿದ್ದರಾಮಯ್ಯ

ಮೈಸೂರು, ಜನವರಿ, 06(www.justkannada.in):  ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದೇ  ನಿಜವಾದ ಶಿಕ್ಷಣ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.

ಇಂದು ಡಾ. ಕೆ. ಶಿವಕುಮಾರ್ ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಸೆನೆಟ್ ಭವನ ದಲ್ಲಿ ಆಯೋಜಿಸಲಾಗಿದ್ದ ನೂತನ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಶಿವಕುಮಾರ್  ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

ಗುಲಾಮಗಿರಿಯ ಮನಸ್ಥಿತಿ ಕಿತ್ತೊಗೆಯಬೇಕು

ಶಿವಕುಮಾರ್ ಅವರು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಾರೆ.  ಜಾತಿ ಮತ್ತು  ಚಾತುರ್ವರ್ಣ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಇವುಗಳನ್ನು ತಿಳಿದುಕೊಳ್ಳದೆ ಹೋದರೆ ವೈಚಾರಿಕ,  ವೈಜ್ಞಾನಿಕ, ಐತಿಹಾಸಿಕ ಜ್ಞಾನ ಪಡೆದುಕೊಳ್ಳಲಾಗುವುದಿಲ್ಲ. ವೈಚಾರಿಕ,  ವೈಜ್ಞಾನಿಕ ಶಿಕ್ಷಣ ಸಿಗದೇ ಹೋದರೆ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಕಂದಾಚಾರ ಹಾಗೂ ಮೌಢ್ಯಗಳಿಗೆ ದಾಸರಾಗುತ್ತೇವೆ ಎಂದರು. ಶತಶತಮಾನಗಳಿಂದ ಅಸ್ಪೃಶ್ಯತೆ ಹಾಗೂ ಜಾತಿಯ ಕಾರಣಗಳಿಂದ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಮನೆ ಮಾಡಿದೆ, ಇದನ್ನು ಕಿತ್ತೊಗೆಯಬೇಕು  ಎಂದರು.

ಸಾಹೇಬ್ ಅಂಬೇಡ್ಕರ್,  ಮಹಾತ್ಮಾ ಗಾಂಧಿಯವರ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು

ದಲಿತರು ಪತ್ರಕರ್ತರಾಗುವುದು ಬಹಳ ಅಪರೂಪ. ಬಾಬಾ ಸಾಹೇಬ್ ಅಂಬೇಡ್ಕರ್,  ಮಹಾತ್ಮ ಗಾಂಧಿಯವರು ಪತ್ರಕರ್ತರಾಗಿದ್ದರು. ಎಲ್ಲರೂ ಅವರಂತಾಗಲು ಸಾಧ್ಯವಿಲ್ಲ ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಅದನ್ನು ಶಿವಕುಮಾರ್ ಅವರು ಮಾಡಿಕೊಂಡು ಬಂದಿದ್ದಾರೆ ಎಂದರು. ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸಿ ಪರಿಹಾರಗಳನ್ನು ಹುಡುಕುವ ಕೆಲಸವನ್ನು ಪತ್ರಕರ್ತರಾಗಿ ಶಿವಕುಮಾರ್ ಸದಾ ಮಾಡಿದ್ದಾರೆ ಎಂದರು.

ಅವಕಾಶಗಳಿಂದ ವಂಚಿತರಾದವರ ಪರವಾಗಿ ಶಿವಕುಮಾರ್ ಕೆಲಸ ಮಾಡಲಿ

ದಲಿತರ ಪರವಾಗಿ ವಿಧಾನ ಪರಿಷತ್ ನಲ್ಲಿ ಶಿವಕುಮಾರ್ ಕೆಲಸ ಮಾಡಬೇಕು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ  ಸಲಹೆ ನೀಡಿದರು. ಧ್ವನಿಯಿಲ್ಲದವರ , ಅವಕಾಶಗಳಿಂದ ವಂಚಿತರಾದವ ಪರವಾಗಿ ಶಿವಕುಮಾರ್ ಕೆಲಸ ಮಾಡಲಿ ಎಂದರು

ಎಸ್.ಸಿ ಎಸ್ ಪಿ/ಟಿಎಸ್‌ಪಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲಿ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ ಎಸ್.ಸಿ ಎಸ್ ಪಿ/ಟಿಎಸ್‌ಪಿ ಯೋಜನೆಯನ್ನು ರೂಪಿಸಿಲ್ಲ.  ಬಡ್ತಿಯಲ್ಲಿ ಮೀಸಲಾತಿಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ರಾಜ್ಯದಲ್ಲಿ ಸಮಿತಿ  ರಚಿಸಿ ವರದಿಯನ್ನು ಜಾರಿ ಮಾಡಲಾಯಿತು. ಊರ್ಜಿತವೂ ಆಯಿತು. ಕೇಂದ್ರ  ಸರ್ಕಾರ ಏಕೆ ಇದನ್ನು ಜಾರಿ ಮಾಡಬಾರದು ಎಂದು ಪ್ರಶ್ನಿಸಿದರು. ದಲಿತ ಸಮುದಾಯಕ್ಕೆ ಸೇರಿದವರೇ ಇದರ ವಿರುದ್ಧವಾಗಿ ವಾದ ಮಾಡುವುದು ಇದೆ ಎಂದರು.

MNREGA ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಹೆಸರಿಸಿದ್ದಾರೆ.ನಮ್ಮಲ್ಲಿ  ಶೇ. 17% ಎಸ್.ಸಿ ಹಾಗೂ ಶೇ.  11% ಎಸ್ ಟಿ ಸಮುದಾಯದವರಿದ್ದರೂ ಈ ಬಗ್ಗೆ ಮಾತನಾಡಿಲ್ಲ ಎಂದರು.

ಜಿಎಸ್ ಟಿ ಜಾರಿ ಮಾಡಿದ ಕೇಂದ್ರ ಸರ್ಕಾರ ಆರು ಸಾವಿರ ಕೋಟಿಗಳನ್ನು ರಾಜ್ಯಕ್ಕೆ ಕಡಿಮೆ ಮಾಡಿದೆ. MGREGA ಯೋಜನೆಯಡಿ ಕಳೆದ 20 ವರ್ಷಗಳಿಂದ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿತ್ತು. ಈಗ 60:40 ಅನುಪಾತ ನಿಗದಿ ಮಾಡಲಾಗಿದೆ. ಶೇ. 40% ರಾಜ್ಯ ಸರ್ಕಾರ ಭರಿಸಬೇಕಿದ್ದು ಸುಮಾರು 2500 ಕೋಟಿ ನಷ್ಟವಾಗುತ್ತದೆ ಎಂದರು.

ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ

ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ. ಎಲ್ಲರಿಗೂ ಇದು ದೊರೆಯುವವರೆಗೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆ ಅಗತ್ಯ ಎಂದು ಹೇಳಿದರು. ಅಸಮಾನತೆ ಕಡಿಮೆ ಮಾಡಲೆಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಉತ್ಪಾದನಾ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ ಬಂದದ್ದನ್ನು ಎಲ್ಲರೂ ಹಂಚಿಕೊಳ್ಳುವುದೇ ಕಾಯಕ ಮತ್ತು ದಾಸೋಹದ ತತ್ವ ಎಂದರು.

ಮೈಸೂರು ವಿಶ್ವವಿದ್ಯಾಲಯಕ್ಕೆ ವಿಶೇಷ ಗಮನ

ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ,  ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿ ನೀಡಲು ಅನುದಾನ ಬಿಡುಗಡೆ ಮಾಡಿದೆ. ಮೈಸೂರು ವಿವಿ ಸರಿಪಡಿಸಲು ವಿಶೇಷ ಗಮನ ಹರಿಸಿ, ಕ್ರಮ ವಹಿಸಲಾಗುವುದು ಎಂದರು.

ಸಚಿವರಾದ ಹೆಚ್ .ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಶಾಸಕರಾದ ಎ. ಆರ್.ಕೃಷ್ಣಮೂರ್ತಿ,ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್,  ರವಿಶಂಕರ್, ಡಾ: ತಿಮ್ಮಯ್ಯ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Key words: True, education , knowing , social system, CM Siddaramaiah