ಮೈಸೂರು,ಸೆಪ್ಟಂಬರ್,13,2025 (www.justkannada.in): ಮೈಸೂರು ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಏನಾಗತ್ತೆ ಅಂತ ಪಿಐಎಲ್ ಸಲ್ಲಿಸಿರುವವರನ್ನೇ ಕೇಳಿ ಎಂದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರು ದಸರಾ ಉದ್ಘಾಟಕರ ಬದಲಾವಣೆಗೆ ಕಾನೂನು ಸಮರ ಬಗ್ಗೆ ಕೋರ್ಟ್ ಅದನ್ನು ನೋಡಿಕೊಳ್ಳುತ್ತೆ. ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ. ದಸರಾ ಸಾಂಸ್ಕೃತಿಕವಾಗಿ ನಡೆಯುತ್ತಿರುವ ಕಾರ್ಯಕ್ರಮ. ದಸರಾ ಎಲ್ಲರ ಹಬ್ಬ ಒಂದು ಜಾತಿ ಧರ್ಮಕ್ಕೆ ಸೇರಿದ ಹಬ್ಬ ಅಲ್ಲ. ಮುಸ್ಲಿಂ, ಕ್ರಿಸ್ಟಿಯನ್ ಎಲ್ಲರೂ ಬರುತ್ತಾರೆ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು. ಆದರೆ ಇದನ್ನು ಬೇರೆ ರೀತಿ ರಾಜಕೀಯವಾಗಿ ವಿರೋಧ ಮಾಡ್ತಾರೆ. ವಿರೋಧ ಮಾಡೋರನ್ನ ಈ ಬಗ್ಗೆ ಕೇಳಿ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದರು.
ಬಿಜೆಪಿ ನಾಯಕರ ಮೇಲೆ ಎಫ್.ಐ.ಆರ್ ವಿಚಾರ , ಹಿಂದೂ ಕಾರ್ಯಕರ್ತರು ಟಾರ್ಗೆಟ್ ಆಗುತ್ತಿದ್ದಾರೆ ಎಂಬ ವಿಪಕ್ಷಗಳ ಹೇಳಿಕೆಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ, ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಈಶ್ವರ ರಾಮ ಇಬ್ಬರು ಇದ್ದಾರೆ. ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಾನು ಯಾರ ಮೇಲೂ ಎಫ್ ಐಆರ್ ಹಾಕಿ ಅಂತ ಹೇಳಿಲ್ಲ. ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ ಅಷ್ಟೇ ಎಂದರು.
Key words: Mysore Dasara, inaugurator, BJP, PIL, CM, Siddaramaiah