ಎಸ್ ಎಪಿ ಲ್ಯಾಬ್ಸ್ ಇಂಡಿಯಾ ಇನ್ನೋವೇಷನ್ ಪಾರ್ಕ್ ಉದ್ಘಾಟನೆ: ನಮ್ಮ ಬದ್ಧತೆಗೆ ಕನ್ನಡಿ ಹಿಡಿದಂತಿದೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,5,2025 (www.justkannada.in): ದೇವನಹಳ್ಳಿಯಲ್ಲಿರುವ 41 ಎಕರೆಯ ಎಸ್ ಎಪಿ ಲ್ಯಾಬ್ಸ್ ಇಂಡಿಯಾ ಇನ್ನೋವೇಷನ್ ಪಾರ್ಕ್ ಶಕ್ತಿ ತುಂಬಿದೆ. ಇದು ಕರ್ನಾಟಕದ ಸಾಮರ್ಥ್ಯ, ವಿಶ್ವಾಸಾರ್ಹತೆ ಹಾಗೂ ಶ್ರೇಷ್ಠತೆಯಲ್ಲಿನ ನಮ್ಮ ಬದ್ಧತೆಗೆ ಕನ್ನಡಿ ಹಿಡಿದಂತಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಬೆಂಗಳೂರಿನ ದೇವನಹಳ್ಳಿಯ ಎಸ್ ಎಪಿ ಲ್ಯಾಬ್ಸ್ ಇಂಡಿಯಾ ಇನ್ನೋವೇಷನ್ ಪಾರ್ಕ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ,ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆಯವರೇ,  ಭಾರತಕ್ಕೆ ಜರ್ಮನ್ ದೇಶದ ರಾಯಭಾರಿಗಳಾದ ಡಾ. ಫಿಲಿಪ್ ಆಕರ್ಮನ್ ಅವರೇ,ಶ್ರೀ  ಗರ್ಹರ್ಡ್ ಓಸ್ವಾಲ್ಡ್ ಮತ್ತು ಥಾಮಸ್ ಸಾರ್ಸಿಗ್ ಅವರೇ ಮತ್ತು SAP SE  ಮೇಲ್ವಿಚಾರಣೆ ಹಾಗೂ ಕಾರ್ಯಕಾರಿ ಮಂಡಳಿಯ ಗೌರವಾನ್ವಿತ ಸದಸ್ಯರೇ,

ಎಲೆಕ್ಟ್ರಾನಿಕ್ಸ್ ಐಟಿಬಿಟಿ  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಏಕರೂಪ ಕೌರ್, ಐಎಎಸ್, ಎಸ್ ಎ ಪಿ ಲ್ಯಾಬ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ಸಿಂಧು ಗಂಗಾಧರನ್ ಅವರೇ , ಭಾರತ ಹಾಗೂ ವಿದೇಶದ ಕೈಗಾರಿಕೆಗಳ ಮುಖಂಡರೇ , ಅತಿಥಿಗಳೇ ಹಾಗೂ ಮಾಧ್ಯಮ ಮಿತ್ರರೇ,

ಇಂದು ಬೆಂಗಳೂರಿನ ದೇವನಹಳ್ಳಿಯ 41 ಎಕರೆ ವ್ಯಾಪ್ತಿಯ ಎಸ್ ಎಪಿ ಲ್ಯಾಬ್ಸ್ ಇಂಡಿಯಾ ಇನ್ನೋವೇಷನ್ ಪಾರ್ಕ್ ನ ಉದ್ಘಾಟನಾ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಇಂದಿನ ಕಾರ್ಯಕ್ರಮ ಕೇವಲ ಒಂದು ಕ್ಯಾಂಪಸ್ ನ ಉದ್ಘಾಟನೆಯಾಗಿರದೇ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಕರ್ನಾಟಕ, ಭಾರತದ ಶಕ್ತಿಕೇಂದ್ರವಾಗಿ ಬೆಳೆಯುವ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಕೇವಲ ಒಂದು ನಗರ ಎನ್ನುವುದಕ್ಕಿಂತ ಹೆಚ್ಚಿನದು. ಇದೊಂದು ಚಿಂತನೆ. ಒಂದು ಪರಿಸರ ವ್ಯವಸ್ಥೆ. ನಾವೀನ್ಯತೆಗೆ ಸ್ಪೂರ್ತಿ. ಇದು ಭವಿಷ್ಯವನ್ನು ನಿರ್ಮಿಸುವ ಯುವ ತಂತ್ರಜ್ಞರ ಕನಸುಗಳು, ಜಾಗತಿಕ ಸಂಸ್ಥೆಗಳ ದೂರದೃಷ್ಟಿ ಹಾಗೂ ಸದೃಢ ನೀತಿಗಳ ಸಂಗಮವಾಗಿದೆ.

ಬೆಂಗಳೂರು , ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಆಗಿರುವ ಜೊತೆಗೆ  ಜ್ಞಾನಕೇಂದ್ರ, ಎಐ ಕೇಂದ್ರ ಹಾಗೂ ಕ್ವಾಂಟಮ್ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಿದೆ. ನಾವು ಕೇವಲ ಸಾಫ್ಟವೇರ್ ಅಲ್ಲದೇ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಹಾಗೂ ಕೈಗಾರಿಕೆ 4.0 ರಂತಹ  21ನೇ ಶತಮಾನವನ್ನು  ವ್ಯಾಖ್ಯಾನಿಸಬಲ್ಲ ತಂತ್ರಜ್ಞಾನದಲ್ಲಿಯೂ ಮುಂದಿದ್ದೇವೆ.

ಈ ನಮ್ಮ ದೂರದೃಷ್ಟಿಗೆ ದೇವನಹಳ್ಳಿಯಲ್ಲಿರುವ 41 ಎಕರೆಯ ಎಸ್ ಎಪಿ ಲ್ಯಾಬ್ಸ್ ಇಂಡಿಯಾ ಇನ್ನೋವೇಷನ್ ಪಾರ್ಕ್ ಶಕ್ತಿ ತುಂಬಿದೆ. ಇದು ಕರ್ನಾಟಕದ ಸಾಮರ್ಥ್ಯ, ವಿಶ್ವಾಸಾರ್ಹತೆ ಹಾಗೂ ಶ್ರೇಷ್ಠತೆಯಲ್ಲಿನ ನಮ್ಮ ಬದ್ಧತೆಗೆ ಕನ್ನಡಿ ಹಿಡಿದಂತಿದೆ.

ಕರ್ನಾಟಕ ಇಂದು ಭಾರತದ ಜಿಡಿಪಿಗೆ ಶೇ.8 ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದ್ದು, ಐಟಿ ರಫ್ತಿನಲ್ಲಿ ಶೇ. 35 ರಷ್ಟು ಪಾಲನ್ನು ಹೊಂದಿದೆ. ನಾವು ಶೇ. 40 ಕ್ಕೂ ಹೆಚ್ಚು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನಾ ರಫ್ತಿಗೆ ಕೇಂದ್ರವಾಗಿದ್ದು, 500 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು , 18ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು, ಶೇ. 40 ರಷ್ಟು ಯೂನಿಕಾರ್ನ್ಸ್ ಗಳನ್ನು ಹೊಂದಿದ್ದು, ಈ ಸಂಖ್ಯೆ ದಿನದಿನಕ್ಕೂ ಏರಿಕೆಯನ್ನು ಕಾಣುತ್ತಿದೆ. ಭಾರತದ ಶೇ. 40 ಕ್ಕೂ ಹೆಚ್ಚಿನ ಯೂನಿಕಾರ್ನ್ಸ್ ಗಳಿಗೆ ಬೆಂಗಳೂರು ತವರೂರಾಗಿದೆ.

ಈ ಸಾಧನೆ, ಶತಮಾನಗಳ ದೂರದೃಷ್ಟಿಯ ಆಡಳಿತ, ಪ್ರಗತಿಪರ ನೀತಿಗಳು ಹಾಗೂ ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳೊಂದಿಗಿನ ಸರ್ಕಾರದ ಪಾಲುದಾರಿಕೆಗಳ ಫಲವಾಗಿದೆ. ಸ್ಟಾರ್ಟ್ ಅಪ್ ಗಳಿಗೆ ಮೀಸಲಾದ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ . ಈ ಪರಂಪರೆಯನ್ನು ಮುಂದುವರೆಸುತ್ತಾ ಇಂದು ಕರ್ನಾಟಕದಾದ್ಯಂತ ಬಿಯಾಂಡ್ ಬೆಂಗಳೂರು, ಜಿಸಿಸಿ ಪಾಲಿಸಿ ಮತ್ತು  ಉಗಮವಾಗಲಿರುವ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ನಮ್ಮ ಸರ್ಕಾರ ಹಾಗೂ ಐಟಿಬಿಟಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆಯವರು ಕರ್ನಾಟಕದ ಐಟಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧರಾಗಿದ್ದು, ಕೈಗಾರಿಕೆಗಳಿಗೆ ಅವಕಾಶಗಳನ್ನು ವಿಸ್ತರಿಸುವ ಜೊತೆಗೆ ಯುವಜನರ ಏಳಿಗೆಗಾಗಿ ಒಳಗೊಂಡ ಅಭಿವೃದ್ಧಿ ಹಾಗೂ ನಾವೀನ್ಯತೆಯನ್ನು ಸೃಜಿಸಲಾಗುತ್ತಿದೆ.

ಎಸ್ ಎ ಪಿ ಯವರು ವಿಶ್ವದರ್ಜೆಯ ಕ್ಯಾಂಪಸ್ ನಿರ್ಮಿಸಲು ದೇವನಹಳ್ಳಿಯ ಈ ಪ್ರದೇಶದ ಆಯ್ಕೆ ನಿಜಕ್ಕೂ ಸಾಂಕೇತಿಕವಾಗಿದೆ.  ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿರುವ ಈ ಕ್ಯಾಂಪಸ್, ಕರ್ನಾಟಕದ ನಾವಿನ್ಯತಾ ಕ್ಷೇತ್ರದ ಮುಂದಿನ ಅಭಿವೃದ್ಧಿಗೆ ಕೇಂದ್ರವಾಗಲಿದೆ.

2017ರಲ್ಲಿ ನಮ್ಮ ಸರ್ಕಾರ ವಿಮಾನ ನಿಲ್ದಾಣದ ಸಾಲಿನ ಪ್ರಕ್ರಿಯೆಗೆ ಚಾಲನೆ ನೀಡಿತು. ಪ್ರಸ್ತುತ ಸರ್ಕಾರ ಏರ್ ಪೋರ್ಟ್-ಮೆಟ್ರೋ ಲೈನ್  ನಿರ್ಮಾಣವನ್ನು  ಹಾಗೂ ಸಬ್ ಅರ್ಬನ್ ಲೈನ್ ಯೋಜನೆಯನ್ನು ತ್ವರಿತಗೊಳಿಸಿ , 2029 ರೊಳಗೆ ಪೂರ್ಣಗೊಳಿಸಲಿದೆ. ನಮ್ಮ ಸರ್ಕಾರ  ಸಮತೋಲಿತ, ವಿಕೇಂದ್ರೀಕೃತ ಮತ್ತು ಸುಸ್ಥಿರ ಅಭಿವೃದ್ಧಿಗೆ ಬದ್ಧವಾಗಿದೆ.

ಎಸ್  ಎಪಿ ಯ ಇನ್ನೋವೇಷನ್ ಪಾರ್ಕ್ ನ ಸ್ಥಾಪಿಸುವ ಮೂಲಕ ಜಾಗತಿಕ ನಾಯಕರು ಕರ್ನಾಟಕದ ಮೇಲಿಟ್ಟಿರುವ ವಿಶ್ವಾಸವನ್ನು ಪುಷ್ಠೀಕರಿಸಿದ್ದಾರೆ. 1998 ರಿಂದ ಎಸ್ ಎ ಪಿ ಲ್ಯಾಬ್ಸ್ ಇಂಡಿಯಾ ಸಂಸ್ಥೆಯು ಬೆಂಗಳೂರನ್ನು ತನ್ನ ಕೇಂದ್ರಸ್ಥಾನವಾಗಿಸಿದ್ದು, ಜರ್ಮನಿಯ ಹೊರಗಿರುವ ಎಸ್ ಎ ಪಿ ಯ ಬಹುದೊಡ್ಡ ಆರ್ ಎಂಡ್ ಡಿ ವ್ಯವಸ್ಥೆಯಾಗಿ  ಬೆಳೆದಿದೆ. ಈ ಬೆಳವಣಿಗೆ , ಜಾಗತಿಕ ನಾವಿನ್ಯತೆಯಲ್ಲಿ ಕರ್ನಾಟಕದ ಪಾತ್ರ ಬಿಂಬಿಸುವ ಉತ್ತಮ ಉದಾಹರಣೆಯಾಗಿದೆ.

15000 ವೃತ್ತಿಪರರು ಕೆಲಸ ಮಾಡುವಂತೆ ವಿನ್ಯಾಸಗೊಳಿಸಲಾಗಿರುವ ಈ  ವಿಶಿಷ್ಟ ಕ್ಯಾಂಪಸ್ ಮುಂದಿನ ದಿನಗಳಲ್ಲಿ  ಭಾರತದ ನಾವೀನ್ಯತಾ ಕಾರ್ಯಪಡೆಯ ಇಂಜಿನ್ ಆಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ.  ಉನ್ನತ ಮೌಲ್ಯವುಳ್ಳ ಉದ್ಯೋಗ ಸೃಷ್ಟಿ ಹಾಗೂ ಯುವಜನರಿಗೆ ಅವಕಾಶಗಳನ್ನು ಒದಗಿಸುವ ನಮ್ಮ ಧ್ಯೇಯಕ್ಕೆ ಸಂಬಂಧಿಸಿದಂತೆ ಇದೊಂದು ಮೈಲಿಗಲ್ಲು.

. ತಾಂತ್ರಿಕ ಶ್ರೇಷ್ಠತೆಯ ಮಟ್ಟವನ್ನು ಸಾಧಿಸುವ ನಿಟ್ಟಿನಲ್ಲಿ ಕ್ಯಾಂಪಸ್ ನ್ನು ವಿನ್ಯಾಸಗೊಳಿಸುವುದಲ್ಲದೆ, ನೀರಿನ ಸಂರಕ್ಷಣೆ, ಇಂಗಾಲ ತಟಸ್ಥ, ನಿವ್ವಳ ಶೂನ್ಯವಾಗುವ ಆಶಯಗಳನ್ನು ಹೊಂದಿರುವ    SAP  ಸಂಸ್ಥೆಯನ್ನು ಶ್ಲಾಘಿಸುತ್ತೇನೆ. ಇದು ಕರ್ನಾಟಕದ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯ ದೃಷ್ಠಿಯೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ.

ಇಂಧನ, ಸುಸ್ಥಿರ ಚಲನೆ ಹಾಗೂ ಪರಿಸರ ಜಾಗೃತ ಬೆಳವಣಿಗೆಯಲ್ಲಿ ನಾವು ಮುಂದುವರಿಯುತ್ತಿದ್ದಂತೆಯೇ, ಈ ರೀತಿಯ ಹೂಡಿಕೆಗಳು ಆರ್ಥಿಕ ಪ್ರಗತಿ ಮತ್ತು ಪರಿಸರ ಹೊಣೆಗಾರಿಕೆ ಹೇಗೆ ಜೊತೆ ಜೊತೆಯಾಗಿಯೇ ಹೋಗುತ್ತದೆ ಎಂದು ನಿರೂಪಿಸುತ್ತದೆ.

ಜಾಗತಿಕ ತಂತ್ರಜ್ಞಾನ ಕೇಂದ್ರಗಳು ಹಾಗೂ ಜಾಗತಿಕ ನಾವೀನ್ಯತಾ ಜಿಲ್ಲೆಗಳಂತಹ ನಮ್ಮ ಪ್ರಯತ್ನಗಳು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದಾದ್ಯಂತ ನಾಳಿನ ಕೈಗಾರಿಕೆಗಳಿಗೆ ಬುನಾದಿ ಹಾಕುತ್ತಿವೆ.

ವಿಶ್ವ ಬ್ಯಾಂಕ್ ಬೆಂಬಲಿತ 2500 ಕೋಟಿ ರೂ.ಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಮೂಲಕ ನಮ್ಮ ಸರ್ಕಾರವು ಪ್ರಥಮ ದರ್ಜೆ ಕಾಲೇಜುಗಳು, ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಮತ್ತು ಕೌಶಲ್ಯಯುತ, ಉನ್ನತ ತಂತ್ರಜ್ಞಾನದ ಬೇಡಿಕೆಗಳಿಗೆ ಅನುಗುಣವಾಗಿರುವ, ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಮಿಕರನ್ನು ತಯಾರು ಮಾಡಲು  ಆರ್ ಅಂಡ್ ಡಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ.

. ಡಿಜಿಟಲ್ ಆಡಳಿತ, ಸ್ಮಾರ್ಟ್ ಸಿಟಿಗಳು, ಕೌಶಲ್ಯ ತರಬೇತಿ ಮತ್ತು ಸುಸ್ಥಿರತೆ ಮುಂತಾದ ವಲಯಗಳಲ್ಲಿ SAP ನೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಹೆಮ್ಮೆಯಿದೆ. SAP ನ ಸ್ಟಾರ್ಟ್ ಅಪ್ ಸ್ಟುಡಿಯೋ ಮತ್ತು ಕೋ ಇನ್ನೋವೇಶನ್ ಬೇಡಿಕೆಗಳ ಮೂಲಕ, ಎಂ.ಎಸ್.ಎಂ. ಇ ಗಳನ್ನು ಬಲಪಡಿಸಲು ಅಗಾಧ ಸಾಮರ್ಥ್ಯ  ಇದೆ ಎಂದು ನಾವು ಮನಗಂಡಿದ್ದೇವೆ. ಹಾಗೂ ಅತ್ಯಾಧುನಿಕ ಡಿಜಿಟಲ್ ಸಾಧನಗಳ ಮೂಲಕ ಸರ್ಕಾರಿ ಸೇವೆಗಳನ್ನು ಹೆಚ್ಚಿಸಲು ಕೂಡ ಸಾಧ್ಯವಿದೆ.

SAP labs ಇಂಡಿಯಾ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಹಾಗೂ ಗತಿಶಕ್ತಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದದ ಸಹಿ ಹಾಕುವ ಈ ಸಂದರ್ಭಕ್ಕೆ ನಾನು ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ. ಈ ಪಾಲುದಾರಿಕೆಯು ತಂತ್ರ, ಮೂಲಸೌಕರ್ಯ ಮತ್ತು ಉಗಮವಾಗಲಿರುವ ತಂತ್ರಜ್ಞಾನಗಳಲ್ಲಿ  ಉದ್ಯಮಕ್ಕೆ ತಯಾರಾಗಿರುವ ಪ್ರತಿಭೆಗಳನ್ನು ಸೃಜಿಸಲು ದಾರಿ ಮಾಡಿಕೊಡಲಿದೆ.

. SAP labs India ಹಾಗೂ ಜಾಗತಿಕವಾಗಿ ಹೆಸರುವಾಸಿಯಾಗಿರುವ ಮ್ಯೂನಿಕ್ ತಾಂತ್ರಿಕ ವಿಶ್ವವಿದ್ಯಾಲಯದ ನಡುವಿನ ಸಹಯೋಗವು ಮತ್ತೊಂದು ಮಹತ್ವಪೂರ್ಣ ಹೆಜ್ಜೆ.

. ಈ ಸಾರ್ವಜನಿಕ, ಖಾಸಗಿ, ಶೈಕ್ಷಣಿಕ ಸಹಯೋಗವು ಭವಿಷ್ಯಕ್ಕೆ ಸಿದ್ಧವಾಗಿರುವ ಕರ್ನಾಟಕವನ್ನು ರೂಪಿಸಲು ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ

ಈ ಇನ್ನೋವೇಷನ್ ಪಾರ್ಕ್ ಕೇವಲ ಕೆಲಸದ ಸ್ಥಳವಾಗಿರದೇ, ರಾಜ್ಯದ ನಗರಗಳ ಹಾಗೂ ಕೈಗಾರಿಕಾ ಕ್ಲಸ್ಟರ್ಗಳಿಂದ ಹೊಮ್ಮುವ ಪ್ರತಿಭೆಗಳಿಂದ ರೂಪಿತವಾದ, ಕರ್ನಾಟಕದಿಂದ ಇಡೀ ವಿಶ್ವಕ್ಕೆ ನೀಡಬಲ್ಲ ಜಾಗತಿಕ ಪರಿಹಾರಗಳಿಗೆ ಚಿಮ್ಮುಹಲಗೆಯಾಗಿ ಅಭಿವೃದ್ಧಿ ಹೊಂದಲಿ.

ಎಸ್ ಎ ಪಿ ಲ್ಯಾಬ್ ಇಂಡಿಯಾದ ಈ ಉತ್ತಮ ಹೂಡಿಕೆಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ನಡುವಿನ ಗುರಿ ಹಾಗೂ ಪರಸ್ಪರ ವಿಶ್ವಾಸದ ಗುರುತಾಗಿ ಈ ಕ್ಯಾಂಪಸ್ ತಲೆಎತ್ತಿದೆ.

ವಿಶ್ವಮಟ್ಟದ ಕ್ಯಾಂಪನ್ ಉದ್ಘಾಟಿಸುವ ಮೂಲಕ , ಕರ್ನಾಟಕವನ್ನು ನಾವಿನ್ಯತಾ ಸ್ನೇಹಿ ರಾಜ್ಯವನ್ನಾಗಿ ಮಾಡುವ ಸರ್ಕಾರದ ಬದ್ಧತೆಯನ್ನು ಪುನ: ಗಟ್ಟಿಗೊಳಿಸೋಣ. ಎಸ್ ಎ ಪಿ ಯಂತಹ ಜಾಗತಿಕ ಸಂಸ್ಥೇಗಳು ಹೂಡಿಕೆ ಮಾಡುವ, ಆವಿಷ್ಕರಿಸುವ, ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸಹಕರಿಸುವಂತಹ ಸ್ಥಳವನ್ನಾಗಿ ಕರ್ನಾಟಕವನ್ನು ಬೆಳೆಸಲು ಬದ್ಧರಾಗೋಣ ಎಂದರು.

Key words: SAP Labs India Innovation Park, inaugurated, CM Siddaramaiah