ಬೆಂಗಳೂರಿನ ಡೆಂಟಿಸ್ಟ್ ಪ್ರಿಯಾಂಕ ಅಭಿಷೇಕ್ ಈಗ ‘ಮಿಸೆಸ್ ಇಂಡಿಯಾ- 2019’

Promotion

ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ಮದುವೆ ನಂತರ ಮಹಿಳೆಯರ ದಿನ ನಿತ್ಯದ ಕೆಲಸಗಳಲ್ಲೇ ಕಳೆದುಹೋಗುತ್ತದೆ. ಗಂಡ, ಮಕ್ಕಳು ಹೀಗೆ ಸಂಸಾರ ನಿರ್ವಹಣೆಯಲ್ಲಿಯೇ ದಿನ ಕಳೆದುಹೋಗುತ್ತದೆ. ಇನ್ನು ವೃತ್ತಿನಿರತ ಮಹಿಳೆಯರಾದರೆ ಕೇಳುವಂತೆಯೇ ಇಲ್ಲ ! ಕೆಲಸದ ಜತೆಗೆ ಮನೆ ನಿರ್ವಹಣೆ ಹೊಣೆ ಎರಡನ್ನೂ ನಿಭಾಯಿಸಬೇಕಾದ ಅನಿವಾರ್ಯತೆ. ಆದರೆ ಕೆಲವರು ಮಾತ್ರ ಇದರೊಂದಿಗೆ ಸಾಧನೆಯ ಹೆಜ್ಜೆ ಹಾಕಿ ಸಮಾಜದಲ್ಲಿ ಮಾದರಿಯಾಗಿ ನಿಲ್ಲುತ್ತಾರೆ.

ಇಂತಹ ವಿಶೇಷ ಸಾಧಕಿಯರ ಸಾಲಿಗೆ ಸೇರ್ಪಡೆ ಬೆಂಗಳೂರಿನ ಪ್ರಿಯಾಂಕ ಅಭಿಷೇಕ್. ವೃತ್ತಿಯಲ್ಲಿ ಡೆಂಟಿಸ್ಟ್, ಎರಡು ಮಕ್ಕಳ ತಾಯಿ, ಸಂಸಾರ ನಿರ್ವಹಣೆ ಹೊಣೆ ಜತೆಗೆ ಇದೀಗ ಮಿಸೆಸ್ ಇಂಡಿಯಾ-2019 ಕಿರೀಟ ಇವರ ಶ್ರಮಕ್ಕೆ ಒಲಿದು ಬಂದಿದೆ.

ಮಿಸೆಸ್ ಇಂಡಿಯಾ ಕಿರೀಟ ಗಳಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ವರ್ಷಗಟ್ಟಲೇ ಶ್ರಮಿಸಬೇಕು. ಕೇವಲ ಸೌಂದರ್ಯ ಮಾತ್ರವಲ್ಲ ಬುದ್ಧಿಶಕ್ತಿ, ಸಾಮಾಜಿಕ ಕಳಕಳಿ ಹೀಗೆ ಹಲವು ವಿಷಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವ ಜತೆಗೆ ಹಲವರೊಂದಿಗೆ ಪೈಪೋಟಿ ನಡೆಸಿ ಗೆದ್ದರೆ ಮಾತ್ರ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಳ್ಳಬಹುದು.

ಕಳೆದ ಜೂನ್’ನಲ್ಲಿ ಪ್ರತಿಭಾ ಶಾನ್ಶಿಮಠ್ ಅವರು ಆಯೋಜಿಸಿದ್ದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಪ್ರಿಯಾಂಕ ಅವರು ಸೆಪ್ಟೆಂಬರ್ 16ರಂದು ಚೆನ್ನೈನಲ್ಲಿ ದೀಪಾಲಿ ಫಡ್ನೀಸ್ ಆಯೋಜಿಸಿದ್ದ 7ನೇ ವರ್ಷದ ‘ಮಿಸೆಸ್ ಇಂಡಿಯಾ-2019’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಟ್ಟು 9 ಸುತ್ತುಗಳಲ್ಲಿ ಎಲ್ಲರನ್ನು ಹಿಂದಿಕ್ಕಿ ಅಂತಿಮವಾಗಿ ಮಿಸೆಸ್ ಇಂಡಿಯಾ ಪಟ್ಟ ಗಳಿಸಿದ್ದಾರೆ.

ವರ್ಷದ ಶ್ರಮ…: ಪ್ರಿಯಾಂಕ ಅವರು ಡೆಂಟಿಸ್ಟ್. ಮಿಸೆಸ್ ಇಂಡಿಯಾ ಆಗಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳಲು ಕೆಲ ತಿಂಗಳ ಮಟ್ಟಿಗೆ ತಮ್ಮ ಪ್ರಾಕ್ಟೀಸ್ ನಿಲ್ಲಿಸಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾತ್ರವಲ್ಲ ವರ್ಷದಿಂದ ಫಿಟ್ನೆಸ್, ಸೌಂದರ್ಯ ರಕ್ಷಣೆ, ಜನರಲ್ ನಾಲೆಡ್ಜ್ ಹೆಚ್ಚಿಸಿಕೊಳ್ಳಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಈ ಶ್ರಮದ ಫಲವೇ ಮಿಸೆಸ್ ಇಂಡಿಯಾ ಪಟ್ಟ.

ಕುಟುಂಬದ ಸಹಕಾರ… ಮಿಸೆಸ್ ಇಂಡಿಯಾ ಪಟ್ಟ ಒಲಿದು ಬರಲು ಮನೆಯವರ ಸಹಕಾರ ಕೂಡ ಮುಖ್ಯ ಎನ್ನುತ್ತಾರೆ ಪ್ರಿಯಾಂಕ ಅಭಿಷೇಕ್. ಪತಿ ಅಭಿಷೇಕ್, ಅಮ್ಮ, ಅಪ್ಪ ಹಾಗೂ ಅಕ್ಕ ಇದಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು ಅಮ್ಮ ಅಪ್ಪ ನೆರವಾದರೆ ಸ್ಪರ್ಧೆಗೆ ಸಿದ್ಧರಾಗಲು ಪತಿ ಹಾಗೂ ಅಕ್ಕ ಸಾಕಷ್ಟು ನೆರವಾಗಿದ್ದರು. ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸುತ್ತಾರೆ ಪ್ರಿಯಾಂಕ.

‘ಮಿಸೆಸ್ ಇಂಡಿಯಾ’ ಪಟ್ಟ ಮಾಡೆಲಿಂಗ್, ಸೌಂದರ್ಯಕ್ಕೆ ಸೀಮಿತವಲ್ಲ…

ಮಿಸೆಸ್ ಇಂಡಿಯಾ ಆಗಬೇಕು ಎಂದು ಆಸೆ ಇರುವವರಿಗೆ ಪ್ರಿಯಾಂಕ ಅವರು ಕೆಲ ಸಲಹೆಗಳನ್ನು ನೀಡುತ್ತಾರೆ. ಇದು ಕೇವಲ ಮಾಡೆಲಿಂಗ್, ಸೌಂದರ್ಯಕ್ಕೆ ಸೀಮಿತವಲ್ಲ. ಪ್ರಸ್ತುತ ವಿದ್ಯಾಮಾನಗಳ ಅರಿವು, ಸಾಮಾನ್ಯ ಜ್ಞಾನ, ನಡವಳಿಕೆ, ಡ್ಯಾನ್ಸ್, ಪೇಟಿಂಗ್ ಸೇರಿದಂತೆ ಹಲವು ವಿಷಯಗಳಲ್ಲಿ ನಿಮ್ಮ ಟ್ಯಾಲೆಂಟ್ ಎಲ್ಲವೂ ಗಣನೆಗೆ ಬರುತ್ತದೆ. ಇದಕ್ಕೆ ಉತ್ತಮ ಆಹಾರ ಪದ್ಧತಿ ಅನುಸರಿಸಬೇಕು. ಜತೆಗೆ ನಿತ್ಯ ವರ್ಕೌಂಟ್ ಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡುತ್ತಾರೆ ಮಿಸೆಸ್ ಇಂಡಿಯಾ ಪ್ರಿಯಾಂಕ ಅಭಿಷೇಕ್.

ಮಿಸೆಸ್ ಏಷ್ಯಾ, ಮಿಸೆಸ್ ಪ್ಲಾನೆಟ್ ಮುಂದಿನ ಗುರಿ:

ಸದ್ಯ ಮಿಸೆಸ್ ಕರ್ನಾಟಕ, ಮಿಸೆಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿರುವ ಪ್ರಿಯಾಂಕ ಮುಂದೆ ಮಿಸೆಸ್ ಪ್ಲಾನೆಟ್ ಹಾಗೂ ಮಿಸೆಸ್ ಏಷ್ಯಾ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಈ ಎರಡೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿರುವ ಇವರು ಇದರಲ್ಲಿ ಪಾಲ್ಗೊಂದು ತಮ್ಮ ಸಾಧನೆಯ ಹಾದಿಯಲ್ಲಿ ಸಾಗುವ ಭಯಕೆ ವ್ಯಕ್ತಪಡಿಸಿದ್ದಾರೆ.