ವಿಶ್ವಾಸಮತಯಾಚನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಹೆಚ್.ಡಿಕೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜು,15,2019(www.justkannada.in): ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ಗುರುವಾರ ಬೆಳಿಗ್ಗೆ 11ಗಂಟೆಗೆ ನಿರ್ಧಾರವಾಗಲಿದ್ದು ಈ ನಡುವೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ವಿಶ್ವಾಸಮತಯಾಚನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಸಿಎಂ ಶುಕ್ರವಾರ ವಿಶ್ವಾಸ ಮತ ಯಾಚನೆ ಮಾಡುವ ಬಗ್ಗೆ ಹೇಳಿದ್ರು. ಆದರೆ ಅಂದು ಸಭೆಗೆ ವಿಪಕ್ಷದವರು ಹಾಜರಾಗಿರಲಿಲ್ಲ. ಹೀಗಾಗಿ ಸ್ಪೀಕರ್ ವಿಪಕ್ಷದವರ ಜೊತೆ ಚರ್ಚಿಸಿ ಹೇಳ್ತೀನಿ ಅಂದ್ರು. ಇವತ್ತಿನ ಸಭೆಯಲ್ಲಿ ಚರ್ಚೆ ಮಾಡಿ ಸ್ಪೀಕರ್ ಗುರುವಾರ ವಿಶ್ವಾಸ ಮತ ಯಾಚನೆಗೆ ಸಮಯ ನಿಗದಿ ಮಾಡಿದ್ದಾರೆ. ನಾವು ಶುಕ್ರವಾರ ಸಮಯ ಕೊಡಿ ಅಂದ್ವಿ. ಬಿಜೆಪಿಯವ್ರು ಇವತ್ತೇ ಸಮಯ ನಿಗದಿ ಮಾಡಿ ಅಂದ್ರು. ಕೊನೆಗೆ ಬುಧವಾರ ಮಾಡೋಣ ಅಂತ ನಾವು ಹೇಳಿದವು. ಈ ಮಧ್ಯೆ ಸ್ಪೀಕರ್ ಗುರುವಾರ ವಿಶ್ವಾಸಮತಯಾಚನೆಗೆ ಸಮಯ ನಿಗದಿ ಮಾಡಿದರು ಎಂದು ಮಾಹಿತಿ ನೀಡಿದರು.

ವಿಶ್ವಾಸ ಮತಯಾಚನೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ವಿಶ್ವಾಸ ಇಲ್ಲದೇ ವಿಶ್ವಾಸ ಮತ ಯಾಚಿಸ್ತೀವಾ ? ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ತೇವೆ ಎಂದು ಹೇಳಿದರು.

ಹಾಗೆಯೇ ಸಭೆ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ನಾನು ವಿಶ್ವಾಸದಲ್ಲಿದೇನೆ. ನಾನು ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ತೇನೆ ಎಂದು ತಿಳಿಸಿದರು.

ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ , ಸ್ಪೀಕರ್ ಗುರುವಾರ ವಿಶ್ವಾಸ ಮತ ಯಾಚನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಪಡೆಯುತ್ತೇವೆ. ಯಾವ ಶಾಸಕರೂ ಸದನಕ್ಕೆ ಗೈರಾಗಲ್ಲ. ಯಾರೂ ವಿಪ್ ಉಲ್ಲಂಘನೆ ಮಾಡಲ್ಲ. ಎಲ್ಲರೂ ಸದನಕ್ಕೆ ಬರ್ತಾರೆ ಎಂದು ತಿಳಿಸಿದರು.

Key words: CM HDK -former CM –Siddaramaiah- expressed- confidence – winning