ಚನ್ನಪಟ್ಟಣ ಉಪಚುನಾವಣೆ: ನಾನು ಸ್ಪರ್ಧಿಯಲ್ಲ, ಇದು ಮಾಧ್ಯಮದವರ ಸೃಷ್ಟಿ : ಡಿಕೆಶಿ ಪುತ್ರಿ ಐಶ್ವರ್ಯ

ಬೆಂಗಳೂರು, ಜೂನ್,24,2024 (www.justkannada.in): ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ, ಅದಕ್ಕೆ ನನ್ನನ್ನ ಬಿಟ್ಟು ಬಿಡಿ ಎಂದು ಕೆಪಿಸಿಸಿ ಆಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದಾಸರಹಳ್ಳಿಯ ಸೌಂದರ್ಯ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಅಭ್ಯರ್ಥಿ ಎಂದು ಹೆಸರು ಚಾಲ್ತಿಯಲ್ಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐಶ್ವರ್ಯ, ನಾನು ಯಾವುದೇ ಆಕಾಂಕ್ಷಿಯಲ್ಲ, ನೀವೇ ಸೃಷ್ಟಿ ಮಾಡ್ತಿದ್ದೀರಾ. ನಾನು ಸ್ಪರ್ಧಿಯಲ್ಲ,ಇದು ಮಾಧ್ಯಮದವರ ಸೃಷ್ಟಿ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಕನಸು,ಅದನ್ನ ಸಾಧಿಸಲು ನನ್ನನ್ನು ಬಿಟ್ಟು ಬಿಡಿ,ರಾಜಕೀಯಕ್ಕೆ ಎಳೆಯಬೇಡಿ ಎಂದು ಐಶ್ವರ್ಯ ಕೈ ಮುಗಿದು ಮುನ್ನಡೆದರು.

ಶಾಲಾ-ಕಾಲೇಜು ಆಯ್ಕೆಯಲ್ಲಿ ಎಚ್ಚರ- ಮಕ್ಕಳ ಪೋಷಕರಿಗೆ ಕಿವಿಮಾತು

ಇದಕ್ಕೂ ಮುನ್ನ ಪೀಣ್ಯ ದಾಸರಹಳ್ಳಿಯ ಸೌಂದರ್ಯ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನಕ್ಕೊಂದು ಕಾಲೇಜು, ರಸ್ತೆಗೊಂದು ಶಾಲೆಗಳಿವೆ. ಅದರಲ್ಲಿ ಯಾವುದು ಉತ್ತಮ ಎಂಬುದನ್ನು ಬಹಳ ಎಚ್ಚರಿಕೆಯಿಂದ ಪೋಷಕರು ಆಯ್ಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಬೇಕೆಂದು ಕಿವಿಮಾತು ಹೇಳಿದ್ದಾರೆ.

ಕೋಟಿ ಕೋಟಿ ಹಣ ಮಾಡುವುದು ಸಾಧನೆಯಲ್ಲ, ನಮ್ಮಿಂದ ಎಷ್ಟು ಜನ ಉದ್ಧಾರ ಆಗಿದ್ದಾರೆ ಎಂಬುದು ನಿಜವಾದ ಸಾಧನೆ ಎಂದು ಹೇಳಿದ ಐಶ್ವರ್ಯ ಡಿಕೆಶಿ ಅವರು, ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ನಡುವೆ ಕಂದಕಗಳು ಹೆಚ್ಚುತ್ತಿವೆ. ಸಂಬಂಧಗಳ ಸಂಪರ್ಕ ವೃದ್ಧಿಸುವಲ್ಲಿ ಪೋಷಕರು, ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶಿಕ್ಷಣ ನೀಡುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕಿದೆ ಎಂದು ಕರೆ ನೀಡಿದ ಐಶ್ವರ್ಯ, ಅದೃಷ್ಟ,ದುರಾದೃಷ್ಟ ಇತ್ಯಾದಿಗಳನ್ನು ಹೇಳ್ತೇವೆ, ಆದರೆ ಅವೆಲ್ಲಾ ಸುಳ್ಳು,ನಮ್ಮ ಶ್ರಮ, ಅವಕಾಶಗಳ ಸದುಪಯೋಗ ನಮ್ಮ ಜೀವನವನ್ನು ರೂಪಿಸುತ್ತವೆ ಎಂದು ಹೇಳಿದರು.

ಪಿಯುಸಿ, ನೀಟ್, ಜೆಇಇ ಪರೀಕ್ಷೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ 76 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಛೇರ್ಮನ್ ಸೌಂದರ್ಯ ಪಿ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಿಇಓ ಕೀರ್ತನ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಸುನಿತಾ ಮಂಜಪ್ಪ, ನಿರ್ದೇಶಕರಾದ ವರುಣ್ ಕುಮಾರ್, ಪ್ರತಿಕ್ಷಾ, ನಿಷ್ಮಿತಾ, ಪ್ರಿನ್ಸಿಪಾಲ್ ಮಹಾಬಲೇಶ್ವರ ತುಂಗಾ, ಕೃಪಾ, ಚಿನ್ಮಮ್ಮ ಕಾವೇರಪ್ಪ, ಸಂಜೀವ್ ಸೋಲಂಕಿ ವೇದಿಕೆಯಲ್ಲಿದ್ದರು.

Key words: Channapatna, by-election, not, contestant, Aishwarya DK Shivakumar