ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದು ಸಿಎಂ ಸಿದ್ದರಾಮಯ್ಯ – ಬಿವೈ ವಿಜಯೇಂದ್ರ ಟೀಕೆ

ಬೆಂಗಳೂರು, ಜೂನ್ 28,2024 (www.justkannada.in): ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದು ಸಿಎಂ ಸಿದ್ದರಾಮಯ್ಯ. ಈಗ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದೆ ಅಲ್ವಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿದ್ದರಾಮಯ್ಯನವರೇ ಸಚಿವರ ಮೂಲಕ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಎತ್ತಿಸಿದ್ದಾರೆ. ಜನರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವುದು ಬಿಟ್ಟು ಡಿಸಿಎಂ ಡಿಕೆ ಶಿವಕುಮಾರ್​​​ರನ್ನು ಬಲಿ ಕೊಡಲು ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದಾರೆ ಎಂದರು.

ಈ ಸರ್ಕಾರದಲ್ಲಿ ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ, ಸಚಿವರು ಹೊಡೆದಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಈಗ ಇರುವುದು ಹೋರಾಟದ ದಿನಗಳು. ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ಹೇಳಿದರು.

ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗುತ್ತಾರೆ ಎಂಬುದು ಮುಖ್ಯ ಅಲ್ಲ. ಯಾರೇ ಅಭ್ಯರ್ಥಿ ಆದರೂ ಜೆಡಿಎಸ್, ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: BY Vijayendra, criticized, CM Siddaramaiah, DCM