ಮೈಸೂರು,ನವೆಂಬರ್,13,2026 (www.justkannada.in): ಮೇಕೆದಾಟು ಅಣೆಕಟ್ಟು ಕಟ್ಟಲು ಕೇಂದ್ರದ ಸಹಕಾರ ಬೇಕು ಎಂದು ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಮೈಸೂರಿನಲ್ಲಿ ಕಾಸ್ಮೋಸ್ ತಾರಾಲಯ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಮ್ಮ ವಿದ್ಯಾರ್ಥಿಗಳು ಖಗೋಳ ತಂತ್ರಜ್ಞಾನವನ್ನು ಸುಲಭವಾಗಿ ಮುಟ್ಟಬೇಕು. ಖಗೋಳ ತಂತ್ರಜ್ಞಾನ ಕೇವಲ ರಾಕೆಟ್ ಗೆ ಮಾತ್ರ ಸಿಮೀತವಾಗಿಲ್ಲ. ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಖಗೋಳ ತಂತ್ರಜ್ಞಾನ, ವಿಜ್ಞಾನ – ತಂತ್ರಜ್ಞಾನಕ್ಕೆ ಬಹಳ ದೊಡ್ಡ ಭವಿಷ್ಯವಿದೆ ಎಂದರು.
ಮೇಕೆದಾಟು ಕಟ್ಟಲು ಕೇಂದ್ರದ ಸಹಕಾರ ಬೇಕು. ಸುಪ್ರೀಂ ಕೋರ್ಟ್ ಕೂಡ ಮೇಕೆದಾಟು ಕಟ್ಟಲು ಅವಕಾಶ ಕೊಟ್ಟಿದೆ. ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ಬೇಕಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗಲ್ಲ. ಅವರಿಗೂ ಅನುಕೂಲ ಆಗುತ್ತದೆ. ನಾವೆಲ್ಲಾ ಒಟ್ಟಾಗಿ ಬಾಳಲು, ಬೆಳೆಯಲು ಮೇಕೆದಾಟು ಯೋಜನೆ ಬೇಕಿದೆ. ತಮಿಳುನಾಡು,ಕೇರಳ, ಪಾಂಡಿಚೇರಿ, ಬೆಂಗಳೂರಿಗೆ ಅನುಕೂಲ ಆಗುತ್ತದೆ. ದಯವಿಟ್ಟು ಸಹಾಯ ಮಾಡಿ. ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತು ನಾವು ಒಟ್ಟಾಗಿ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವೇದಿಕೆಯಲ್ಲೇ ಸಿಎಂ ಡಿ.ಕೆ ಶಿವಕುಮಾರ್ ಮನವಿ ಮಾಡಿದರು.







