ಬೆಂಗಳೂರು, ಜನವರಿ,2,2025 (www.justkannada.n): ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಇಂದು ವಿಧಾನಸೌಧದ ಸಭಾಂಗಣದಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ಕ್ಯಾಲೆಂಡರ್ ಮತ್ತು ದಿನಚರಿಯನ್ನು ಬಿಡುಗಡೆಗೊಳಿಸಿ, ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿನ ಬಡವರು, ದಲಿತರು, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ವಿಶೇಷ ಕಾಳಜಿಯಿಂದ ಹಾಗೂ ಹೊಸ ಉತ್ಸಾಹದಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕಿದೆ. ಇಲ್ಲವಾದಲ್ಲಿ ಅಸಮಾನತೆ ಹೋಗಲು ಸಾಧ್ಯವಿಲ್ಲ, ಅಂತೆಯೇ ಅಸಮಾನತೆ ತೊಲಗದೇ, ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವುವೂ ಅಸಾಧ್ಯ ಎಂದು ಹೇಳಿದ್ದನ್ನು ತಿಳಿಸಿದರು.
ಸಮಸಮಾಜಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಅಗತ್ಯ
ಎಲ್ಲರಿಗೂ ಸಮಾನ ಅವಕಾಶ ದೊರೆತು, ಸಮಾಜದ ಮುಖ್ಯವಾಹಿನಿಗೆ ಬರುವಂತಾದಾಗ ಮಾತ್ರ ಸಮಾನತೆ ಬರಲು ಸಾಧ್ಯ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಜಾತಿ ಮತ್ತು ವರ್ಗ ವ್ಯವಸ್ಥೆ ಅಳಿಯಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಲೇಬೇಕು ಎಂದರು.
ಸ್ವಜಾತಿ ಪಕ್ಷಪಾತ ಬೇಡ- ಅಧಿಕಾರಿಗಳಿಗೆ ಸಿಎಂ ಸೂಚನೆ
ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇನ್ನೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ. ಎಲ್ಲಾ ಅಧಿಕಾರಿಗಳು ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ದೃಷ್ಟಿಕೋನ ಜಾತ್ಯಾತೀತವಾಗಿರಬೇಕು. ಯಾವುದೇ ಕಾರಣಕ್ಕೂ ಸ್ವಜಾತಿ ಪಕ್ಷಪಾತ ಮಾಡಬಾರದು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕು
ಬಡವರ ಒಳಿತಿಗೆ ಕರ್ತವ್ಯ ನಿರ್ವಹಿಸುವಾಗ, ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕಲ್ಲದೇ, ವ್ಯವಸ್ಥೆಯನ್ನು ಸರಿ ಮಾಡುವ ಪ್ರಯತ್ನವನ್ನು ಮಾಡಬೇಕು. ತಹಶೀಲ್ದಾರ್, ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಬಡವರ ಬಗ್ಗೆ ಕರುಣೆಯಲ್ಲ, ಸಂವಿಧಾನ ಅವರಿಗೆ ನೀಡಿರುವ ಅವರ ಹಕ್ಕುಗಳ ರಕ್ಷಣೆ ಮಾಡುವ ಪ್ರಯತ್ನ ಮಾಡಬೇಕು ಎಂದರು.
ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ
ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಒದಗಿಸಲಾಗುವುದು. ಪದೋನ್ನತಿ ಸೇರಿದಂತೆ ಸಂಘದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಭೈರತಿ ಸುರೇಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: equal society, built, work secularly, CM Siddaramaiah







