ಕಾರ್ಮಿಕ ದಿನದಂದೇ ಸಿಬ್ಬಂದಿಗೆ “ಗಿಫ್ಟ್‌”  ನೀಡಿದ ಸೆಸ್ಕಾಂ..!

Cescom gives 'gift' to employees on Labour Day

ಮೈಸೂರು, ಮೇ.೦೧,೨೦೨೫: ಸೆಸ್ಕ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸೆಸ್ಕ್‌ನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಹೇಳಿದರು.

ಸಿಬ್ಬಂದಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆಗಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಕ್ಯಾಶ್ ಲೆಸ್ ಹೆಲ್ತ್‌ ಕಾರ್ಡ್‌ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಿಗಮದ ಎಲ್ಲ ಸಿಬ್ಬಂದಿಗೆ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲು ಎಷ್ಟೇ ಅಡೆತಡೆಗಳು ಉಂಟಾದರೂ, ಸಿಬ್ಬಂದಿಯಿಂದ ಹಣ ಪಡೆಯದೆ, ಆರ್ಥಿಕ ಹೊರೆಯನ್ನು ಮಿತಿಗೊಳಿಸಿ  ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಈ ಸೌಲಭ್ಯ ಕೇವಲ ಸಿಬ್ಬಂದಿಗೆ ಮಾತ್ರವಲ್ಲದೇ ಅವರ ಕುಟುಂಬದ ಎಲ್ಲ ಸದಸ್ಯರಿಗೆ  ದೊರೆಯಲಿದೆ. ರಾಜ್ಯದ ಯಾವುದೇ ಎಸ್ಕಾಂಗಳಲ್ಲಿ ನೀಡದ ಸೌಲಭ್ಯವನ್ನು ಸೆಸ್ಕ್‌ ವತಿಯಿಂದ ಮೊದಲ ಬಾರಿಗೆ ನೀಡಲಾಗುತ್ತಿದೆ,” ಎಂದರು.

“ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಸಾಮಗ್ರಿಗಳನ್ನು ಎಲ್ಲ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ  ಏಕಕಾಲದಲ್ಲಿ ನೀಡಿದ್ದು, ಅದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು,” ಎಂದರು.

“ಪವರ್ ಮೆನ್ ಮತ್ತು ಸೆಕ್ಷನ್‌ ಅಧಿಕಾರಿಗಳು ಸಂಸ್ಥೆಯ ತಳಹದಿಯಾಗಿದ್ದು, ಗ್ರಾಹಕರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ  ವ್ಯವಹರಿಸುವ ಜತಗೆ, ನಿಗದಿತ ಸಮಯಕ್ಕೆ ಫೀಡರ್, ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆ ಮಾಡಲು ಸಮರೋಪಾದಿಯಲ್ಲಿ ಕೆಲಸವನ್ನು ಮಾಡಬೇಕಿದ್ದು, ವಿದ್ಯುತ್ ಅಪಘಾತ ಮತ್ತು ಅಡಚಣೆಯಾದಂತೆ ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಿ,” ಎಂದು ಕರೆ ನೀಡಿದರು.

ಕ್ಯಾಶ್ ಲೆಸ್ ಹೆಲ್ತ್‌ ಕಾರ್ಡ್‌ ವಿಶೇಷತೆ: 

ಸೆಸ್ಕ್‌ನಲ್ಲಿ ಕಾರ್ಯನಿರ್ವಹಿಸುವ 6351 ಸಿಬ್ಬಂದಿ ಹಾಗೂ ಅವರ ಕುಟುಂಬದ 19,468 ಸದಸ್ಯರು ಸೇರಿದಂತೆ 25,819 ಮಂದಿಗೆ ಅನುಕೂಲವಾಗುವಂತೆ ಪ್ರತಿ ಕುಟಂಬಕ್ಕೆ 2 ಲಕ್ಷ ರೂ.ಗಳ ಕ್ಯಾಶ್ ಲೆಸ್ ಹೆಲ್ತ್‌ ಕಾರ್ಡ್‌ ನೀಡಲಾಗಿದೆ. ಅಲ್ಲದೇ ಹೆಚ್ಚುವರಿ ವೆಚ್ಚಗಳಿಗೆ 3 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯನ್ನು ಜಾರಿಯಾದ ದಿನದಿಂದ ಈವರೆಗೂ 147 ಪ್ರಕರಣಗಳಲ್ಲಿ 43 ಸಿಬ್ಬಂದಿ ಹಾಗೂ 104 ಮಂದಿ ಅವಲಂಬಿತರು ಇದರ ಲಾಭ ಪಡೆದಿದ್ದು, 94 ಲಕ್ಷ ರೂ.ಗಳನ್ನು ಈಗಾಗಲೇ ವಿತರಿಸಲಾಗಿದೆ. ಕ್ಯಾಶ್ ಲೆಸ್ ಹೆಲ್ತ್‌ ಕಾರ್ಡ್‌ ಮೂಲಕ ರಾಜ್ಯದ 1413 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಎ ಶ್ರೇಣಿಯ ರೇಟಿಂಗ್‌:

ಸೆಸ್ಕ್‌ ಅಧ್ಯಕ್ಷ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, “ನಿಗಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಸಹಕಾರದಿಂದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತಕ್ಕೆ ಎ ಶ್ರೇಣಿಯ ರೇಟಿಂಗ್‌ ದೊರೆತಿದೆ. ನಿಗಮ ವ್ಯಾಪ್ತಿಯಲ್ಲಿ ವಿದ್ಯುತ್‌ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ತಪ್ಪದೇ ಸುರಕ್ಷತಾ ಪರಿಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ,” ಎಂದರು.

ಸಮಾರಂಭದಲ್ಲಿ ಸೆಸ್ಕ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಅಧೀಕ್ಷಕ ಇಂಜಿನಿಯರ್‌ ಸುನೀಲ್‌, ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್, ಪ್ರಧಾನ ವ್ಯವಸ್ಥಾಕರುಗಳಾದ ಡಾ. ವಿ.ಆರ್. ರೂಪ, ಲಿಂಗರಾಜಮ್ಮ, ಎಲ್‌. ಲೋಕೇಶ್‌, ಕೆಪಿಟಿಸಿಎಲ್‌ ನೌಕರರ ಸಂಘದ ಸಂದೀಪ್, ಇಂಜಿನಿಯರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಚಿಕ್ಕಸಿದ್ದೇಗೌಡ, ರವಿಲಿಂಗಪ್ಪ, ಮಾದೇಶ್ ಇನ್ನೂ ಹಲವರಿದ್ದರು.

key words: Cescom, ‘gift’, Labour Day, cash less health card, Mysore

Cesscom gives ‘gift’ to employees on Labour Day