ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ‘ಅನ್ನ’ ವೇಸ್ಟ್ ಮಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ ಕಳವಳ

ಬೆಂಗಳೂರು ಅಕ್ಟೋಬರ್,16,2025 (www.justkannada.in): ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು.  ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ. ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಮಾಡುತ್ತಿದ್ದೇವೆ ಎಂದು ಸಿಎಂ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದರು.

ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ.  ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವೇಸ್ಟ್ ಆಗುತ್ತಿದೆ. ಹೆಚ್ಚೂಕಡಿಮೆ 360 ಕೋಟಿ ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು.

ಗೊತ್ತಿದ್ದೂ ಗೊತ್ತಿದ್ದೂ ಆಹಾರ ವೇಸ್ಟ್ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ. ಅನ್ನ ವೇಸ್ಟ್ ಮಾಡುವುದು ಪಾಪದ ಕೆಲಸ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ‌ ಎಂದರು.

ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ: ಸಿಎಂ

ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು, ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಕಾಳ ಸಂತೆ ಮಾರಾಟ: ಕಠಿಣ ಕ್ರಮ

ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು.

ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮ ,ನಿಮ್ಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಎಂದರು.

Key words: wasting, 943 tons, food, CM Siddaramaiah