ಸಂಸದರ ಮನವಿಗೆ ಸ್ಪಂದನೆ: ಹನೂರು ನೀರಾವರಿ ಯೋಜನೆಗೆ ಬಜೆಟ್ ನಲ್ಲಿ 490 ಕೋಟಿ ಘೋಷಣೆ!

ಚಾಮರಾಜನಗರ,ಮಾರ್ಚ್,6,2026 (www.justkannada.in):  ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು, ಉಡುತೊರೆಹಳ್ಳ ಯೋಜನೆಯಡಿ 490 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ.

ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರು ಲೋಕಸಭಾ ಚುನಾವಣಾ  ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು, ಕೌದಳ್ಳಿ, ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸದರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳು ಕುಡಿಯುವ ನೀರಿಗೆ ತೊಂದರೆ ಇರುವ ಬಗ್ಗೆ ಮತ್ತು ಅಂತರ್ಜಲ ಮಟ್ಟವು ವ್ಯಾಪಕವಾಗಿ ಕುಸಿದಿರುವ ಬಗ್ಗೆ ಜನರಿಂದ ವ್ಯಾಪಕವಾದ ಮನವಿ ಬಂದಿದ್ದ ಹಿನ್ನಲೆಯಲ್ಲಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲೇಬೇಕೆಂದು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದರು.

ಜೊತೆಗೆ ಹನೂರು ಭಾಗದಲ್ಲಿ ನೀರಾವರಿ ಸಮಸ್ಯೆಯಿಂದ ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ತೊಂದರೆಯ ಬಗ್ಗೆಯೂ ಸಹ ಸಂಸದ ಸುನೀಲ್ ಬೋಸ್  ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು.

ಈ ಮನವಿಗೆ ಪೂರಕವಾಗಿ ಇದೀಗ ಕುರಟ್ಟಿ ಹೊಸೂರು, ಕೌದಳ್ಳಿ, ಮಾರ್ಟಳ್ಳಿ ಸೇರಿದಂತೆ ಹನೂರು ತಾಲ್ಲೂಕಿನ ಸುಮಾರು 9 ಗ್ರಾಮ ಪಂಚಾಯತಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಭಾಗದ ಕೆರೆಗಳು ಮತ್ತು ಚೆಕ್ ಡ್ಯಾಂ ಅನ್ನು ತುಂಬಿಸುವ ನಿಟ್ಟಿನಲ್ಲಿ  ಸಿಎಂ ಸಿದ್ದರಾಮಯ್ಯ ಉಡುತೊರೆಹಳ್ಳ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಯೋಜನೆಗಾಗಿ 490 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.

ಈ ಐತಿಹಾಸಿಕವಾದ ನಿರ್ಧಾರದಿಂದ ಹನೂರು ತಾಲ್ಲೂಕಿನ ರೈತರು ಮತ್ತು ಜನ ಸಾಮಾನ್ಯರಿಗೆ ಅನುಕೂಲ ಆಗಲಿದ್ದು, ಇಂತಹ ಮಹತ್ವದ ಯೋಜನೆಯು ಜಾರಿಯಾಗಲು ವ್ಯವಸ್ಥಿತವಾಗಿ ಶ್ರಮಿಸಿದ ಸಂಸದ ಸುನಿಲ್ ಬೋಸ್ ಅವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Key words: 490 crores, announced, budget, Hanur Irrigation Project