ಜುಲೈ ಮೂರನೇ ವಾರ SSLC ಪರೀಕ್ಷೆ, ಈ ತಿಂಗಳಾಂತ್ಯಕ್ಕೆ ವೇಳಾಪಟ್ಟಿ : ಸಚಿವ ಸುರೇಶ್ ಕುಮಾರ್

 

ಚಾಮರಾಜನಗರ, ಜೂ.19, 2021 : ( www.justkannada.in news ) ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಜುಲೈ ಮೂರನೇ ವಾರ ನಡೆಸಲಾಗುವುದು ಅದಕ್ಕೆ ಸಂಬಂಧಪಟ್ಟ ಪರೀಕ್ಷಾ ವೇಳಾಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು ಹೇಳಿದಿಷ್ಟು…

jk

ಎಲ್ಲರ ನಿರೀಕ್ಷೆಯಂತೆ ಎಸೆಸೆಲ್ಸಿ ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ನಡೆಸಲಾಗುವುದು. ಮೊದಲ ದಿನ ಸಮಾಜ ವಿಜ್ಞಾನ .ಗಣಿತ. ವಿಜ್ಞಾನ ವಿಷಯಗಳನ್ನು ನಡೆಸಲಾಗುವುದು. ಎರಡನೇ ದಿನ ಭಾಷವಾರು ವಿಷಯಗಳನ್ನು ಪರೀಕ್ಷೆ ನಡೆಸಲಾಗುವುದು ಈ ಸಂದರ್ಭದಲ್ಲಿ ಮಕ್ಕಳಿಗೆ ಇಲಾಖೆ ವತಿಯಿಂದ N-95 ಮಾಸ್ಕನ್ನು ಉಚಿತವಾಗಿ ವಿತರಿಸಲಾಗುವುದು.

ವಿದ್ಯಾರ್ಥಿಗಳಿಗೆ ಈ ಬಾರಿ ಕೋರೋನ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚು ಮಾಡಲಾಗುವುದು ಅನೇಕ ಸ್ವಯಂಸೇವಾ ಸಂಸ್ಥೆಗಳು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್. ಸ್ಯಾನಿಟೈಸರ್ ವಿತರಿಸಲು ಮುಂದೆ ಬಂದಿವೆ ಅವರ ಸೇವೆಯನ್ನು ಕೂಡ ಬಳಸಿಕೊಳ್ಳಲಾಗುವುದು.

ಕಳೆದ ವರ್ಷದಂತೆ ಈ ಬಾರಿಯೂ ಎಲ್ಲಾ ತರಗತಿಗಳಿಗೂ ದೂರದರ್ಶನದ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಪುನರಾರಂಭಿಸಲಾಗುವುದು. ಸೇತುಬಂಧ ಕಾರ್ಯಕ್ರಮದಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳು ಕಲಿಯಬೇಕಾದ ಅಂಶಗಳನ್ನು ಪುನರ್ ಮನನ ಮಾಡಿ ಮುಂದಿನ ತರಗತಿಯ ವಿಷಯಗಳನ್ನು ಕಲಿಸಲಾಗುವುದು. ಇದಕ್ಕಾಗಿ ಎಲ್ಲ ಸಂಪನ್ಮೂಲಗಳನ್ನು ಈಗಾಗಲೇ ಕ್ರೋಢೀಕರಿಸಲಾಗಿದೆ. ಇದಕ್ಕಾಗಿ ದೂರದರ್ಶನದ ಸಂಬಂಧಪಟ್ಟ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ಒಂದು ಅಂತಿಮ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಕೋವಿಡ್ ಕೆಲಸಗಳಿಗೆ ಈಗಾಗಲೇ ನಿಯೋಜನೆಗೊಂಡಿದ್ದು, ಆ ಸಂಘದ ಅಧ್ಯಕ್ಷರು ಈಗಾಗಲೇ ಆಯುಕ್ತರಿಗೆ ಪತ್ರ ಬರೆದು ಕೋವಿಡ್ ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಶೀಘ್ರ ಶಿಕ್ಷಕರನ್ನು ಕೋವಿಡ್ ಕೆಲಸದಿಂದ ನಿಯುಕ್ತಿಗೊಳಿಸಿ ಮತ್ತೆ ಮೂಲ ಕೆಲಸಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು ಎಂದರು.

key words : chamaraja.nagar-education-minister-suresh.kumar-sslc-exams-preparation