ಡ್ಯಾಂನಲ್ಲಿ ನೀರಿಲ್ಲ ಅಂತಾ ಅಫಿಡವಿಟ್ ಹಾಕಿ ನಂತರ ಯಾವುದೋ ಒತ್ತಡದಲ್ಲಿ ನೀರು ಹರಿಸ್ತಾರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ನವದೆಹಲಿ,ಸೆಪ್ಟಂಬರ್,20,2023(www.justkannada.in): ಕಾವೇರಿ ನೀರು ವಿವಾದ ಸಂಬಂಧ ಡ್ಯಾಂನಲ್ಲಿ ನೀರಿಲ್ಲ ಅಂತಾ ಸುಪ್ರೀಂಕೋರ್ಟ್ ಗೆ  ಅಫಿಡವಿಟ್ ಹಾಕ್ತಾರೆ.  ನಂತರ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಸಹ ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವ ಹಿನ್ನೆಲೆ ಈ ಕುರಿತು ಇಂದು ನವದೆಹಲಿಯಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯದ ಸಂಸದರು, ಕೇಂದ್ರ ಸಚಿವರು, ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಿದರು.

ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಕರ್ನಾಟಕ ರಾಜ್ಯದ ಹಿತ ಕಾಪಾಡುವಲ್ಲಿ ನಮ್ಮ ಬದ್ಧತೆ ಇದೆ.  ತಮಿಳುನಾಡಿಗೆ ಮೊದಲು ನೀರು ಹರಿಸಿ ಈಗ ಸಭೆ ಕರೆದಿದ್ದಾರೆ.  ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡದಂತೆ ಹೇಳಿದ್ದೇನೆ. ನೀರು ಹರಿಸುವುದಕ್ಕೂ ಮುನ್ನ ಯಾರನ್ನ ಕೇಳಿದರು ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ ಅಂತಾ ಕೇಳಿದ್ದೇನೆ. ಕಾವೇರಿ ನೀರು ವಿಚಾರದಲ್ಲಿ ರಾಜಕೀಯ ಮಾಡದಂತೆ ಸೂಚನೆ ನೀಡಿದ್ದೇನೆ ಎಂದರು.

ನಾಳೆ ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ನೀರು ವಿಚಾರವಾಗಿ ವಿಚಾರಣೆ ಇದೆ. ನಮ್ಮ ಡ್ಯಾಂ ಗಳಲ್ಲಿ ನೀರಿಲ್ಲ ಎಂದು ಅಫಿಡವಿಟ್ ಹಾಕುತ್ತಾರೆ. ಮತ್ತೆ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಾರೆ ಎಂದು ಪ್ರಹ್ಲಾದ್ ಜೋಶಿ ಅಸಮಾಧಾಣ ವ್ಯಕ್ತಪಡಿಸಿದರು.

Key words: cavery- water-dispute-meeting- Union Minister- Prahlad Joshi.