ಚನ್ನರಾಯಪಟ್ಟಣ ವೃದ್ಧ ದಂಪತಿ ಹತ್ಯೆ ಪ್ರಕರಣ: ಹತ್ಯೆ ಆರೋಪಿಗಳಿಗೆ ಪೊಲೀಸರ ಫೈರಿಂಗ್

ಹಾಸನ, ಸೆಪ್ಟೆಂಬರ್ 01, 2020 (www.justkannada.in): ಆ.29 ರಂದು ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಶಂಕಿತ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಬಂಧಿಸುವ ವೇಳೆ ಆರೋಪಿಯಿಂದ ಪೊಲೀಸ್ ರ ಮೇಲೆ ಹಲ್ಲೆಗೆ ಯತ್ನಿಸಿದ ವೇಳೆ ಫೈರಿಂಗ್ ನಡೆಸಿದ ಬೇಲೂರು ಸಿಪಿಐ ಸಿದ್ದರಾಮೇಶ್ವರ್. ಕೊಲೆ ಆರೋಪಿಯನ್ನು ಶರಣಾಗುವಂತೆ ಮನವಿ ಮಾಡಿದರೂ ಜಗ್ಗದ ಕಾರಣ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಚನ್ನರಾಯಪಟ್ಟಣ ತಾಲೂಕು ಜೋಡಿಗಟ್ಟೆ ಬಳಿ ನಡೆದಿದೆ.

ಮಂಗಳವಾರ ಮುಂಜಾನೆ ಕೋಳಿ ಫಾರಂ ನಲ್ಲಿ ಅಡಗಿ ಕುಳಿತಿದ್ದ ಆರೋಪಿ ಬಂಧಿಸುವ ವೇಳೆ ಈ ಘಟನೆ ನಡೆದಿದೆ. ಪ್ರಸಾದ್ ಅಲಿಯಾಸ್ ಗುಂಡ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಶರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್. ಬಂಧಿಸಲು ಮುಂದಾದ ಜಿಲ್ಲಾ ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.

ಪರಿಣಾಮವಾಗಿ ಇನ್ಸ್ ಪೆಕ್ಟರ್ ಎಡಗೈಗೆ ಗಾಯವಾಗಿದ್ದು, ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಬೇಲೂರು ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ನಡೆಸಿದ್ದಾರೆ. ಆರೋಪಿ ಪ್ರಸಾದ್ ಮಂಡಿ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಈತನನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ಸ್ ಪೆಕ್ಟರ್ ವಿನಯ್ ಅವರು ಕೂಡ ಚಿಕಿತ್ಸೆಗಾಗಿ ಕಿಮ್ಸ್ ಹಾಸ್ಪತ್ರೆಗೆ ದಾಖಲಾಗಿದ್ದಾರೆ.

ಹಣಕ್ಕಾಗಿ ವೃದ್ಧ ದಂಪತಿಗಳನ್ನ ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರಸಾದ್ ಅನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಆಲಗೊಂಡನಹಳ್ಳಿ ಜೋಡಿ ಕೊಲೆ ಆರೋಪದ ಮೇಲೆ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಲಾಕ್ ಡೌನ್ ಹಿನ್ನಲೆ ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಒಂದು ತಿಂಗಳ ಹಿಂದೆ ಈ ಆರೋಪಿಗಳು ಬಂದಿದ್ದರು ಎನ್ನಲಾಗಿದೆ.