300 ಅಡಿ ಪ್ರಪಾತಕ್ಕೆ ಬಿದ್ದ ಕಾರು: ದಂಪತಿಯ ಪ್ರಾಣ ರಕ್ಷಿಸಿದ ಆ್ಯಪಲ್ ಐ ಫೋನ್ 14ರ ಅಪಘಾತ ಪತ್ತೆ ಹಚ್ಚುವ ವೈಶಿಷ್ಟ್ಯತೆ.

ಯುಎಸ್‌ಎ, ಡಿಸೆಂಬರ್,23, 2022 (www.justkannada.in): ಐಫೋನ್ ವಿಶ್ವದ ಅತ್ಯುತ್ತಮ ಮೊಬೈಲ್ ಫೋನ್ ಎಂದೇ ಪ್ರಖ್ಯಾತಿಯನ್ನು ಹೊಂದಿದೆ. ಐಫೋನ್ 14ನೇ ಸರಣಿಯ ಮೊಬೈಲ್ ಫೋನ್‌ ಗಳಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗದಿದ್ದರೂ ಸಹ, ‘ವಾಹನ ಅಪಘಾತ ಪತ್ತೆ ಹಚ್ಚುವ ಹಾಗೂ ಸ್ಯಾಟ್‌ಲೈಟ್ ಮೂಲಕ ಎಸ್‌ ಓಎಸ್ ತುರ್ತು ಸಂದೇಶ’ವನ್ನು ಕಳುಹಿಸುವ ಗಮನಾರ್ಹ ಮೌಲ್ಯವರ್ಧಿತ ವೈಶಿಷ್ಟ್ಯತೆಯೊಂದನ್ನು ಸೇರ್ಪಡೆಗೊಳಿಸಲಾಯಿತು.

ಆ್ಯಪಲ್‌ ನ ಕೈಗಡಿಯಾರದಲ್ಲಿರುವ ‘ಜೀವ ಉಳಿಸುವ ಹೃದಯದ ಆರೋಗ್ಯ ನಿಗಾವಣಾ’ ವೈಶಿಷ್ಟ್ಯತೆಯಂತೆಯೇ, ಇತ್ತೀಚಿನ ಐಫೋನ್ 14ನೇ ಸರಣಿಯ ಮೊಬೈಲ್ ಫೋನ್‌ ಗಳು ಸರಿಯಾದ ಕಾರಣಗಳಿಗಾಗಿಯೇ ಸುದ್ದಿ ಮಾಡುತ್ತಿವೆ. ಇತ್ತೀಚೆಗೆ ನಡೆದ ಇಂತಹ ಒಂದು ಘಟನೆಯೊಂದರಲ್ಲಿ ಈ ಐಫೋನ್ 14 ಮೊಬೈಲ್‌ ನಲ್ಲಿ ಸೇರ್ಪಡೆಗೊಳಿಸಿರುವ ವಾಹನ ಅಪಘಾತ ಪತ್ತೆಹಚ್ಚುವ ವೈಶಿಷ್ಟ್ಯತೆಯು, ವಾಹನ ಅಪಘಾತಕ್ಕೀಡಾಗಿ ಜೀವಾಪಾಯದಲ್ಲಿದಂತಹ ಎರಡು ಜೀವಗಳನ್ನು ಉಳಿಸಿದೆ.

24 ವರ್ಷದ ಕ್ಲೋ ಫೀಲ್ಡ್ಸ್ ಹಾಗೂ 23 ವರ್ಷ ವಯಸ್ಸಿನ ಕ್ರಿಶ್ಚಿಯನ್ ಝೆಲಾಡ ಅವರು ಮಂಗಳವಾರದಂದು ಅಮೇರಿಕಾದ ಎರಡು ಪಥಗಳ ಏಂಜಿಲೀಸ್ ಕ್ರೆಸ್ಟ್ ಹೆದ್ದಾರಿಯಲ್ಲಿ ತಮ್ಮ ಕಾರಿನಲ್ಲಿ ಸಾಗುತ್ತಿದ್ದರು. ಅವರ ಹೈಂಡ್ಯೂ ಕಾರು ಇದ್ದಕ್ಕಿದ್ದಂತೆ ಮಂಕಿ ಕ್ಯಾನ್ಯಾನ್ ಎಂಬ ಸ್ಥಳದ ಬಳಿ ಅಪಘಾತಕ್ಕೀಡಾಗಿ ೩೦೦ ಅಡಿ ಆಳದ ಪ್ರಪಾತಕ್ಕೆ ಉರುಳಿತು. ತಲೆಕೆಳಗಾಗಿ ಉರುಳಿಬದ್ದ ಕಾರಿನ ಗಾಜುಗಳು ಪುಡಿಪುಡಿಯಾಗಿ ಬಾಗಿಲುಗಳು ಸಿಲುಕಿಕೊಂಡವು.

ಆದರೆ ಅದೃಷ್ಟವಶಾತ್ ಫೀಲ್ಡ್ಸ್ ಮತ್ತು ಝೆಲಾಡ ದಂಪತಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಲಿಲ್ಲ. ಆದರೆ ಅಷ್ಟು ಆಳದಲ್ಲಿ ಸಹಾಯ ಲಭ್ಯವಿಲ್ಲದೆ ಉಸಿರುಗಟ್ಟಿದಂತಾಯಿತು. ಆಗ ಈ ದಂಪತಿಗೆ ಹೊಳೆದಂತಹ ಮೊದಲ ಉಪಾಯವೆಂದರೆ ಸಹಾಯಕ್ಕಾಗಿ ತಮ್ಮ ಐಫೋನ್ ಅನ್ನು ಹುಡುಕುವುದು. ಅಪಘಾತಕ್ಕೀಡಾದ ಕಾರಿನ ಒಳಗೆ ಸಿಲುಕಿಕೊಂಡಿದ್ದ ದಂಪತಿಗಳು ಕೆಲ ಕಾಲ ಹುಡುಕಿದ ನಂತರ ಝೆಲಾಡಾಗೆ ಮುರಿದ ಪರಿಸ್ಥಿತಿಯಲ್ಲಿದ್ದಂತಹ ಐಫೋನ್ 14 ದೊರೆಯಿತು. ಆಕೆ ಆ ಫೋನ್ ಅನ್ನು ಕೆಲವು ವಾರಗಳ ಹಿಂದಷ್ಟೇ ಖರೀದಿಸಿದ್ದರಂತೆ. ಆಶ್ಚರ್ಯವೆನ್ನುವಂತೆ ಆ ಐಫೋನ್ ಆಕೆಯ ಕೈ ಸೇರುವ ವೇಳೆಗಾಗಲೇ ಕಾರು ಅಪಘಾತಕ್ಕೀಡಾಗಿದ್ದು, ಯಾವ ಸ್ಥಳದಲ್ಲಿದೆ ಎಂದು ಪತ್ತೆ ಹಚ್ಚಿ, ಬಳಿಯ ರಕ್ಷಣಾ ತಂಡಕ್ಕೆ ಎಸ್‌ಓಎಸ್ ತುರ್ತು ಕರೆಯನ್ನೂ ರವಾನಿಸಿತ್ತಂತೆ.

ಹಾಗಾಗಿ ಕೇವಲ ಅರ್ಧ ಗಂಟೆಯೊಳಗೆ ಸ್ಥಳೀಯ ಕೌಂಟಿ ರಕ್ಷಣಾ ತಂಡವು ೧೮ ಮೈಲುಗಳ ದೂರದಲ್ಲಿ ಅಪಘಾತಕ್ಕೀಡಾಗಿದ್ದಂತಹ ಕಾರಿನಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ಹೆಲಿಕಾಪ್ಟರ್ ಅನ್ನು ಕಳುಹಿಸಿತು. ಕಾರಿನೊಳಗೆ ಸಿಲುಕಿಕೊಂಡಿದ್ದ ಇಬ್ಬರನ್ನೂ ರಕ್ಷಿಸಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು, ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಆ್ಯಪಲ್ ಐಫೋನ್ ೧೪ ಮಾದರಿ ಮೊಬೈಲ್ ಫೋನ್‌ ನಲ್ಲಿ ಅಪಘಾತಕ್ಕೀಡಾದ ವಾಹನವನ್ನು ಪತ್ತೆ ಹೆಚ್ಚುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನ ಕಾರಿನೊಳಗಿನ ಕ್ಯಾಬಿನ್ ಒತ್ತಡದಲ್ಲಾಗುವ ಬದಲಾವಣೆಗಳನ್ನು ಪತ್ತೆ ಹಚ್ಚುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: car- fell – 300 feet –cliff-Apple iPhone 14 -saved – couple’s- life.