ಬೆಂಗಳೂರು ಅಕ್ಟೋಬರ್, 14,2025 (www.justkannada.in): ಜಾತಿ ತಾರತಮ್ಯದ ಸಮಾಜದಲ್ಲಿ ಚಲನೆ ಇಲ್ಲ. ಚಲನೆ ಸಿಗಬೇಕಾದರೆ ವೈಜ್ಞಾನಿಕ ಮನೋಭಾವ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ. ಅವಕಾಶ ಸಿಗಬೇಕು ಅಷ್ಟೆ. ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ನಿಮ್ಮ ಹಾಗೂ ಸಮಾಜದ ಪ್ರಗತಿ ಸಾಧ್ಯ. ಈ ದಿಕ್ಕಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಸಮಾಜವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ವಿಜ್ಞಾನದ ಓದು ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ. ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯ. ವಿಜ್ಞಾನ ಓದಿದವರೂ ಮೂಢನಂಬಿಕೆ ಮತ್ತು ಕಂದಾಚಾರಕ್ಕೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆಯಾಗಿದೆ ಎಂದರು.
ಬಹಳ ಹಿಂದೆಯೇ ಬಸವಾದಿ ಶರಣರು ಮೌಢ್ಯ , ಕಂದಾಚಾರಗಳ ವಿರುದ್ಧ ಕರೆ ನೀಡಿದರು. ಆದರೆ, ಇವತ್ತಿಗೂ ಮೌಢ್ಯ ಹೋಗಿಲ್ಲ. ಏಕೆಂದರೆ ನಮ್ಮದು ಜಾತಿ ತಾರತಮ್ಯದ ಸಮಾಜ ಆಗಿರುವುದರಿಂದ ಇದಕ್ಕೆ ಚಲನೆ ಇಲ್ಲ. ಪಟ್ಟಭದ್ರರು ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಮೌಢ್ಯವನ್ನು ಬಿತ್ತುತ್ತಾರೆ ಎಂದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ “ಮೌಢ್ಯ ನಿಷೇಧ ಕಾಯ್ದೆ” ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಮೌಢ್ಯ ಮತ್ತು ಮೌಢ್ಯ ಹಂಚುವ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ ಎಂದರು.
ವಿಜ್ಞಾನ ಓದಿದವರಿಗೆಲ್ಲಾ ವೈಜ್ಞಾನಿಕ ಮನೋಭಾವ ಇಲ್ಲದಿರುವುದು ದುರಂತ. ವಿಜ್ಞಾನ ಓದಿಯೂ ಹಣೆಬರಹ ಮತ್ತು ಕರ್ಮ ಸಿದ್ದಾಂತ, ಗ್ರಹಚಾರಗಳನ್ನೆಲ್ಲಾ ನಂಬುತ್ತಾರೆ ಎಂದರೆ ಇವರು ವಿಜ್ಞಾನ ಓದಿದ್ದೇ ದಂಡ ತಾನೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ದೇಶದ ಪ್ರಧಾನಿ ಆಗಿದ್ದ ಜವಾಹರಲಾಲ್ ನೆಹರೂ ಅವರು ದೇಶದ ಯುವ ಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ ಎನ್ನುವ ದೂರದೃಷ್ಟಿ ಹೊಂದಿದ್ದರು. ಇದಕ್ಕೆ ಅಗತ್ಯವಾದ ಶೈಕ್ಷಣಿಕ ಸಾಧನೆಗಳಿಗೆ ಕಾರಣರಾಗಿದ್ದರು ಎಂದು ವಿವರಿಸಿದರು.
52 ಕೋಟಿ ಅಂದಾಜಿನಲ್ಲಿ 7 ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಲಾಗಿದೆ. ಎಂಟನೇ ಅಂತಸ್ತನ್ನು ನಿರ್ಮಿಸಲು 8 ಕೋಟಿ ರೂಪಾಯಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ಈ ಕೊಡಲು ಸಿದ್ದವಿದೆ ಎಂದು ಘೋಷಿಸಿದರು.
ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
Key words: no movement, caste discrimination: scientific, CM Siddaramaiah