ನಾವೇನು ಬಿಟ್ಟಿ ಸಿಕ್ಕಿದ್ದೀವಾ..? ರಾಜಕಾರಣಿಗಳೇನು ಕಾಮಿಡಿ ಪೀಸ್‌ಗಳಾ..?-ಮಾಧ್ಯಮಗಳ ವಿರುದ್ದ ಮತ್ತೆ ಸಿಡಿಮಿಡಿಗೊಂಡ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಮೈಸೂರು,ಮೇ,19,2019(www.justkannada.in): ನಿಮ್ಮ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳನ್ನು ನಿಮಗಿಷ್ಟ ಬಂದಂತೆ ತೋರಿಸಿಕೊಳ್ಳುತ್ತೀರಾ..? ರಾಜಕಾರಣಿಗಳೇನು ಕಾಮಿಡಿ ಪೀಸ್‌ಗಳಾ..? ಏನೆಂದುಕೊಂಡಿದ್ದೀರಾ ನಮ್ಮನ್ನಾ..? ಹೀಗೆ ಮಾಧ್ಯಮಗಳ ವಿರುದ್ದ ಸಿಡಿಮಿಡಿಗೊಂಡಿದ್ದು ಸಿಎಂ ಹೆಚ್ .ಡಿ ಕುಮಾರಸ್ವಾಮಿ…

ಹೌದು ಇಂದು ಮೈಸೂರಿನಲ್ಲಿ ಮಾತನಾಡಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಾಧ್ಯಮಗಳ ಸಹವಾಸವೇ ಡೆಂಜರ್. ಅದಕ್ಕೆ ಅವರಿಂದ ದೂರ ಉಳಿದಿದ್ದೇನೆ. ನಾನು ಇತ್ತಿಚಿಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದೇನೆ. ನನ್ನಷ್ಟು ಮಾಧ್ಯಮಗಳಿಗೆ ಹತ್ತಿರವಾದ ರಾಜಕಾರಣಿ ದೇಶದಲ್ಲೇ ಇಲ್ಲ. ಆದ್ರೆ ಇತ್ತಿಚೆಗೆ ಅವರ ಸಹವಾಸವೇ ಬೇಡ ಅಂತ ದೂರ ಇದ್ದೇನೆ. ದೃಶ್ಯ ಮಾಧ್ಯಮದವರಂತೂ ಅತಿರೇಕ ಮಾಡಿದ್ದಾರೆ. ಅವರು ನೀಡಿರುವ ವರದಿಗಳಿಗೆ ನಾವು ನಿದ್ದೆಯೇ ಮಾಡೋ ಹಂಗಿಲ್ಲ. ಮಂಡ್ಯ ಬಗ್ಗೆ ತಮಗಿಷ್ಟ ಬಂದಂಗೆ ವರದಿ ಮಾಡ್ತಾರೆ. ಮಾಧ್ಯಮಗಳ‌ ನಡವಳಿಕೆಯಿಂದ ಅವರ ಮೇಲೆ ಇದ್ದ ಭಯವೇ ಹೊರಟು ಹೋಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ನಿಮ್ಮ ಟಿ.ಆರ್.ಪಿ ಗೆ ನಾವೇ ಬೇಕಾ..? ಎಲ್ಲಿದ್ದೀಯಪ್ಪಾ ನಿಖಿಲ್ ಅನ್ನೋದೇ ಕಾರ್ಯಕ್ರಮವೇ..? ನಿಮ್ಮ ಗ್ಯಾಪ್ ಫಿಲಪ್ ಮಾಡೋಕೆ ನಮ್ಮ ಹೆಸರನ್ನೇ ಯಾಕೆ ಬಳಿಸಿಕೋಳ್ತೀರಾ..? ಎಂದು ಕಿಡಿಕಾರಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾವು ಮಾಧ್ಯಮಗಳಿಂದ ಬದುಕಿಲ್ಲ. ನಾವು ಬದುಕಿರೋದು ರಾಜ್ಯದ 6.5 ಕೋಟಿ ಜನರಿಂದ. ನಮ್ಮ‌‌ ಕುಟುಂಬದವರು ಪಂಚಾಯಿತಿಯಿಂದ ಪ್ರಧಾನಿವರೆಗೆ ಎಲ್ಲವನ್ನೂ ನೋಡಿದ್ದಾರೆ. ಆದ್ರೆ ಮಾಧ್ಯಮಗಳಿಗೆ ಯಾವುದನ್ನು ತೋರಿಸಬೇಕೋ ತೋರಿಸಬಾರದೋ ಅಂತಾನೆ ಗೊತ್ತಿಲ್ಲ ಎಂದು ಮಾಧ್ಯಮಗಳ ವಿರುದ್ದ ಹರಿಹಾಯ್ದರು.

 ನಿಮ್ಮ ಊಹೆಗೆ ತಕ್ಕಂತೆ ಸುದ್ದಿ ಮಾಡಿಕೊಂಡು ರಾಜ್ಯವನ್ನು ಹಾಳು ಮಾಡಬೇಡಿ. ದೃಶ್ಯ ಮಾಧ್ಯಮಗಳಿಗೆ ಕಠಿಣ ಪದಗಳನ್ನು ಬಳಸುತ್ತಿದ್ದೇನೆ. ನಿಮ್ಮ ಕಡೆ ತಿರುಗಿಯೂ ನೋಡಿಲ್ಲಾ, ನೋಡೋದೂ ಇಲ್ಲಾ. ನಿಮಗಿಷ್ಟ ಬಂದಂತೆ ವರದಿ ಮಾಡಿಕೊಳ್ಳಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಯಾವುದೇ ಕಾರಣಕ್ಕೂ ಈ‌ ಸರ್ಕಾರ ಬಿಳೋದಿಲ್ಲಾ. ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲೇ ಈ ಸರ್ಕಾರ ಸಾಗುತ್ತಿದೆ. ನಾನು ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಗೌರವದಿಂದ ಆ ಮಾತು ಹೇಳಿದ್ದೇನೆ. ಅದನ್ನೇ ದೊಡ್ಡ ಸುದ್ದಿ‌ ಮಾಡಿದ್ರೀ. ಇವತ್ತು ಪುಟ್ಟರಂಗಶೆಟ್ಟಿಯೂ ಮಾತನಾಡಿದ್ದಾರೆ. ಅದು ಅವರ ಭಾವನೆ ಅನ್ನೋದನ್ನು ಅರ್ಥ ಮಾಡ್ಕೋಳ್ಳಿ. ಸುಮ್ಮನೇ ಏನೇನೋ ಸುದ್ದಿ ಕೊಡಬೇಡಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದರು.

Key words: CM HD Kumaraswamy expressing outrage against media.

#mysore #cmhdkumaraswamy #media