ಟೌನ್ ಹಾಲ್ ಬಳಿಯ ಕಾರ್ ಪಾರ್ಕಿಂಗ್ ಜಾಗ ನಾಳೆ ಉದ್ಘಾಟನೆ: ಮೇಯರ್ ಶಿವಕುಮಾರ್

ಮೈಸೂರು, ಅಕ್ಟೋಬರ್ 17, 2023 (www.justkannada.in): ಟೌನ್ ಹಾಲ್ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಕಾರ್ ಪಾರ್ಕಿಂಗ್ ನಾಳೆ ಉದ್ಘಾಟನೆಯಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಮಾಹಿತಿ ನೀಡಿದರು.

ನಗರದ ಟೌನ್ ಹಾಲ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಪಾರ್ಕಿಂಗ್ ಉದ್ಘಾಟನೆ ಮಾಡಲಿದ್ದಾರೆ. ಈ ಕಾಮಗಾರಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ನಾನು ಮೇಯರ್ ಆದ ಬಳಿಕ ಕಾಮಗಾರಿ ಕೈಗೆತ್ತಿಕೊಂಡಿದ್ದೇವು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ತ್ವರಿತಗತಿಯಲ್ಲಿ ಪಾರ್ಕಿಂಗ್ ತೆರೆಯಲು ಮುಂದಾಗಿದ್ದೇವು. ಈ ಪಾರ್ಕಿಂಗ್ ನಲ್ಲಿ ಕೇವಲ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಜೊತೆಗೆ ಇಲ್ಲಿಂದ ಸಯ್ಯಾಜಿರಾವ್ ರಸ್ತೆ, ಅರಸು ರಸ್ತೆ ಸೇರಿ ಇತರೆ ಕಡೆ ತೆರಳಲು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನ ನೀಡಲಾಗುತ್ತದೆ. ಕಾರುಗಳಿಗೆ ಗಂಟೆಗೆ 30 ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಒಂದು ದಿನಕ್ಕೆ 60ರೂ ನಿಗದಿ ಮಾಡಲಾಗಿದೆ. 2 ತಿಂಗಳ ಅವಧಿಗೆ ಪಾರ್ಕಿಂಗ್ ಟೆಂಡರ್ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ 2ವರ್ಷ ಅಥವಾ 3ವರ್ಷಕ್ಕೆ ಮತ್ತೆ ಟೆಂಡರ್ ಕರೆಯುತ್ತೇವೆ.  ಇದರ ಜೊತೆಗೆ ವಿವಿಧ ದಸರಾ ಕಾಮಗಾರಿಗಳಿಗೆ ಪಾಲಿಕೆಯಿಂದ 14ಕೋಟಿ ಖರ್ಚು ಮಾಡಲಾಗುತ್ತಿದೆ. ಜೊತೆಗೆ ಪ್ರತಿ ಬಾರಿಯಂತೆ ಈ ಬಾರಿಯೂ ಗೊಂಬೆಗಳನ್ನ ಕೂರಿಸುವುದಕ್ಕೆ ಉತ್ತೇಜನ ನೀಡಲು 25ಜನರಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುತ್ತದೆ ಎಂದು ಮೇಯರ್ ಶಿವಕುಮಾರ್ ಹೇಳಿದರು