ಕಲ್ಬುರ್ಗಿ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್  ಮೈತ್ರಿ ಬಗ್ಗೆ ಸುಳಿವು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು, ಸೆಪ್ಟಂಬರ್,7,2021(www.justkannada.in): ಸೆಪ್ಟಂಬರ್ 3 ರಂದು ನಡೆದ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ಕಲಬುರ್ಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಕಲಬುರ್ಗಿ ಪಾಲಿಕೆ ವಿಚಾರದಲ್ಲಿ ನಾವು ಒಟ್ಟಾಗಿ ಹೋಗೋಣ ಎಂದು ನಾನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಹೇಳಿದ್ದೇನೆ. ಸ್ಥಳೀಯ ಮುಖಂಡರ ಜತೆ ಚರ್ಚಿಸಿ ತಿಳಿಸುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಒಂದಾಗಿ ಕೆಲಸ ಮಾಡಲು ಕುಮಾರಸ್ವಾಮಿ ಒಲವು ತೋರಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಲಬುರ್ಗಿ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗಿದೆ.

 ನಿಫಾ ವೈರಸ್ ತಡೆಗೆ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮ.

ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಆತಂಕ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ನಿಫಾ ವೈರಸ್ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ  ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಭೀತಿ ಹೆಚ್ಚಿಸಿರುವ ನಿಫಾ ವೈರಸ್ ತಡೆಗೆ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಕೇರಳದಿಂದ ಬರುತ್ತಿರುವವನ್ನು ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ನಿಯಂತ್ರಣದೊಂದಿಗೆ ನಿಫಾ ವೈರಸ್ ಬಗ್ಗೆಯೂ ತೀವ್ರ ನಿಗಾ ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Key words: CM Basavaraja Bommai -hints – BJP-JDS- alliance – Kalburgi