ಮೈಸೂರು, ಅಕ್ಟೋಬರ್ 13,2026 (www.justkannada.in): ಪ್ರತಿಯೊಂದು ಮನೆಗೂ ನಲ್ಲಿಯ ಮೂಲಕ ನೇರವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದ ‘ಮನೆಮನೆಗೆ ಶುದ್ಧ ಜಲ’ (Drink Directly from Tap) ಅಭಿಯಾನವನ್ನು ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಒಂದು ವರ್ಷದೊಳಗೆ ಈ ಯೋಜನೆಯನ್ನು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಾಶ್ಚಿಮಾತ್ಯ ರಾಷ್ಟ್ರಗಳ ಹಲವು ನಗರಗಳಲ್ಲಿ ಮನೆಗಳಿಗೆ ನೇರವಾಗಿ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಜಾರಿಯಲ್ಲಿದೆ. ಇದೇ ಮಾದರಿಯ ವ್ಯವಸ್ಥೆಯನ್ನು ಕರ್ನಾಟಕದಲ್ಲಿಯೂ ಪರಿಚಯಿಸುವ ಮೂಲಕ ನಗರ ಪ್ರದೇಶಗಳ ಜನರಿಗೆ ಸುಲಭವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಒಡಿಶಾ ರಾಜ್ಯದ ಪುರಿ ನಗರದಲ್ಲಿ ಈ ಮಾದರಿಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕರ್ನಾಟಕದಲ್ಲಿಯೂ ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೈಸೂರು ನಗರವನ್ನು ಪ್ರಾಯೋಗಿಕ ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾಯಿತು. ಮನೆಗಳಿಗೆ ನೇರವಾಗಿ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯನ್ನು ರೂಪಿಸಲು ಅಗತ್ಯವಿರುವ ತಾಂತ್ರಿಕ ಅಂಶಗಳು, ಕಾರ್ಯಸಾಧ್ಯತೆ ಹಾಗೂ ಅನುಷ್ಠಾನದ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಒಡಿಶಾ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಜಿ. ಮತಿ ವಾತನನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಒಡಿಶಾದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಯೋಜನೆಯ ತಾಂತ್ರಿಕ ಸ್ವರೂಪ, ಕಾರ್ಯಸಾಧ್ಯತೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದರು.
ಕೊಳಗೇರಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತು.
ಸಭೆಯಲ್ಲಿ ವಿಶೇಷವಾಗಿ ಕೊಳಗೇರಿ ಪ್ರದೇಶಗಳ ಸಮಗ್ರ ಪರಿವರ್ತನೆ, ತಂತ್ರಜ್ಞಾನ ಆಧಾರಿತ ಅನುಷ್ಠಾನ, ಸಾಮಾಜಿಕ ಮೂಲಸೌಕರ್ಯಗಳ ಬಲವರ್ಧನೆ ಮತ್ತು ಸುಸ್ಥಿರ ಜೀವನೋಪಾಯ ಮಾದರಿಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ನಗರ ಪ್ರದೇಶಗಳ ವಸತಿಗಳಲ್ಲಿ ಜನರ ಜೀವನಮಟ್ಟ ಸುಧಾರಿಸುವುದು, ಮೂಲಭೂತ ನಾಗರಿಕ ಸೌಲಭ್ಯಗಳ ಲಭ್ಯತೆಯನ್ನು ಹೆಚ್ಚಿಸುವುದು, ಯೋಜನೆಗಳ ಪರಿಣಾಮಕಾರಿ ರೂಪುರೇಷೆ ಮತ್ತು ಅನುಷ್ಠಾನಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಿತು.
ಸಮಗ್ರ ಸಾಮಾಜಿಕ ಮೂಲಸೌಕರ್ಯ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳ ಮೂಲಕ ಅಂತರ್ಗತ ನಗರಾಭಿವೃದ್ಧಿಯನ್ನು ಉತ್ತೇಜಿಸುವುದು ಹಾಗೂ ನಗರವಾಸಿಗಳ ಜೀವನಮಟ್ಟವನ್ನು ಸುಧಾರಿಸುವ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಮೈಸೂರಿನಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಬಳಿಕ ಅದರ ಫಲಿತಾಂಶಗಳು, ಸಾಧಕ-ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ರಾಜ್ಯದ ಇತರ ನಗರ ಪ್ರದೇಶಗಳಿಗೂ ವಿಸ್ತರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ. ಬಿ. ಕಾವೇರಿ, ಪೌರಾಡಳಿತ ನಿರ್ದೇಶನಾಲಯದ (DMA) ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ನಿರ್ದೇಶಕರು ಹಾಗೂ ಸಂಬಂಧಿತ ಇಲಾಖೆಗಳ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.






