ಮೈಸೂರು, ಅಕ್ಟೋಬರ್ 15,2025 (www.justkannada.in): ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಿಯಾಂಕ್ ಖರ್ಗೆಯವರು ಖುದ್ದು ತಿಳಿಸಿದ್ದು, ಸರ್ಕಾರಿ ಸ್ಥಳಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇಂದು ಮೈಸೂರು ಏರ್ ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿನಲ್ಲಿ ಆರ್.ಎಸ್.ಎಸ್. ನಿಷೇಧದ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು. ಹಾಗೆಯೇ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಕ್ಷಣೆ ಒದಗಿಸಲಾಗುವುದು ಎಂದರು.
ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ್ ಖರ್ಗೆ ಅವರು ಹೆದರುವುದಿಲ್ಲ. ನಾನೂ ಹೆದರುವುದಿಲ್ಲ ಎಂದರು.
ಸಮೀಕ್ಷೆ: ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ತಡವಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದರು.
ಎಲ್ಲ ಶಾಸಕರಿಗೂ ಅನುದಾನ
ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಶ್ರೀನಿವಾಸಪುರ ಶಾಸಕರು ಮೊರೆ ಹೋಗಿರುವ ಬಗ್ಗೆ ಮಾತನಾಡಿ, ಜೆಡಿಎಸ್ ನವರು ನಮ್ಮ ಶಾಸಕರಿಗೆ ಅನುದಾನ ನೀಡಿದ್ದರೇ ? ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದು, ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ ಎಂದರು.
ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಬಿಜೆಪಿಯವರು ತಾಕತ್ತಿದ್ದರೆ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣಾ ಸಂದರ್ಭದಲ್ಲಿಯೂ ಬಿಜೆಪಿಯವರು ತಾಕತ್ತಿದ್ದರೆ ಬನ್ನಿ ಎಂದಿದ್ದರು. ಆದರೆ ಸೋತು ಹೋದರು ಎಂದು ಕಾಲೆಳೆದರು.
Key words: threats, Priyank Kharge, not afraid , CM, Siddaramaiah