ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಮೈಸೂರು, ಸೆಪ್ಟಂಬರ್,22,2025 (www.justkannada.in): ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾದ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಇಂದಿನಿಂದ ಅಕ್ಟೋಬರ್ 2 ರವರೆಗೆ ಆಯೋಜಿಸಲಾಗಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಸರ್ಕಾರದ ಸಚಿವರೊಂದಿಗೆ ಕೆಲ ಕಾಲ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿ ಮಂಟಪ: ಈ ಬಾರಿ ಜಂಬೂಸವಾರಿ ದಿನವೇ ಗಾಂಧಿ ಜಯಂತಿ ಇರುವ ಕಾರಣ ಮಹಾತ್ಮ ಗಾಂಧಿಯವರ ನೆನಪಿಗಾಗಿ ಕುಪ್ಪಣ್ಣ ಉದ್ಯಾನವನದಲ್ಲಿರುವ ಗಾಜಿನ ಮನೆಯಲ್ಲಿ 3 ಲಕ್ಷ ಗುಲಾಬಿ ಹೂಗಳಿಂದ ಕನ್ಯಾಕುಮಾರಿಯಲ್ಲಿರುವ ಗಾಂಧಿ ಮಂಟಪದ ಆಕೃತಿ ನಿರ್ಮಿಸಲಾಗಿದೆ ಹಾಗೂ ದಂಡಿ ಯಾತ್ರೆಯ ಚಿತ್ರಣ ನಿರ್ಮಿಸಲಾಗಿದ್ದು ಇದು ನೋಡುಗರಿಗೆ ತುಂಬಾ ಆಕರ್ಷಣೀಯವಾಗಿದೆ.

ಗ್ಯಾರಂಟಿ ಯೋಜನೆ : ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾದರಿಗಳನ್ನು ವಿಧ ವಿಧ ಹೂಗಳಿಂದ ನಿರ್ಮಿಸಲಾಗಿದೆ. ಆಪರೇಷನ್ ಸಿಂಧೂರದಲ್ಲಿ ಹೋರಾಟ ಮಾಡಿ ದೇಶಕ್ಕೆ ಕೀರ್ತಿ ತಂದು ಕೊಟ್ಟ ಕರ್ನಲ್ ಸೋಫಿಯಾ ಕುರೇಶಿ ಹಾಗೂ ವೂಮಿಕಾ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಆರ್ಮಿ ಟ್ರಕ್ , ಏರ್ ಜೆಟ್ ಯುದ್ಧ ನೌಕೆ ಅನ್ನು ಗುಲಾಬಿ, ಸೇವಂತಿಗೆ ಮತ್ತು ವಿಶಿಷ್ಟ ಹೂಗಳಿಂದ ನಿರ್ಮಿಸಲಾಗಿದೆ.

ತೋಟಗಾರಿಕೆ ಇಲಾಖೆಯಿಂದ 60 ಸಾವಿರ ಹೂವಿನ ಗಿಡಗಳನ್ನು ಬೆಳೆಸಿ ಕುಪ್ಪಣ್ಣ ಉದ್ಯಾನವನವನ್ನು ಹೂಗಳಿಂದ ಅಲಂಕರಿಸಲಾಗಿದೆ. ನಂದಿ, ಆನೆಯ ಮೇಲೆ ಅಂಬಾರಿ ಚಿತ್ರಣಗಳನ್ನು ಗುಲಾಬಿ ಹೂಗಳಿಂದ ನಿರ್ಮಿಸಲಾಗಿದ್ದು ಗಾಜಿನ ಮನೆ ಮುಂಭಾಗ ನಿರ್ಮಿಸಿರುವ ಹಸಿರು ಚಪ್ಪರ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದಲ್ಲದೆ ಈ ಬಾರಿ ಫುಡ್ ಕೋರ್ಟ್ ಕೂಡ ತೆರೆಯಲಾಗಿದ್ದು, ತಿಂಡಿ ತಿನಿಸುಗಳು ಕೂಡ ದೊರೆಯಲಿದೆ.

ವಿವಿಧ ಸ್ಪರ್ಧೆ: ಸೆಪ್ಟೆಂಬರ್ 23 ರಂದು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಂಗೋಲಿ ಸ್ಪರ್ಧೆ, 24 ರಂದು ಪುಷ್ಪ ರಂಗೋಲಿ 25 ರಂದು ಭಾರತೀಯ ಪುಷ್ಪ ಕಲೆ ಹೂಗಳ ಜೋಡಣೆ 26 ರಂದು ತರಕಾರಿ ಕೆತ್ತನೆ 27 ರಂದು ಇಕೆಬಾನಿ 28 ರಂದು ಚಿತ್ರಕಲಾ ಸ್ಪರ್ಧೆ ಗಳನ್ನು ಕರ್ಜನ್ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್.ಸಿ ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್, ಶಾಸಕರಾದ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ , ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.

Key words: Mysore Dasara, Flower Show, CM, Siddaramaiah