ಕೇಂದ್ರದ ವಿರುದ್ದ ಸಿಎಂ ಮತ್ತು ಡಿಸಿಎಂ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ.

ಬೆಂಗಳೂರು,ಫೆಬ್ರವರಿ,5,2024(www.justkannada.in):  ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಫೆಬ್ರವರಿ 7ರಂದು  ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಒಂದು ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ ಸಿಎಂ ಸಿದ್ದರಾಮಯ್ಯ ಅವರೇ. ಯುಪಿಎ ಅವಧಿಗೆ ಹೋಲಿಸಿದರೆ ಎನ್ ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ 3 ಪಟ್ಟು ಹೆಚ್ಚು ಹಣ ದೊರೆತಿದೆ ಎನ್ನುವ ಸತ್ಯ ನಿಮಗೂ ಗೊತ್ತು.

14 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯ ಅವರು ಪದೇ ಪದೇ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು ಬಿಟ್ಟು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಕಳೆದ 20 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಒಟ್ಟು ಅನುದಾನ, ತೆರಿಗೆ ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ಆಗ್ರಹಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ,  ಸಿದ್ದರಾಮಯ್ಯ ಅವರ “ಸ್ಲೀಪಿಂಗ್‌ ಸರ್ಕಾರ” ಕಳೆದ 9 ತಿಂಗಳಿಂದಲೂ ನಿದ್ದೆ ಮಾಡುತ್ತಲೇ ಇದೆ. ಎಚ್ಚರಿಸುವ ಕೆಲಸ ಮಾಡಿದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುತ್ತದೆ. ಸ್ವಾಮಿ ಸಿದ್ದರಾಮಯ್ಯರವರೇ, ನಿಮ್ಮ ಸಾಧನೆ ಏನು ಹೇಳಿ ಎಂದು ಜನತೆ ಕೇಳಿದರೆ, ನಿಮ್ಮ ಬಳಿ ಉತ್ತರವಿಲ್ಲ.

ಬೇರೆಯವರ ಮೇಲೆ ಗೂಬೆ ಕೂರಿಸಲು ನೀವು ಕೊಡುವ ಸಮಯವನ್ನೇನಾದರೂ ರಾಜ್ಯದ ಅಭಿವೃದ್ಧಿಗೆ ಕೊಟ್ಟಿದ್ದರೆ, ಬಹುಶಃ ಇಂದು ನೀವು ಈ ರೀತಿ ಬೊಗಳೆ ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮಿಂದ ಆಡಳಿತ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೊರಡಿ. ನಿಮ್ಮ ದುರಾಡಳಿತದಿಂದಾಗಿ ಕರ್ನಾಟಕದ ಜನ ರೋಸಿ ಹೋಗಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.

Key words: CM -DCM’s -allegations -against – Centre- BJP