ಚೆನ್ನಮ್ಮ ವಿ.ವಿ.ಕ್ಯಾಂಪಸ್ ನಿರ್ಮಾಣಕ್ಕೆ ಡಿ. 22ರಂದು ಸಿಎಂ ಶಂಕುಸ್ಥಾಪನೆ: ಸಚಿವ ಅಶ್ವಥ್ ನಾರಾಯಣ್ ಸ್ಥಳ ವೀಕ್ಷಣೆ

ಬೆಳಗಾವಿ,ಡಿಸೆಂಬರ್,16,2021(www.justkannada.in):  ಇಲ್ಲಿನ ಹಿರೇಬಾಗೇವಾಡಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪೂರ್ಣಪ್ರಮಾಣದ ಕ್ಯಾಂಪಸ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಇದೇ 22ರಂದು ಶಂಕುಸ್ಥಾಪನೆ ಮಾಡುತ್ತಿದ್ದು ಅದರ ಪೂರ್ವ ತಯಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.

ಕ್ಯಾಂಪಸ್ ನಿರ್ಮಾಣಕ್ಕೆಂದು ಮೀಸಲಿಟ್ಟಿರುವ 125 ಎಕರೆ ಪ್ರದೇಶವನ್ನು ವೀಕ್ಷಿಸಿದ ಅವರು, ನೂತನ ಕ್ಯಾಂಪಸ್ಸಿನಲ್ಲಿ ಯಾವ್ಯಾವ ಸೌಲಭ್ಯಗಳಿರಬೇಕು ಎನ್ನುವುದನ್ನು ವಿಶ್ವವಿದ್ಯಾಲಯದ ಕುಲಪತಿ ಮತ್ತು ಇತರ ಪ್ರಮುಖರೊಂದಿಗೆ ಚರ್ಚಿಸಿದರು.

ನೂತನ ಕ್ಯಾಂಪಸ್ ವಿದ್ಯಾರ್ಥಿಸ್ನೇಹಿಯಾಗಿ ಇರಲಿದ್ದು, ಗುಣಮಟ್ಟದ ಬೋಧನೆಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನಗಳನ್ನೆಲ್ಲ ಒಳಗೊಂಡಿರಲಿದೆ. ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಂಡು, ಕಿತ್ತೂರು ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿವಿ ಕುಲಪತಿ ಪ್ರೊ‌ ರಾಮಚಂದ್ರ ಗೌಡ ಮುಂತಾದವರು ಸಚಿವರ ಜತೆಗಿದ್ದರು.

Key words: CM-consecrates- construction -Chennamma university- campus-Minister -Ashwath Narayan