ಗಡಿ ವಿವಾದ ಸದನದಲ್ಲಿ ಪ್ರಸ್ತಾಪ: ಮಹಾರಾಷ್ಟ್ರ ನಡೆ  ವಿರೋಧಿಸಿ ಖಂಡನಾ ನಿರ್ಣಯ ಸರ್ವಾನುಮತದಿಂದ ಅಂಗೀಕಾರ.

ಬೆಳಗಾವಿ,ಡಿಸೆಂಬರ್,22,2022(www.justkannada.in):  ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಇಂದು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಮಹಾರಾಷ್ಟ್ರ ನಡೆಯನ್ನ ವಿರೋಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಖಂಡನಾ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಯಿತು.

ಗಡಿ ವಿವಾದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ,   ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದಿದ್ದ ಮಹಾರಾಷ್ಟ್ರ ಸಂಸದ ಸಂಜಯ ರಾವತ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀರನ್ನ ಬಿಡೋದಿಲ್ಲ. ಚೈನಾ ರೀತಿಯಲ್ಲಿ ದಾಳಿ ಮಾಡೋದಾಗಿ ಹೇಳ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ ಅನ್ನೋದನ್ನ ಅವರು ಮರೆತಿರಬಹುದು. ನಾಚಿಕೆ ಆಗಬೇಕು ಅವರಿಗೆಲ್ಲಾ ಈ ರೀತಿ ಹೇಳಿಕೆ ನೀಡಿರೋದಕ್ಕೆ. ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಿ. ಅವರಿಗೆ ನಾಗರೀಕತೆಯ ಭಾಷೆಯಲ್ಲಿ ಹೇಳಬೇಕು ಎಂದು ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್  ಯಡಿಯೂರಪ್ಪ, ಅವರು ಏನೇ ಹೇಳಿಕೆ ನೀಡಿರಬಹುದು. ಅವರದ್ದೇ ಭಾಷೆಯಲ್ಲಿ ನಾವು ಹೇಳುವ ಅವಶ್ಯಕತೆ ಇಲ್ಲ.ಈಗಾಗಲೇ ಕೇಂದ್ರ ಗೃಹಸಚಿವರು ಸಭೆ ಮಾಡಿ ಸ್ಪಷ್ಟಪಡಿಸಿದ್ದಾರೆ. ಅವರದ್ದೇ ರೀತಿ ಹೇಳಿದ್ರೆ, ಅವರಿಗೂ ನಮಗೂ ವ್ಯತ್ಯಾಸ ಏನು ಇಲ್ಲ ಎಂದರು.

ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ , ಮುಂಬೈ ಆಡಳಿತ ಸೌರಾಷ್ಟ್ರದಿಂದ ಹಿಡಿದು ಕರ್ನಾಟಕದವರೆಗೂ ಇತ್ತು. ಕಾವೇರಿಯಿಂದ ಗೋದಾವರಿವರೆಗೂ ಇತ್ತು. ಇತಿಹಾಸ ತೆಗೆದು ನೋಡಿದ್ರೆ ವಿಜಯನಗರ ಸಾಮ್ರಾಜ್ಯ ವಿಸ್ತಾರವಾಗಿತ್ತು. ರಾಜ್ಯ ಪುನರ್ ವಿಂಗಡಣೆಯಾದ ಮೇಲೆ ಮಹಾರಾಷ್ಟ್ರ ಕ್ಯಾತೆ ತೆಗೆಯುವ ಕೆಲಸ ಮಾಡಿದೆ. ರಾಜ್ಯ ವಿಂಗಡಣೆ ಮಾಡುವಾಗ ಪರ ವಿರೋಧ ಇರಲಿದೆ. ನಮ್ಮ ಗಡಿ ರಾಜ್ಯಗಳನ್ನ ನೋಡಿದಾಗ ಮಹಾರಾಷ್ಟ್ರ ಬಹಳ ಕ್ಯಾತೆ ತೆಗೀತಿದ್ದಾರೆ. ಗಡಿ ವಿಚಾರವಾಗಿ ರಾಜಕಾರಣ ಮಾಡ್ತಿರೋದು ನೋಡಿದ್ದೇವೆ. ರಾಜಕಾರಣ ಮಾಡಬೇಕು ಅಂತಲೇ ಹೀಗೆ ಮಾಡಬಾರದು. ಮಹಾಜನ್ ವರದಿ ಬಂದ ಮೇಲೂ ತಗಾದೆ ತೆಗೆದಿದೆ. ವಿಪಿ ನಾಯಕ್ ಅವರು ಸಿಎಂ ಆಗಿದ್ದಾಗಲೇ ತಿರಸ್ಕಾರ ಆಗಿದೆ ಎಂದರು.

ಸಂಸತ್‌ನಲ್ಲಿ ಬಂದು ಚರ್ಚೆಯಾದ್ರೂ, ನಿರ್ಣಯವಾಗಿಲ್ಲ. ಇದು ವಿವಾದವೇ ಇಲ್ಲ. ಎರಡೂ ಕಡೆ ಶಾಂತಿಯುತವಾಗಿ ವ್ಯವಹಾರ ನಡೆಯುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಆದಾಗ ನೌಕರರಿಗೆ ಚಾಯ್ಸ್ ನೀಡಿದ್ರು. ಶಾಂತಿಯುತವಾಗಿ ಕರ್ನಾಟಕಕ್ಕೆ ಬರುವವರು ಬಂದಿದ್ದಾರೆ.  ಅಲ್ಲಿಗೆ ಹೋಗುವವರು ಹೋಗಿದ್ದಾರೆ. 1970ರಲ್ಲಿ ಗಡಿ ವಿವಾದ ದೊಡ್ಡದಾಗಿದ್ದು, ಉಲ್ಲಂಘನೆ ಕೂಡ ಆಗಿದೆ. ಕಾನೂನಾತ್ಮಕವಾಗಿ ಸೇರಿರೊದ್ದರಿಂದ ಯಾರೂ ಏನು ಮಾಡಲಾಗಿಲ್ಲ.ಮುಂದೆಯೂ ಏನೂ ಮಾಡಲಾಗಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ 1972ರಲ್ಲಿ ಐದು ಸ್ಥಾನ ಗೆದ್ದಿತ್ತು. ಆದ್ರೆ ಜನ ಈಗ ತಿರಸ್ಕರಿಸಿದ್ದಾರೆ. ಈಗಲೂ ಅಧಿವೇಶನ ನಡೆಯುವ ಸಮಯದಲ್ಲಿ ಒಂದು ಪ್ರೊಸೆಷನ್ ಹೋಗ್ತಾರೆ. ಸಿಎಂ ಭೇಟಿ ಮಾಡಿ ಬೆಳಗಾವಿ ಪಡೆದೇ ಪಡೀತೀವಿ ಅಂತ ಹೇಳಿಕೆ ಕೊಡ್ತಾರೆ. ಜನರ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡಲಾಗ್ತಿದೆ. ಕರ್ನಾಟಕ ರಾಜ್ಯೋತ್ಸವ ನಡೆಯುವಾಗ ಬ್ಲಾಕ್ ಡೇ ಆಚರಿಸ್ತಾರೆ ಅಷ್ಟೇ ಇವರ ಕೆಲಸ ಎಂದು ಟೀಕಿಸಿದರು.

ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅದನ್ನ ಕೈಗೆತ್ತಿಕೊಂಡಿಲ್ಲ‌. ಸುಪ್ರೀಂ ಕೋರ್ಟ್ ಯಾವಾಗಲೂ ನಿರ್ವಹಣೆ ಮಾಡೋದನ್ನ ಮೊದಲು ಪರಿಗಣಿಸ್ತಾರೆ. ಅವರ ಕೇಸ್ ಬಂದಿದೆ ಅಂತ ಒಂದು ಸಭೆ ಮಾಡಿ‌ ಕ್ಯಾತೆ ತೆಗೆಯುವ ಕೆಲಸ ಮಾಡಿದ್ರು. ಅದಕ್ಕೆ ಸ್ಪಷ್ಟ ಉತ್ತರ ನೀಡಿದ್ದೇನೆ. ಅವರ ರಿಯಾಕ್ಷನ್ ಕೊಟ್ರು, ನಾವೂ ರಿಯಾಕ್ಷನ್ ನೀಡಿದ್ದೇವೆ. ಅತ್ಯಂತ ಕೀಳು ಭಾಷೆಯಲ್ಲಿ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ, ನನ್ನ ಬಗ್ಗೆ ಮಾತನಾಡಿದ್ದಾರೆ. NCP ಶಾಸಕ ಜಯಂತ್ ಪಾಟೀಲ್ ಸದನದಲ್ಲಿ ಮಾತನಾಡಿದ್ದಾರೆ. ಕರ್ನಾಟಕದ ಸಿಎಂಗೆ ಸೊಕ್ಕು ಬಂದಿದೆ ಅಂತ ಹೇಳಿದ್ದಾರೆ.  ನೀರಾವರಿ, ಯೋಜನೆ ವಿಚಾರದಲ್ಲಿ ಚರ್ಚೆ ಮಾಡಿದ್ದಾರೆ. ಅವರು ಬಳಸಿರೋ ಭಾಷೆ ಒಪ್ಪುವಂತದ್ದಲ್ಲ. ಜವಾಬ್ದಾರಿ ಸ್ಥಾನದ ವ್ಯಕ್ತಿ ಇನ್ನೊಂದು ರಾಜ್ಯದ ಸಿಎಂ ಬಗ್ಗೆ ಮಾತನಾಡಿದ್ದಾರೆ. ಇದು ಆ ಮನುಷ್ಯನ ಸಂಸ್ಕೃತಿ, ಅಪ್ರಬದ್ಧತೆ ತೋರಿಸುತ್ತದೆ. ನಾವು ಇದನ್ನ ಖಂಡಿಸುತ್ತೇವೆ. ಅಷ್ಟೇ ಅಲ್ಲದೆ ನಾವು ನೀರನ್ನೇ ಕೊಡೋದಿಲ್ಲ ಅಂತ ಹೇಳಿದ್ದಾರೆ. ನೀರು, ಗಾಳಿ ಹಿಡಿದಿಡ್ತೇವೆ ಅನ್ನೋದು ಪುರಾಣ ಕಾಲದಿಂದಲೂ ನೋಡಿದ್ದೇವೆ ಯಾರಿಗೂ ಸಾಧ್ಯವಿಲ್ಲ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಕ್ಕೆ ಕೃಷ್ಣಾ ಹರಿಯುತ್ತದೆ. ಇದು ರಾಷ್ಟ್ರೀಯ ಆಸ್ತಿ, ಯಾರಿಗೂ ಮೀಸಲಿಲ್ಲ. ಕೃಷ್ಣಾ ನೀರು ಕರ್ನಾಟಕದಲ್ಲಿ ಅತಿ ಹೆಚ್ಚು ಶೇಖರಣೆ ಆಗೋದು ಮತ್ತು ಹರಿಯುತ್ತದೆ. ಕೋಯ್ನಾ ಡ್ಯಾಮ್ ತುಂಬದಿದ್ರೂ, ನೀರು ಬಿಡುವ ಕೆಲಸ ಮಾಡ್ತಾರೆ. ಅಲ್ಲಿ ಸಮಸ್ಯೆ ಆಗುತ್ತದೆ ಅನ್ನೋದಕ್ಕೆ. ಅವರು ಏನೂ ಮಾಡೋದಕ್ಕೆ ಆಗಲ್ಲ, ಏನು ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಂಜಯ್ ರಾವತ್ ಒಬ್ಬ ದೇಶದ್ರೋಹಿ. ಅವನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದೇ ರೀತಿ ಮಾತನಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ತೇವೆ. ನಮಗೆ ಅದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತೆ. ಆದರೆ ನಾವು ಸುಮ್ಮನೆ ಹೇಳಲ್ಲ. ಆದರೆ ಸುಮ್ಮನಿರುತ್ತೇವೆ ಎಂದಲ್ಲ. ನಮಗೂ ಕಾನೂನು ‌ಹೋರಾಟ ಗೊತ್ತಿದೆ. ಹೇಗೆ ಹಿಮ್ಮೆಟ್ಟಬೇಕೆಂಬುದೂ ಗೊತ್ತಿದೆ. ಕನ್ನಡ ಮಕ್ಕಳೂ ಅತ್ಯಂತ ಸಿದ್ದರಿದ್ದಾರೆ ಎಂದು ಸಂಜಯ್ ರಾವತ್ ವಿರುದ್ಧ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಕೆಲವರು ಇರೋದು ಇಷ್ಟಪಡ್ತಿಲ್ಲ. ಅಂತವರನ್ನ ಉಳಿಸಿಕೊಳ್ಳೋಕೆ ನೋಡಿ. ಕಳೆದ ೭೦ ವರ್ಷಗಳಿಂದ ಅದನ್ನ ನೀವು ಮಾಡಿಲ್ಲ. ಮೊದಲು ಅದನ್ನ ನೀವು ಮಾಡಿಕೊಳ್ಳಿ. ಇಬ್ಬರು ಸಚಿವರು ಇಲ್ಲಿಗೆ ಬರ್ತೇವೆ ಅಂದರು. ಅದರ ಅವಶ್ಯಕತೆಯೇ ಇಲ್ಲ. ನಾವು ಬೇಡವೆಂದೆವು. ಡಿಸೆಂಬರ್ 6 ರಂದು ಅಂಬೇಡ್ಕರ್ ಕಾರ್ಯಕ್ರಮಕ್ಕೆ ಬರ್ತೇವೆ ಅಂದರು. ನಮ್ಮ ಸಿಎಸ್ ಪತ್ರವನ್ನ ಬರೆದು ಲಾ ಆಂಡ್ ಆರ್ಡರ್ ಕುಸಿಯುತ್ತೆ ಬೇಡ ಅಂದರು. ಅದಕ್ಕೂ ಅವರು ಬೇರೆ ರೀತಿಯಲ್ಲಿ ಹೇಳಿಕೆ ಕೊಟ್ಟರು ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

ನಮಗೂ ಸೊಲ್ಲಾಪುರದಿಂದ ಕರೆ ಬಂದಿದೆ. ಅಕ್ಕಲಕೋಟೆಯಿಂದಲೂ ನಮಗೆ ಆಹ್ವಾನ ಬಂದಿವೆ. ನಾವು ಅಲ್ಲಿಗೆ ಹೋಗಬಹುದಿತ್ತಲ್ಲ. ಆದರೆ ನಾವು ಅಲ್ಲಿಗೆ ಹೋಗಲಿಲ್ಲ. ಹಾಗಾಗಿ ಈ ರೀತಿಯ ಪ್ರಯತ್ನ ಕೈಬಿಡಬೇಕು. ಮಹಾರಾಷ್ಟ್ರದ ಎಲ್ಲಾ ನಾಯಕರ ವರ್ತನೆಯನ್ನ ಈ ಸದನ ಖಂಡಿಸುತ್ತದೆ. ಗಡಿಭಾಗದ ಜನರ ರಕ್ಷಣೆ ಮಾಡುತ್ತೇವೆ. ಅಲ್ಲಿನ ಅಭಿವೃದ್ಧಿಗೂ ಕ್ರಮ ಜರುಗಿಸ್ತೇವೆ. ಸುಪ್ರೀಂ ಕೇಸಿನ ಹೋರಾಟಕ್ಕೆ ರೋಹ್ಟಗಿ ತಂಡ ರಚಿಸಿದ್ದೇವೆ. 10 ಲಕ್ಷ ಪುಟಗಳ ಸಾಕ್ಷಗಳನ್ನೂ ರೆಡಿ ಮಾಡಿಕೊಂಡಿದ್ದೇವೆ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಮುಂದುವರೆಯುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: border  dispute – against -Maharashtra –CM Bommai