ಕೆಎಸ್ ಒಯುನಲ್ಲಿ ಶಿಕ್ಷಕರ ದಿನಾಚರಣೆಗೆ ಅಧ್ಯಾಪಕರಿಂದ ಬಹಿಷ್ಕಾರ.

ಮೈಸೂರು,ಸೆಪ್ಟಂಬರ್,5,2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಕ್ರಮ ಮತ್ತು ಆರ್ಥಿಕ ಸ್ಥಿತಿಯನ್ನು ಶೋಚನೀಯಗೊಳಿಸಿರುವ ಆರೋಪದ ಮೇಲೆ ವಿವಿಯ ಅಧ್ಯಾಪಕರು ಇಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನ ಬಹಿಷ್ಕರಿಸಿದ್ದಾರೆ.

ಕೆಎಸ್ ಒಯು ಬಳ್ಳಾರಿ ಕೇಂದ್ರ ಸ್ಥಾನದಲ್ಲಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ್ದ ಸುದ್ದಿ ನಿನ್ನೆ  ವೈರಲ್ ಆಗಿತ್ತು.  ಪರೀಕ್ಷಾರ್ಥಿಗಳು ಪುಸ್ತಕ ಮತ್ತು ಮೊಬೈಲ್ ನೋಡಿಕೊಂಡೇ  ಕಾಪಿ ಮಾಡುತ್ತಿದ್ದುದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಹಾಗೆಯೇ ಕೆಎಸ್ ಒಯುವಿನಲ್ಲಿ ಅಕ್ರಮ , ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದು ವಿವಿಯನ್ನು ಮುಚ್ಚುವ ಸ್ಥಿತಿಗೆ ತಂದಿದ್ದು ಈ ಹಿನ್ನೆಲೆಯಲ್ಲಿ ಇಂದು ಕೆಎಸ್ ಒಯು ಕಾವೇರಿ ಸಭಾಂಗಣದಲ್ಲಿ ನಡೆಯುವ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಅಧ್ಯಾಪಕರು ಗೈರುಹಾಜರಾಗುವ ಮೂಲಕ ಕಾರ್ಯಕ್ರಮ ಬಹಿಷ್ಕರಿಸುವಂತೆ ಕರಾಮುವಿ ಖಾಯಂ ಅಧ್ಯಾಪಕರ ಸಂಘದ ಅಧ್ಯಕ್ಷರು ಸೂಚಿಸಿದ್ದರು.

ವಿವಿಯ ಶಿಕ್ಷಕ ವರ್ಗದವರಿಗೆ ಇದುವರೆಗೆ Increment  ಮಾಡಿಲ್ಲ. DA ಯನ್ನು ತುಂಬಾ ತಡವಾಗಿ ಹೋರಾಟದ ಮುಖಾಂತರ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಹಾಗೆಯೇ  ಯುಜಿಸಿ ನಿಯಮದಂತೆ ಅಧ್ಯಯನ ಕೇಂದ್ರಗಳಲ್ಲಿ ಪ್ರವೇಶಾತಿಯನ್ನು ನಿಲ್ಲಿಸುವಂತೆ ಅಧ್ಯಾಪಕರ ಸಂಘದ ವತಿಯಿಂದ ಮಾರ್ಚ್ ತಿಂಗಳಲ್ಲಿ ಪತ್ರ ಬರೆದರೂ ಸಹ ಒಂದು ಬಾರಿಯೂ ಯಾರನ್ನು ಆಹ್ವಾನಿಸಿ ಇದಕ್ಕೆ ಪ್ರತಿಕ್ರಿಯಿಸಿಲ್ಲ,

ಜೊತೆಗೆ ವಿವಿಯ ಪರೀಕ್ಷೆಗಳಲ್ಲಿ ಎಗ್ಗಿಲ್ಲದೆ ಮಾಸ್ ಕಾಪಿ ಮಾಡಲು ಅವಕಾಶ ಮಾಡಿಕೊಟ್ಟು ವಿವಿಯ ಹೆಸರನ್ನು ಹಾಳು ಮಾಡಲಾಗುತ್ತಿದೆ.  ವೇದಿಕೆಯ ಮೇಲೆ ಉಪದೇಶಗಳನ್ನು ಹಾಗೂ ವಚನಗಳನ್ನು ಹೇಳಿ ವಾಸ್ತವದಲ್ಲಿ ತದ್ವಿರುದ್ಧವಾಗಿ ನಡೆದುಕೊಳ್ಳುವ ವಿವಿಯ ಆಡಳಿತ ವರ್ಗದವರಿಗೆ ಪ್ರತಿರೋಧವಾಗಿ  ಇಂದು ನಡೆಯುವ ಶಿಕ್ಷಕರ ದಿನಾಚರಣೆಯಿಂದ ದೂರ ಉಳಿದು ತಮ್ಮ ಇತರ ಶೈಕ್ಷಣಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರಾಮುವಿ ಖಾಯಂ ಅಧ್ಯಾಪಕರ ಸಂಘದ ಅಧ್ಯಕ್ಷ  ಡಾ.ಜಗದೀಶ್ ಬಾಬು ಹೆಚ್.ಕೆ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕೆಎಸ್ ಒಯು ಅಧ್ಯಾಪಕರು ಗೈರಾಗುವ ಮೂಲಕ ಇಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನ ಬಹಿಷ್ಕರಿಸಿದ್ದಾರೆ.

Key words: Boycott – teachers day -celebration – KSOU- faculty