ನನಗೆ ಮತ್ತೆ ಖಾತೆ ಬದಲಾಯ್ತಾ.? ಯಾವುದು ತೆಗೆದು, ಯಾವುದು ಕೊಟ್ರು..? ನನಗೆ ಗೊತ್ತಿಲ್ಲಪ್ಪ ಎಂದ ಸಚಿವ ಮಾಧುಸ್ವಾಮಿ…

ಮೈಸೂರು,ಜನವರಿ,22,2021(www.justkannada.in):  ಅಸಮಾಧಾನಿತ ಸಚಿವರನ್ನ ಸಮಾಧಾನ ಪಡಿಸಲು ಸಿಎಂ ಬಿಎಸ್ ಯಡಿಯೂರಪ್ಪ ಮತ್ತೆ ಆರು ಮಂದಿ ಸಚಿವರ ಖಾತೆ ಬದಲಿಸಿ ಆದೇಶ ಹೊರಡಿಸಿದ್ದರು. ಇನ್ನು ತಮ್ಮ ಖಾತೆ ಮತ್ತೆ ಬದಲಾವಣೆ ಬಗ್ಗೆ  ಸಚಿವ ಮಾಧುಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನನಗೆ ಮತ್ತೆ ಖಾತೆ ಬದಲಾಯ್ತಾ.? ಯಾವುದು ತೆಗೆದು, ಯಾವುದು ಕೊಟ್ರು..? ನನಗೆ ಏನೂ ಗೊತ್ತಿಲ್ಲಪ್ಪ,ಈಗ ನೀವು ಹೇಳಿದ ಮೇಲೆಯೇ ಖಾತೆ ಬದಲಾಗಿದ್ದು ಗೊತ್ತಾಗಿದ್ದು ಎಂದು ಸಚಿವ ಮಾಧುಸ್ವಾಮಿ ಅಚ್ಚರಿ ಹೇಳಿಕೆ ನೀಡಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಮಾಧುಸ್ವಾಮಿ, ಬೆಳಗ್ಗೆಯಿಂದ ಪ್ರವಾಸದಲ್ಲಿದ್ದೇನೆ. ನನಗೆ ಮತ್ತೆ ಖಾತೆ ಬದಲಾದ ಬಗ್ಗೆ ಮಾಹಿತಿ ಇಲ್ಲ‌. ಖಾತೆ ಬದಲಾಗಿದ್ದು ನನ್ನ ಗಮನಕ್ಕೂ ಬಂದಿಲ್ಲ. ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನನಗೆ ಸ್ವಲ್ಪ ಬೇಸರವಾಗಿದ್ದು ನಿಜ. ಹಾಗಂತಾ ಯಾರು ಯಾವ ಖಾತೆಯನ್ನು ಸುದೀರ್ಘವಾಗಿ ನಿಭಾಯಿಸಲು ಸಾಧ್ಯವಿಲ್ಲ. ಇದೇನೂ ನನಗೆ ಡಿಮೋಷನ್ ಅಲ್ಲ. ವೈದ್ಯಕೀಯ ಖಾತೆಯೂ ಪ್ರಭಾವಿ ಖಾತೆ. ಇದನ್ನು ನಿಭಾಯಿಸಲು ಕೂಡ ನಾನು ಶಕ್ತ. ನನ್ನ ಕೈಯಲ್ಲಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಯಾರು ಅಂದುಕೊಳ್ಳಬೇಡಿ. ಕೆಲ ಪ್ರಭಾವಿ ಖಾತೆಗಳು ಸಿಎಂ ಬಳಿಯೇ ಇದ್ದರೆ ಅವರಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತೆ. ಆದರೆ, ಸಿಎಂ ತಾವು ನಿಭಾಯಿಸುತ್ತೇನೆ ಎಂದು ಕೆಲವನ್ನು ಇಟ್ಟು ಕೊಂಡಿದ್ದಾರೆ. ಇದು ಅವರ ಪರಮಾಧಿಕಾರ. ಹಿಂದೆಯೂ ಸಿಎಂಗಳು ಪ್ರಭಾವಿ ಖಾತೆಗಳ‌ ತಮ್ಮ ಬಳಿ ಇಟ್ಟು ಕೊಂಡಿದ್ದರು ಎಂದು ಪ್ರತಿಕ್ರಿಯಿಸಿದರು.

ಸಣ್ಣ ನೀರಾವರಿ ಖಾತೆ ತೆಗೆದಿರುವುದು ಹರ್ಟ್ ಮಾಡಿತ್ತು‌ ಎಂದು ಪುನರುಚ್ಛಾರ ಮಾಡಿದ ಸಚಿವ ಮಾಧುಸ್ವಾಮಿ, ನಾನು ಗ್ರಾಮೀಣ ಪ್ರದೇಶದ ಹಿನ್ನೆಲೆ ಉಳ್ಳವನು. ಆದ್ದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ಖಾತೆ ಬೇಕು ಅಂತ ಕೇಳಿದ್ದೆ. ಒಂದು ಖಾತೆಯಲ್ಲಿ ಇರುತ್ತೇವೆ‌.  ಏಕಾಏಕಿ ಖಾತೆ ಬದಲಾದಾಗ ಬೇಸರ ಆಗೋದು ಸಹಜ. ಆದರೆ ನನಗೆ ಡಿಮೋಷನ್ ಆಗಿಲ್ಲ. ವೈದ್ಯಕೀಯ ಶಿಕ್ಷಣ ಖಾತೆಯೂ ದೊಡ್ಡದು. ಕಾನೂನು ಖಾತೆಗೆ ಹೋಲಿಸಿದ್ರೆ ಮೆಡಿಕಲ್ ಎಜುಕೇಷನ್ ನಾಲ್ಕುಪಟ್ಟು ದೊಡ್ಡ ಖಾತೆ‌. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ ಎಂದರು.

ಸುತ್ತೂರು ಮಠಕ್ಕೆ ನಾನು ಹಳೆಯ ವಿದ್ಯಾರ್ಥಿ. ಹೀಗಾಗಿ ಬಹಳ ದಿನಗಳ‌ ಬಳಿಕ ಮಠಕ್ಕೆ ಬಂದಿದ್ದೇನೆ. ಹೀಗಾಗಿ ಹೆಚ್ಚು ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದೆ‌ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಿಎಂ ಬಳಿ ಇಂಧನ ಬೆಂಗಳೂರು ನಗರಾಭಿವೃದ್ಧಿ ಖಾತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಯಾವ ಖಾತೆಗಳನ್ನಾದರೂ ಇಟ್ಟುಕೊಳ್ಳಬಹುದು. ಇನ್ನು ಒಂದಿಬ್ರು ಸಚಿವರಾಗುವವರಿದ್ದಾರೆ. ಹೀಗಾಗಿ ಕೆಲ ಖಾತೆಗಳನ್ನ‌ ಸಿಎಂ ಉಳಿಸಿಕೊಂಡಿದ್ದಾರೆ. ಎಂದು ಸಚಿವ ಜೆ.ಸಿ.ಮಾಧುಸ್ವಾಮಿ  ಸ್ಪಷ್ಟನೆ ನೀಡಿದರು.

Key words: changed-department- Minister-JC  Madhuswamy-mysore