ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಅರ್ಥಪೂರ್ಣವಾಗಿ ಸರಳ ದಸರಾ ಆಚರಿಸಬೇಕು- ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಸೆಪ್ಟೆಂಬರ್ 19,2020(www.justkannada.in): ಸರಳ ಹಾಗೂ ಸಾಂಪ್ರದಾಯಿಕವಾಗಿ ಈ ಬಾರಿ ದಸರಾ ಆಚರಿಸುತ್ತಿರುವದರಿಂದ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಕೋವಿಡ್ ಹಿನ್ನೆಲೆಯಲ್ಲಿ ಉನ್ನತಾಧಿಕಾರ ಸಮಿತಿಯಲ್ಲಿ ತೀರ್ಮಾನಿಸಿದಂತೆ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಸರಳವಾಗಿ ದಸರಾ ಆಚರಿಸಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ದಸರಾ ಕುರಿತು ಶನಿವಾರ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ಗಜಪಡೆ ಸ್ವಾಗತ ಕಾರ್ಯಕ್ರಮವನ್ನು ಸಂಪ್ರದಾಯದಂತೆ ಆರಮನೆ‌ ಆವರಣದಲ್ಲಿ ಆಯೋಜಿಸಿದಲು ತಿಳಿಸಿದರು.

ಜಿಲ್ಲಾಧಿಕಾರಿ ಬಿ. ಶರತ್ ಅವರು ಮಾತನಾಡಿ, 5 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸ್ವಾಗತ ಮತ್ತು ಆಮಂತ್ರಣ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ದೀಪಾಲಂಕಾರ ಸಮಿತಿ, ಹಾಗೂ ಸ್ವಚ್ಚತೆ ಮತ್ತು ವ್ಯವಸ್ಥೆ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದರು.

ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಗೂ ಜಂಬೂ ಸವಾರಿಗೆ ಎಷ್ಟು ಜನರು ಸೇರಿಸಲು ಅನುಮತಿ ಸಿಗುವುದೋ ನೋಡಿಕೊಂಡು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುವುದು‌ ಎಂದರು.
ಹಿಂದಿನ ವರ್ಷಗಳಂತೆ ಚೆಸ್ಕಾಂ ವತಿಯಿಂದ ದೀಪಾಲಂಕಾರ ಮಾಡಲಾಗುವುದು ಎಂದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೇಗ ಕಲಾವಿದರನ್ನು ಆಯ್ಕೆ ಮಾಡುವಂತೆ ಸಮಿತಿಯ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಎಸ್.ಎ‌. ರಾಮದಾಸ್ ಅವರು ಕಳೆದ ವರ್ಷ‌‌ ಅರಮನೆ ಆವರಣದಲ್ಲಿ ಆರಂಭಿಸಿದ್ದ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಬಾರಿಯು ಮುಂದುವರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕೋರಿದರು.ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ಶಾಸಕರಾದ ಜಿ.ಟಿ‌.ದೇವೇಗೌಡ, ಎಸ್‌.ಎ‌.ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಡಿ. ಭಾರತಿ, ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

key words: celebrate – meaningful -simple Dasara – Minister- ST Somashekhar