ಮೈಸೂರು, ಫೆಬ್ರವರಿ,14, 2026 (www.justkannada.in): ವಿದ್ಯುತ್ ಅವಘಡಗಳ ಪ್ರಮಾಣ ತಪ್ಪಿಸಿ ಅದನ್ನು ಶೂನ್ಯಕ್ಕೆ ಇಳಿಸುವುದು ಅತ್ಯಂತ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸೆಸ್ಕ್ ವ್ಯಾಪ್ತಿಯ ಪ್ರತಿಯೊಬ್ಬ ಪವರ್ ಮ್ಯಾನ್ ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(659) ಮೈಸೂರು ವಿಭಾಗದ ವತಿಯಿಂದ ರಾಜೇಂದ್ರನಗರದ ಕವಿಪ್ರನಿ ನೌಕರರ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ವಸತಿಗೃಹ ಶಂಕುಸ್ಥಾಪನೆ, ನವೀಕೃತ ಸಮುದಾಯ ಭವನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿದರು.
“ವಿದ್ಯುತ್ ಅವಘಡಗಳಿಂದ ಜೀವಹಾನಿ, ಆಸ್ತಿ ನಷ್ಟದ ಜೊತೆಗೆ ಮೃತರ ಕುಟುಂಬದ ಸಂಕಷ್ಟಕ್ಕೆ ಕಾರಣವಾಗಲಿದೆ. ಆದ್ದರಿಂದ ಪವರ್ ಮ್ಯಾನ್ಗಳು ಕೆಲಸ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯನಿರ್ವಹಿಸಬೇಕಿದೆ. ಇದರಿಂದ ವಿದ್ಯುತ್ ಅವಘಡಗಳ ಪ್ರಮಾಣ ತಗ್ಗಿಸಬಹುದಾಗಿದ್ದು, ಬಹುಮುಖ್ಯವಾಗಿ ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಸಾಧಿಸಬಹುದು” ಎಂದರು.
“ಯಾವುದೇ ಸಂಸ್ಥೆಯ ಪ್ರಗತಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಪರಿಸ್ಪರ ಸಹಕಾರ ಮನೋಭಾವದಿಂದ ಕೈಜೋಡಿಸಿ, ಕಾರ್ಯನಿರ್ವಹಿಸಿದರೆ ಮಾತ್ರ ಸಂಸ್ಥೆ ಪ್ರಗತಿ ಸಾಧಿಸಲಿದೆ. ಸೆಸ್ಕ್ ಸದಾಕಾಲ ಸಿಬ್ಬಂದಿಯೊಂದಿಗೆ ಇರಲಿದ್ದು, ಸಂಸ್ಥೆಯ ಉಳಿವು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪವರ್ ಮ್ಯಾನ್ ಗಳು ಯೋಧರಂತೆ :
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, “ಪವರ್ ಮ್ಯಾನ್ ಗಳು ನಮ್ಮ ಸಂಸ್ಥೆಯ ಶಕ್ತಿಯಾಗಿದ್ದು, ಯೋಧರಂತೆ 24 ಗಂಟೆಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುವುದರಿಂದ ಸಂಸ್ಥೆಗೆ ಒಳ್ಳೆಯ ಹೆಸರು ಬರಲು ಕಾರಣವಾಗಿದೆ. ಹೀಗಾಗಿ ಪವರ್ ಮ್ಯಾನ್ ಗಳು ಹಾಗೂ ಅವರ ಕುಟುಂಬಕ್ಕೆ ನೆರವಾಗಲು ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಪವರ್ ಮ್ಯಾನ್ ಗಳ ಸುರಕ್ಷತೆ ದೃಷ್ಟಿಯಿಂದ ಸುರಕ್ಷಿತಾ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ. ಆದ್ದರಿಂದ ವಿದ್ಯುತ್ ಅಪಘಾತಗಳನ್ನು ತಪ್ಪಿಸುವತ್ತ ನಿಗಾವಹಿಸಬೇಕಿದ್ದು, ಇದಕ್ಕಾಗಿ ಹೆಚ್ಚಿನ ನಿರ್ವಹಣೆ ಮಾಡುವ ಮೂಲಕ ವಿದ್ಯುತ್ ಅಪಘಾತ ಆಗದಂತೆ ಕ್ರಮವಹಿಸಬೇಕಿದೆ” ಎಂದರು.
ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್ ಮಾತನಾಡಿ, “ರಾಜ್ಯದ ಇತರೆ ಎಸ್ಕಾಂಗಳಿಗೆ ಹೋಲಿಸಿದರೆ ಸೆಸ್ಕ್ ನಲ್ಲಿ ಸಿಬ್ಬಂದಿ ಸುರಕ್ಷತೆ ಸೇರಿದಂತೆ ವರ್ಗಾವಣೆ, ಬಡ್ತಿ, ಅನುಕಂಪದ ಆಧಾರದ ಕೆಲಸ ಎಲ್ಲ ಸೌಲಭ್ಯಗಳು ಲಭಿಸುತ್ತಿದೆ. ಇದರ ಜತೆಗೆ ನೌಕರರಿಗೆ ಸೂಕ್ತ ತರಬೇತಿ ಕಲ್ಪಿಸಿ, ಕೆಳ ಕ್ರಮದ ಸಿಬ್ಬಂದಿಗೂ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು” ಒತ್ತಾಯಿಸಿದರು.
“ಯಾವುದೇ ಕಾರಣಕ್ಕೂ ವಿದ್ಯುತ್ ನಿಗಮಗಳು ಖಾಸಗೀಕರಣ ಆಗಬಾರದು, ಈ ಬಗ್ಗೆ ಸಿಬ್ಬಂದಿ ಆಘಾತಕ್ಕೆ ಸಿಲುಕಿದ್ದಾರೆ. ಖಾಸಗೀಕರಣ ಆದರೆ ಜನರಿಗೆ ಈಗ ನೀಡುತ್ತಿರುವ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿದ್ಯುತ್ ನಿಗಮಗಳು ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ಕೆ.ಬಲರಾಮ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಪವರ್ ಮ್ಯಾನ್ ಎ.ಜೆ. ವರುಣ್ ಕುಮಾರ್ ಅವರ ಕುಟುಂಬದವರಿಗೆ 1.06 ಕೋಟಿ ರೂ.ಗಳ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ನಂತರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್, ಖಜಾಂಚಿ ವರದರಾಜ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಮುಖ್ಯ ಇಂಜಿನಿಯರ್ ಎ.ಆರ್. ಮೃತ್ಯುಂಜಯ, ಪೂರ್ಣಚಂದ್ರ ತೇಜಸ್ವಿ, ಮೋಹನ್ ಸೇರಿದಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(659)ದ ಪದಾಧಿಕಾರಿಗಳು ಇದ್ದರು.
Key words: number, electrical accidents, zero, CESC, Ramesh BandishiddeGouda







