ಬೆಂಗಳೂರು, ಜನವರಿ, 14,2026 (www.justkannada.in): ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಇಂದು ನಡೆದ ವಿಶೇಷ ತುರ್ತು ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಸಚಿವ ಸಂಪುಟದಲ್ಲಿ ಮೂರು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಧಾನ ಸಭೆ ಹಾಗೂ ವಿಧಾನ ಅಧಿವೇಶನವನ್ನು 22-1- 2026 ರಂದು ಕರೆಯಲು ತೀರ್ಮಾನಿಸಲಾಗಿದೆ. 22-1-2026 ವಿಧಾನ ಮಂಡಲದ ಅಧಿವೇಶನದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರನ್ನು ಆಹ್ವಾನಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ರಾಜ್ಯಪಾಲರು ಮಾಡಲಿರುವ ಭಾಷಣವನ್ನು ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ. ವಿಬಿಜಿ ರಾಮ್ ಜಿ ಕಾಯ್ದೆಯ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಚರ್ಚೆ, ನೂತನ ಕಾಯ್ದೆಯು ಸಮಾಜದ ಮೇಲೆ ಬೀರಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಹಾಗೂ ಜಾಗೃತಿ ಮೂಡಿಸಲು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ ನೂತನ ಕಾಯ್ದೆಯ ಕುರಿತು ನಿರ್ಣಯ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ತಿಳಿಸಿದರು.
ಜನಹಿತ, ರಾಜ್ಯದ ಹಿತ ಕಾಪಾಡಲು ಸೂಕ್ತವಾದ ಹೆಜ್ಜೆ
ಜನಹಿತ, ರಾಜ್ಯದ ಹಿತ ಕಾಪಾಡಲು ಸೂಕ್ತವಾದ ಹೆಜ್ಜೆಯನ್ನು ಸರ್ಕಾರ ಇಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಮುಂದಾದರೆ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಸರ್ಕಾರ ಅಧಿವೇಶನ ಕರೆಯದೇ ಬಿಡಲು ಸಾಧ್ಯವಿಲ್ಲ. ಅರಿವು ಹಾಗೂ ಜಾಗೃತಿ ಮೂಡಿಸಲು ಹಾಗೂ ಕೇಂದ್ರ ಸರ್ಕಾರದ ಮೇಲೆ MNREGA ಕಾಯ್ದೆಯ ಮರುಸ್ಥಾಪನೆಗಾಗಿ ಒತ್ತಡ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ವಿಬಿಜಿ ರಾಮ್ ಜಿ: ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ.
ಇತರ ರಾಜ್ಯಗಳು ತಕರಾರು ತೆಗೆದಿಲ್ಲ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಚ್ .ಕೆ ಪಾಟೀಲ್ ಪಂಜಾಬ್, ತಮಿಳುನಾಡು ಸರ್ಕಾರ ಧ್ವನಿ ಎತ್ತಿವೆ ಎಂದರು. ಆರೇಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ಹಾಗೂ ಅಸಮಾಧಾನವನ್ನು ಹೊರಹಾಕಿವೆ ಎಂದರು.
MNREGA ಕಾಯ್ದೆಯಡಿ ಕೇವಲ ಕೆಲಸ ಕೊಡುವುದು ಮಾತ್ರವಲ್ಲ, ಕೆಲಸ ಕೊಡದೇ ಹೋಗಿದ್ದರೆ, ಫಲಾನುಭವಿ ಉದ್ಯೋಗ ಭತ್ಯೆಯನ್ನು ಕೇಳಬಹುದಾಗಿತ್ತು. ಪಂಚಾಯತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕು ಇತ್ತು. ಹೊಸ ಕಾಯ್ದೆಯಡಿ ಪಂಚಾಯತಿಗಳಿಗೆ ಅಧಿಕಾರವಿಲ್ಲ. ಪಂಚಾಯತಿಗಳ ವ್ಯಾಪ್ತಿಗೂ ಬರುವುದಿಲ್ಲ. ಕೇಂದ್ರ ಸರ್ಕಾರವೇ ಎಲ್ಲಿ ಕಾಮಗಾರಿ ನಡೆಯಬೇಕೆಂದು ನಿರ್ಧರಿಸಲಿದೆ. ಗ್ರಾಮೀಣ ಆಸ್ತಿಯನ್ನು ಸೃಷ್ಟಿಸಲೆಂದು ಬಳಸಲಾಗುತ್ತಿದ್ದ ಕಾರ್ಮಿಕರನ್ನು ರಸ್ತೆ, ಟನಲ್ ನಿರ್ಮಾಣಕ್ಕೆ ಗುತ್ತಿಗೆದಾರರ ಬಳಿ ಕೆಲಸ ಮಾಡಬೇಕು ಎಂದರು.
ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು
ಜನರ ಕೆಲಸದ ಹಕ್ಕನ್ನು ಕಿತ್ತುಕೊಂಡು, ಪಂಚಾಯತಿಗಳಿಗೆ ನಿರ್ಣಯದ ಅಧಿಕಾರವನ್ನು ಕಸಿದುಕೊಂಡು, ಪಂಚಾಯತಿಗಳಿಗೆ ನೀಡಲಾಗಿದ್ದ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೇಂದ್ರದಲ್ಲಿ ಅಧಿಕಾರವಿಟ್ಟುಕೊಳ್ಳುವುದು ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು ಕೊಡಲಾಗಿದೆ.
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ
ಈ ಎಲ್ಲಾ ಕಾರಣಗಳಿಂದಾಗಿ ಜನರನ್ನು ಜಾಗೃತಗೊಳಿಸಿ, ವಿಶೇಷ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಮಾಡಲಾಗಿದೆ ಎಂದರು. ಜನರ ನ್ಯಾಯಾಲಯಕ್ಕೆ ಮಾತ್ರವಲ್ಲದೆ ಕಾನೂನಿನ ನ್ಯಾಯಾಲಯದ ಮೊರೆ ಹೋಗಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆಹಚ್ಚುವುದು
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರಕ್ಕೆ ಸವಾಲು ಹಾಕಿರುವ ಬಗ್ಗೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಲೆಕ್ಕ ಪರಿಶೋಧನೆಯ ಉದ್ದೇಶವೇ ಅವ್ಯವಹಾರಗಳನ್ನು ಪತ್ತೆ ಹಚ್ಚಬೇಕೆನ್ನುವುದಾಗಿದೆ. ರಾಜ್ಯದಲ್ಲಿ ಈ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿದೆ. ಮೋದಿಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನರೇಗಾ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದರು. ಮುಂದಿನ 12 ವರ್ಷಗಳಲ್ಲಿ ಇದೇ ಯೋಜನೆಯನ್ನು ಹೊಗಳಿದ್ದರು ಎಂದರು.
ಜನರಿಗೆ ಅನ್ಯಾಯ ಮಾಡುವ ಕಾನೂನನ್ನು ಬಿಜೆಪಿ ಒಪ್ಪಬಾರದಿತ್ತು
ಹೋರಾಟದ ಅಂಗೇ ಬಿಜೆಪಿಯವರು ಮಾಡಿರುವುದು ರಾಜಕೀಯ ಆರೋಪ. ಇಂಥ ಕರಾಳ ಕಾನೂನು ರೂಪಿಸಿದಾಗ ಜನರ ಹಿತ ಕಾಪಾಡಬೇಕೆಂಬ ಉದ್ದೇಶವಿದ್ದರೆ , ಕಾಯ್ದೆಯ ಅನಾನುಕೂಲತೆಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿತ್ತು. ಜನರಿಗೆ ಅನ್ಯಾಯ ಮಾಡುವ ಈ ಕಾನೂನನ್ನು ಅವರು ಒಪ್ಪಬಾರದಿತ್ತು ಎಂದರು.
ವಿಬಿಜಿ ರಾಮ್ ಜಿ: ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ
ರಾಜಕೀಯವಾಗಿ ಕೆಲವರು ಕಾಯ್ದೆಯನ್ನು ವಿಬಿಜಿ ರಾಮ್ ಜಿ ಎನ್ನುತ್ತಾರೆ. ಇದರಲ್ಲಿ ರಾಮ್ ಎಲ್ಲಿಂದ ಬರುತ್ತದೆ? ಬರೆಯುವಾಗ, ಹೇಳುವಾಗ ತಪ್ಪು ಏಕೆ ಮಾಡುತ್ತಾರೆ? ಭಾವನಾತ್ಮಕ ಅಂಶದಡಿ ಆಶ್ರಯ ಪಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
Key words: Cabinet meeting, decisions, Minister, HK Patil







