ಬೆಂಗಳೂರು,ಅಕ್ಟೋಬರ್,17,2025 (www.justkannada.in): 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate) ಪಡೆಯುವುದರಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 190(2-ಎ) ರಡಿ ಸರ್ಕಾರಕ್ಕಿರುವ ಅಧಿಕಾರದಂತೆ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಲಾಗಿರುವ ನೆಲ + 2 ಅಂತಸ್ತು ಅಥವಾ Stilt + 3 ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate) ಪಡೆಯುವುದರಿಂದ ವಿನಾಯಿತಿ ನೀಡಲು ನಿರ್ಧರಿಸಿದೆ.
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಈ ಕೆಳಕಂಡಂತಿವೆ..
- 2025-26ನೇ ಸಾಲಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟು 2,79,688 ಸೀರೆಗಳನ್ನು ಘಟಕ ವೆಚ್ಚ ರೂ.500/- ರಂತೆ ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಸಲು ಐ.ಸಿ.ಡಿ.ಎಸ್ ಯೋಜನೆಯ 2025-26ನೇ ಸಾಲಿನ ಅನುದಾನದಿಂದ ರೂ.13.98 ಕೋಟಿಗಳ (ಕೇಂದ್ರದ ಪಾಲು ರೂ.7.91 ಕೋಟಿ ಹಾಗೂ ರಾಜ್ಯದ ಪಾಲು ರೂ.6.07 ಕೋಟಿ) ವೆಚ್ಚವನ್ನು ಭರಿಸಲು; ಸಚಿವ ಸಂಪುಟ ನಿರ್ಧರಿಸಿದೆ.
- 2025-26ನೇ ಸಾಲಿನಲ್ಲಿ ರಾಜ್ಯದ 69922 ಅಂಗನವಾಡಿ ಕೇಂದ್ರಗಳಿಗೆ ರೂ.1,500/- ಘಟಕ ವೆಚ್ಚದಲ್ಲಿ ಔಷಧ ಕಿಟ್‌ಗಳನ್ನು ಒದಗಿಸಲು, ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಒಟ್ಟು ರೂ.10.49 ಕೋಟಿ (ಕೇಂದ್ರದ ಪಾಲು ರೂ.5.93 ಕೋಟಿ ಮತ್ತು ರಾಜ್ಯ ಪಾಲು ರೂ.4.56 ಕೋಟಿಗಳ) ವೆಚ್ಚದಲ್ಲಿ ಕೆಟಿಪಿಪಿ ನಿಯಮಗಳ ಪ್ರಕಾರ ಇ-ಟೆಂಡರ್ ಮೂಲಕ ಖರೀದಿಸಲು; ಸಚಿವ ಸಂಪುಟ ನಿರ್ಣಯಿಸಿದೆ.
- ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಮಳವಳ್ಳಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಂಜುರಾದ ನಿವೇಶನದಲ್ಲಿ ತಿರುಗಾಡುವ ರಸ್ತೆ ನಿರ್ಮಾಣವಾಗಿರುವುದರಿಂದ, ಸದರಿ ಸಂಘಕ್ಕೆ ಬದಲಿ ನಿವೇಶನ ನೀಡಲು ಪ್ರಸ್ತಾಪಿಸಲಾಗಿತ್ತು. ಪೌರಾಡಳಿತ ಮತ್ತು ಹಜ್ ಸಚಿವರು ತಿಳಿಸಿರುವಂತೆ, ಕಂಡಿಕೆ-7 (ಎ)ರ ಪ್ರಸ್ತಾವನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಲು ಅಥವಾ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ಕಲಂ 175ರನ್ವಯ ಸದರಿ ನಿವೇಶನವನ್ನು ಮಳವಳ್ಳಿ ಪುರಸಭೆಯು ಭೂಸ್ವಾಧೀನಕ್ಕೆ ಒಳಪಡಿಸಿ ಪರಿಹಾರ ಧನ ನೀಡುವುದು ಎಂದು ಸಚಿವ ಸಂಪುಟ ನಿರ್ಣಯಿಸಿದೆ.
ನೈಋತ್ಯ ಮುಂಗಾರು 2025ರ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಹಿನ್ನೆಲೆಯಲ್ಲಿ ಸಂಭವಿಸಿದ ಸುಮಾರು 12.82 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಹೆಚ್ಚಿನ ದರಗಳಲ್ಲಿ Input Subsidy ಅನ್ನು ಪಾವತಿಸುವುದಕ್ಕೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಮಳೆಯಾಶ್ರಿತ ಬೆಳೆಗಳಿಗೆ ಚಾಲ್ತಿಯಲ್ಲಿರುವ SDRF/NDRF ಮಾನದಂಡಗಳ ಪ್ರಕಾರ ಪ್ರತಿ ಹೆಕ್ಟೇರ್ ಗೆ ರೂ.8,500/- ಅನ್ನು 2 ಹೆಕ್ಟೆರ್‌ಗೆ ಸೀಮಿತಗೊಳಿಸಿದ್ದು, ಮುಖ್ಯಮಂತ್ರಿಗಳು ಘೋಷಿಸಿದಂತೆ ಇನ್ಪುಟ್ ಸಬ್ಸಿಡಿಯ ದರವನ್ನು ಪ್ರತಿ ಹೆಕ್ಟೇರ್ ಗೆ ರೂ.17,000/- ರಂತೆ 2 ಹೆಕ್ಟೆರ್‌ಗೆ ಸೀಮಿತಗೊಳಿಸಿ ಹೆಚ್ಚಿಸಲು, ನೀರಾವರಿ ಬೆಳೆಗಳಿಗೆ ಹೆಕ್ಟೇರ್‌ಗೆ ರೂ.17,000/- ಇದ್ದ ಮೊತ್ತವನ್ನು ಪ್ರತಿ ಹೆಕ್ಟೇರ್‌ಗೆ ರೂ.25,500/- ಅನ್ನು 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಹೆಚ್ಚಿಸಲಾಗಿದೆ. ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ಇದ್ದ ರೂ.22,500/- ಗಳನ್ನು ಪ್ರತಿ ಹೆಕ್ಟೇರ್‌ಗೆ ರೂ.31,000/- ಅನ್ನು 2 ಹೆಕ್ಟೇರ್ ಗೆ ಸಬ್ಸಿಡಿ ದರವನ್ನು ಸೀಮಿತಗೊಳಿಸಿ ಹೆಚ್ಚಿಸಲಾಗಿದೆ. ಇದಕ್ಕಾಗಿ 1090 ಕೋಟಿ ರಾಜ್ಯದ ಬೊಕ್ಕಸದಿಂದ ಭರಿಸಬೇಕಾಗುತ್ತದೆ.
- ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಬೆಂಗಳೂರು ನಗರ, ಸೂರ್ಯನಗರ-4ನೇ ಹಂತ ಬಡಾವಣೆಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯಡಿ ಇಂಡ್ಲವಾಡಿ ಗ್ರಾಮದ 75 ಎಕರೆ ವಿರ್ಸ್ತಿರ್ಣದ ಜಮೀನಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೇಟ್ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣದ ಯೋಜನೆಯನ್ನು ಕರ್ನಾಟಕ ಗೃಹ ಮಂಡಳಿಯಿಂದ ಅನುಷ್ಠಾನಗೊಳಿಸುವ ಯೋಜನಾ ಮೊತ್ತ ರೂ.2350.00 ಕೋಟಿಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಮತ್ತು ವಿಸ್ತೃತವಾದ ಯೋಜನಾ ವರದಿಯ ನಂತರ ತೀರ್ಮಾನ ಕೈಗೊಳ್ಳಲು ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸಲು ತಿಳಿಸಲಾಗಿದೆ.
- ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲು ಅವಶ್ಯವಿರುವ ಉಪಕರಣಗಳನ್ನು ರೂ.54.92 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
- ಮೈಸೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ತಲಾ ರೂ.100.00 ಕೋಟಿಗಳ ಅನುದಾನದಲ್ಲಿ ಕೈಗೊಳ್ಳಲು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
- ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವ್ಯಾಸ್ಕ್ಯುಲರ್ ಶಾಸ್ತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಮುಖ್ಯ ಶಾಸ್ತ್ರಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು ಒಟ್ಟು ರೂ.26.09 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ.
- ವೃಷಭಾವತಿ ವ್ಯಾಲಿ ಸಂಸ್ಕರಣಾ ಘಟಕದ ಮರುಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ (ಯೋಜನೆಯ ಲಿಫ್ಟ್-4) ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ರೂ.650.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
ಸರ್ಕಾರದ / ಸರ್ಕಾರಿ ಸಾಮ್ಯದ / ನಿಗಮ/ಮಂಡಳಿಗಳ ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರೆ ಆಸ್ತಿ / ಜಾಗಗಳು ನಾಗರೀಕರ ಸದ್ಬಳಕೆಗೆ ನಿರ್ಧಿಷ್ಟಪಡಿಸಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಬವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಸಾರ್ವಜನಿಕ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವುದು ಸಹ ಅವಶ್ಯವಾಗಿರುತ್ತದೆ.
* ರಾಜ್ಯದಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು / ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಇತ್ಯಾದಿಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಗೆ ಮುಂಚಿತವಾಗಿ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ ( Tresspass ) ಎಂದುಪರಿಗಣಿಸಲ್ಪಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ / ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ / ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿರುತ್ತದೆ. ಯಾವುದೇ ಚಟುವಟಿಕೆಗಳು ಸಾರ್ವಜನಿಕರಿಗೆ ಅನಾನುಕೂಲವಾಗು ವುದಾದಲ್ಲಿ ಹಾಗೂ ಸಂಬಂಧಿಸಿದ ಸಂಸ್ಥೆಗಳ ಆವರಣ / ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧೈಯಕ್ಕೆ ಧಕ್ಕೆ ಉಂಟಾಗುವುದಾದಲ್ಲಿ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿಯನ್ನು ನಿರಾಕರಿಸತಕ್ಕದ್ದು.
* ಈ ಹಿನ್ನೆಲೆಯಲ್ಲಿ ಸರ್ಕಾರದ/ಸರ್ಕಾರಿ ಸಾಮ್ಯದ ಶಾಲಾ – ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ – ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.
* ಉದ್ಯಾನವನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳು – ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
* ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ / ಸ್ಥಳಗಳು – ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು / ಪೊಲೀಸ್ ಅಧೀಕ್ಷಕರು.
* ಮೇಲೆ ನಮೂದಿಸಿದ ಇಲಾಖೆ, ಸಕ್ಷಮ ಪ್ರಾಧಿಕಾರಗಳು ಇಂತಹ ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನ ಬದ್ದವಾದ ನಾಗರಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗದAತೆ ಎಚ್ಚರಿಕೆ ವಹಿಸಲು ಅನುವಾಗುವಂತೆ ಸೂಕ್ತ, ವಿವರವಾದ ಮಾರ್ಗಸೂಚಿಯನ್ನು ಆಯಾ ಇಲಾಖೆಗಳು ಹೊರಡಿಸತಕ್ಕದ್ದು ಎಂದು ಸಚಿವ ಸಂಪುಟ ನಿರ್ಣಯಿಸಿದೆ.
Key words: Cabinet meeting, Many, decisions