ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಮಾಧುಸ್ವಾಮಿ…

ಬೆಂಗಳೂರು,ಅ,3,2019(www.justkannada.in):  ಆಶಾಕಾರ್ಯಕರ್ತೆಯರಿಗೆ 500 ರೂ ಗೌರವ ಧನ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 6ಸಾವಿರ ರೂನಿಂದ 6,500 ರೂಗೆ ಹೆಚ್ಚಳ ಮಾಡಲಾಗುತ್ತದೆ. ಇದಕ್ಕೆ ವಾರ್ಷಿಕ 25 ಕೋಟಿ ರೂ ವೆಚ್ಚ ಬೀಳಲಿದೆ ಎಂದು ತಿಳಿಸಿದರು.

ಹಾಗೆಯೇ ಹಾವೇರಿ ಜಿಲ್ಲೆಯ ರಟ್ಟಹಳ್ಳಿ ಗ್ರಾಮಪಂಚಾಯತಿ ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ ಗ್ರಾಮ ಪಂಚಾಯಿತಿಯನ್ನ ಪಟ್ಟಣ ಪಂಚಾಯಿತಿ ಸ್ಥಾನಮಾನ ನೀಡಲು ತೀರ್ಮಾನ ಮಾಡಲಾಗಿದೆ. ರಾಜ್ಯದ 30 ನವಜಾತ ಶಿಶುಕೇಂದ್ರಗಳ ಉನ್ನತೀಕರಣ ಮಾಡಲಾಗುತ್ತದೆ. ಇದಕ್ಕೆ 16.95 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದರು.

ಜತೆಗೆ ಬಾಗಲಕೋಟೆ ಜಮಖಂಡಿಯಲ್ಲಿ 100 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ 20.90 ಕೋಟಿ ಅನುದಾನ, 12 ಕೋಟಿ ರೂ ವೆಚ್ಚದಲ್ಲಿ ರಕ್ತನಿಧಿಗಳನ್ನ ಮೇಲ್ದರ್ಜೆಗೇರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ನಡುವೆ ಗಾಂಧಿ ಜಯಂತಿ ಪ್ರಯುಕ್ತ 20 ಶಿಕ್ಷಾರ್ಹ ಕೈದಿಗಳ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

Key words: cabinat-meeting-law minister-JC madhuswamy-information